Advertisement

ಇಂದು ಬೆಂಗಳೂರಿಗೆ ಹೈದರಾಬಾದ್‌ ಸವಾಲು

11:00 AM Apr 25, 2017 | Harsha Rao |

ಬೆಂಗಳೂರು: ಐಪಿಎಲ್‌ ಇತಿಹಾಸದಲ್ಲೇ ಭಾರೀ ಅವಮಾನಕರ ರೀತಿಯಲ್ಲಿ ಕೋಲ್ಕತಾ ನೈಟ್‌ ರೈಡರ್ ವಿರುದ್ಧ ಸೋಲುಂಡ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಮಂಗಳವಾರ ಎದುರಿಸಲಿದೆ. ಇಡೀ ಐಪಿಎಲ್‌ ತಂಡಗಳಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ಆರ್‌ಸಿಬಿ ಐಪಿಎಲ್‌ ಇತಿಹಾಸದಲ್ಲೇ ಕನಿಷ್ಠ 49 ರನ್‌ಗೆ ಆಲೌಟಾಗಿ ಆಘಾತಕ್ಕೊಳಗಾಗಿದೆ. ಇದರಿಂದ ಹೊರಬರಬೇಕಾದರೆ ತಂಡ ಮಂಗಳವಾರ ಸಿಡಿಯಲೇಬೇಕಾಗಿದೆ.

Advertisement

ಆರ್‌ಸಿಬಿಗೆ ಬ್ಯಾಟಿಂಗ್‌, ಬೌಲಿಂಗ್‌ ತಲೆ ನೋವು: ಆರ್‌ಸಿಬಿ ಬ್ಯಾಟಿಂಗ್‌ ವಿಭಾಗ ಮೇಲ್ನೋಟಕ್ಕೆ ಬಲಿಷ್ಠವಾಗಿದೆ.ಕೊಹ್ಲಿ, ಎಬಿಡಿ, ಗೇಲ್‌, ವಾಟ್ಸನ್‌, ಕೇದಾರ್‌ರಂತಹ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ. ಇವರಲ್ಲಿ ಯಾರಾದರೂ ಒಬ್ಬರು ಸಿಡಿದರೆ ಎದುರಾಳಿ ಬೌಲರ್‌ಗಳಿಗೆ ತಡೆಯುವುದು ಕಷ್ಟವಾಗಬಹುದು. ಆದರೆ, ಕೋಲ್ಕತಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ವಿಭಾಗ ಹೀನಾಯವಾಗಿ ಪತನಗೊಂಡಿದ್ದನ್ನು ನೋಡಿದರೆ ಒಟ್ಟಾರೆ ಆರ್‌ಸಿಬಿಯ ಬ್ಯಾಟಿಂಗ್‌ ವಿಭಾಗವನ್ನೇ ಪ್ರಶ್ನೆ ಮಾಡುವಂತಾಗಿದೆ.

ಜತೆಗೆ ಬೌಲಿಂಗ್‌ ವಿಭಾಗ ಕೂಡ ದುರ್ಬಲವಾಗಿದೆ. ಟೈಮಲ್‌ ಮಿಲ್ಸ್‌ರಿಂದ ಮ್ಯಾಜಿಕ್‌ ನಡೆಯುತ್ತಿಲ್ಲ. ಶ್ರೀನಾಥ್‌ ಅರವಿಂದ್‌ ವಿಕೆಟ್‌ ಪಡೆಯುತ್ತಿಲ್ಲ. ಇರುವುದರಲ್ಲಿ ಸ್ಪಿನ್‌ ಬೌಲರ್‌ಗಳಾದ ಚಹಲ್‌, ಬದ್ರಿ ಮೇಲೆ ಸ್ವಲ್ಪ ಭರವಸೆ ಇಡಬಹುದು. ತವರಿನಲ್ಲಿ ಆರ್‌ಸಿಬಿ ಬಲಿಷ್ಠ ಎನ್ನಲಾಗುತ್ತಿದೆಯಾದರೂ ಈ ಆವೃತ್ತಿಯಲ್ಲಿ ಅದು ನಿಜವಾಗಿಲ್ಲ.

ಬೆಂಗಳೂರಿನ ಪಿಚ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಬೆಂಗಳೂರು ಗೆಲುವು ಗಳಿಸಿತ್ತು. ಆನಂತರ ನಡೆದ ಪಂದ್ಯದಲ್ಲಿ ಮುಂಬೈ ಹಾಗೂ ಪುಣೆ ವಿರುದ್ಧ ಸೋಲು ಕಂಡಿತ್ತು. ಇದೀಗ 4ನೇ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಲ್ಲಿ ಗೆದ್ದು ಬೆಂಗಳೂರು ಮತ್ತೆ ಎದ್ದು ನಿಲ್ಲುತ್ತದೆಯೆ? ಮತ್ತೆ ಎದುರಾಳಿಗಳಿಗೆ ನಡುಕ ಹುಟ್ಟಿಸುವಂತಹ ಆಟ
ಪ್ರದರ್ಶಿಸಲಿದೆಯೇ? ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ. ಹೈದರಾಬಾದ್‌ ಅಪಾಯಕಾರಿ: ಸನ್‌ರೈಸರ್ ಹೈದರಾಬಾದ್‌ ತಂಡ ಬೆಂಗಳೂರಿಗೆ ಪ್ರಬಲ ಹೊಡೆತವನ್ನು ನೀಡಲು ಸಜ್ಜಾಗಿದೆ. ಸನ್‌ರೈಸರ್ ಒಟ್ಟು 7 ಪಂದ್ಯಗಳನ್ನು ಆಡಿದೆ. 4 ಪಂದ್ಯದಲ್ಲಿ ಗೆಲುವು ಕಂಡಿದೆ. 3 ಪಂದ್ಯದಲ್ಲಿ ಸೋಲು ಕಂಡಿದೆ. ಗೆದ್ದಿರುವ 4 ಪಂದ್ಯಗಳು ತವರಿನಲ್ಲೇ
ಎನ್ನುವುದು ವಿಶೇಷ. ತವರು ಬಿಟ್ಟು ಹೊರಗಡೆ ಆಡಿದ ಪಂದ್ಯದಲ್ಲಿ ಹೈದರಾಬಾದ್‌ ಸೋಲು ಕಂಡಿದೆ. ಹೀಗಾಗಿ ಬೆಂಗಳೂರು ವಿರುದ್ಧದ ಪಂದ್ಯ ರೈಸರ್ಗೆ ಸವಾಲಾಗಬಹುದು. ಡೇವಿಡ್‌ ವಾರ್ನರ್‌, ಧವನ್‌, ವಿಲಿಯಮ್ಸನ್‌, ಹೆನ್ರಿಕ್ಸ್‌, ಹೂಡಾ, ರಶೀದ್‌ ಖಾನ್‌ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಇದು ಸನ್‌ರೈಸರ್ಗೆ ಪ್ಲಸ್‌ ಪಾಯಿಂಟ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next