Advertisement

ಕಾಂಗ್ರೆಸ್‌ “ಯುವ’ಕಹಳೆ; ಇಂದು ಬೆಳಗಾವಿಯಲ್ಲಿ “ಯುವ ಕ್ರಾಂತಿ’ಗೆ ರಾಹುಲ್‌ ಗಾಂಧಿ ಚಾಲನೆ

11:55 PM Mar 19, 2023 | Team Udayavani |

ಬೆಳಗಾವಿ: ಭಾರತ್‌ ಜೋಡೋ ಯಾತ್ರೆಯ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ರಾಜ್ಯಕ್ಕೆ ಆಗಮಿಸುತ್ತಿದ್ದು, ಪಕ್ಷದ ಚುನಾವಣ ಕಹಳೆ ಮೊಳಗಿಸಲಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಲ್ಲದೆ ಕೇಂದ್ರ ಸರಕಾರದ ಸಚಿವರ ದಂಡೇ ರಾಜ್ಯದ ವಿವಿಧೆಡೆ ಬಿಜೆಪಿ ಪರ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದೆ. ಮೋದಿ ಹಾಗೂ ಅಮಿತ್‌ ಶಾ ರಾಜ್ಯಕ್ಕೆ ಪದೇಪದೆ ಭೇಟಿ ನೀಡುತ್ತಿರುವುದರ ನಡುವೆಯೇ ರಾಹುಲ್‌ ಆಗಮನ ಕಾಂಗ್ರೆಸ್‌ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ರಾಹುಲ್‌ ಸ್ವಾಗತಕ್ಕೆ ಕುಂದಾನಗರಿ ಸಿದ್ಧವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಹರಿಪ್ರಸಾದ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುಜೇìವಾಲ ಸಹಿತ ಎಲ್ಲ ನಾಯಕರು ಬೆಳಗಾವಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ರಾಜ್ಯದ ಮತದಾರರಲ್ಲಿ, ವಿಶೇಷವಾಗಿ ಯುವ ಸಮುದಾಯದಲ್ಲಿ ವಿಶ್ವಾಸ ಮತ್ತು ಭರವಸೆ ಮೂಡಿಸಬೇಕೆಂಬ ಉದ್ದೇಶದಿಂದ ಗಡಿನಾಡು ಬೆಳಗಾವಿಯಲ್ಲಿ “ಯುವ ಕ್ರಾಂತಿ’ ಎಂಬ ವಿನೂತನ ಸಮಾವೇಶಕ್ಕೆ ರಾಹುಲ್‌ ಚಾಲನೆ ನೀಡಲಿದ್ಧಾರೆ.

2 ಲಕ್ಷ ಜನ ಸೇರುವ ನಿರೀಕ್ಷೆ
ನಗರದ ಸಿಪಿಎಡ್‌ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಮಾವೇಶ ನಡೆಯಲಿದೆ. ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯ ಆಕರ್ಷಣೆಯಾಗಲಿದ್ದಾರೆ. ಸುಮಾರು ಎರಡು ಲಕ್ಷ ಜನರ ನಿರೀಕ್ಷೆ ಮಾಡಲಾಗಿದೆ. ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಬಳಿಕ ರಾಹುಲ್‌ ಗಾಂಧಿ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದು, ಅದನ್ನು ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಮಹಾಧಿವೇಶನ ನಡೆದ ಸ್ಥಳ ಬೆಳಗಾವಿಯಿಂದಲೇ ಆರಂಭಿಸಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ ಬೆಳಗಾವಿಯಲ್ಲಿ ಅವರ ಮೊದಲ ಸಾರ್ವಜನಿಕ ಸಭೆ ನಡೆಯುತ್ತಿದ್ದು, ಕಾಂಗ್ರೆಸ್‌ ಇದಕ್ಕೆ ವಿಶೇಷ ಮಹತ್ವ ನೀಡಿದೆ. ಯುವ ಕ್ರಾಂತಿ ಸಮಾವೇಶದ ಹಿನ್ನೆಲೆಯಲ್ಲಿ ಬೆಳಗಾವಿ ನಗರದೆಲ್ಲೆಡೆ ಬೃಹತ್‌ ಪ್ರಮಾಣದ ಕಟೌಟ್‌ಗಳು, ಪಕ್ಷದ ನಾಯಕರ ಬ್ಯಾನರ್‌ ಮತ್ತು ಕಾಂಗ್ರೆಸ್‌ ಬಾವುಟಗಳು ರಾರಾಜಿಸುತ್ತಿವೆ.

ಎರಡು ಘೋಷಣೆಗೆ ಸಿದ್ಧತೆ
ಈ ಸಮಾವೇಶದಲ್ಲಿ ಯುವ ಸಮುದಾಯಕ್ಕಾಗಿ ಎರಡು ಘೋಷಣೆಗಳನ್ನು ಪ್ರಕಟಿಸಲಿರುವ ರಾಹುಲ್‌ ಗಾಂಧಿ, ಇದೇ ಸಂದರ್ಭದಲ್ಲಿ ತಮ್ಮ ಭಾರತ್‌ ಜೋಡೋ ಪಾದಯಾತ್ರೆಯ ಉದ್ದೇಶ ಮತ್ತು ಅನುಭವ ಹಂಚಿಕೊಳ್ಳಲಿದ್ದಾರೆ. ರ್ಯಾಲಿಯಲ್ಲಿ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಸಹಿತ ಏಳು ಜಿಲ್ಲೆಗಳ ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಟಿಕೆಟ್‌ ಆಕಾಂಕ್ಷಿಗಳು, ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಮಾವೇಶದ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಸುಗಮ ಸಂಚಾರ ವ್ಯವಸ್ಥೆಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next