Advertisement

ಇಂದು ಹರಿಹರ-ಶಿವಮೊಗ್ಗ ರಸ್ತೆ, ಹೊನ್ನಾಳಿ ಬಂದ್‌…

01:24 PM Jun 19, 2017 | |

ದಾವಣಗೆರೆ: ರೈತರ ಸಂಪೂರ್ಣ ಸಾಲ ಮನ್ನಾ, 131ಕೋಟಿ ವೆಚ್ಚದ ಹೊನ್ನಾಳಿ-ನ್ಯಾಮತಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೂ. 19 ರಂದು ಸೋಮವಾರ ಹೊನ್ನಾಳಿ ಬಂದ್‌ ನಡೆಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು. 

Advertisement

ಹೊನ್ನಾಳಿ ಬಂದ್‌ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 6 ರಿಂದ 24 ಗಂಟೆಗಳ ಕಾಲ ಹರಿಹರ-ಶಿವಮೊಗ್ಗ ರಸ್ತೆ ಬಂದ್‌ ಸಹ ನಡೆಯಲಿದೆ. ರೈತರ ಸಾಲ ಮನ್ನಾ ವಿಷಯ ಒಳಗೊಂಡಂತೆ ಎಲ್ಲಾ ವಿಚಾರದಲ್ಲಿ ವಿಳಂಬ, ಜನ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ತಕ್ಷಣಕ್ಕೆ ಬೇಡಿಕೆ ಈಡೇರಿಸಬೇಕು. 

ಇಲ್ಲದಿದ್ದಲ್ಲಿ, 2 ನೇ ಹಂತದ ಹೋರಾಟದ ಭಾಗವಾಗಿ ನ್ಯಾಮತಿ ಬಂದ್‌ ನಡೆಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರೈತರು ಮತ್ತು ತಾಲೂಕಿನ ಜನರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಡೆಸುತ್ತಿರುವ ಹೊನ್ನಾಳಿ ಬಂದ್‌ಗೆ ಸಹಕರಿಸುವಂತೆ ಸಾರ್ವಜನಿಕರು, ಅಂಗಡಿ, ಹೋಟೆಲ್‌, ಇತರೆ ವಾಣಿಜ್ಯ ಸಂಸ್ಥೆಗಳು, ಖಾಸಗಿ ಬಸ್‌ ಮಾಲಿಕರಿಗೆ ಮನವಿ ಮಾಡಲಾಗಿದೆ.

ಪರೀಕ್ಷೆ ಬರೆಯುವಂತಹ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಯಾರಿಗೆ ಆಗಲಿ ತೊಂದರೆ ಉಂಟು ಮಾಡಬೇಕು ಉದ್ದೇಶ ಇಲ್ಲ. ಅತ್ಯಂತ ಶಾಂತಯುತವಾದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಾಲ್ಕು ವರ್ಷದಲ್ಲಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ.

ಸತತ 2-3 ವರ್ಷಗಳ ಭೀಕರ ಬರದಿಂದ ರೈತರು ಸಮಸ್ಯೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಸಾಲಮನ್ನಾಕ್ಕೆ ಕೇಂದ್ರದತ್ತ ಬೊಟ್ಟು ಮಾಡದೆ ಮಹಾರಾಷ್ಟ್ರ, ಉತ್ತರ ಪ್ರದೇಶ ಮಾದರಿಯಲ್ಲಿ ಸಂಪನ್ಮೂಲ ಕ್ರೂಢೀಕರಿಸಿಕೊಂಡು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದೇ ಹೋದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗಿನ ರಾಜಕೀಯ ಇಚ್ಛಾಶಕ್ತಿ ತೋರಿ, ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಅಧಿಕಾರವಧಿಯಲ್ಲಿ ಹೊನ್ನಾಳಿ ತಾಲೂಕಿನ 50 ಕೆರೆಗಳನ್ನು ತುಂಬಿಸುವ 325 ಕೋಟಿ ವೆಚ್ಚದ ಕಾಮಗಾರಿ ಡಿಪಿಆರ್‌ ಆಗಿತ್ತು. ಆದರೆ, ಈವರೆಗೆ ಕೆಲಸ ಪ್ರಾರಂಭವಾಗಿಲ್ಲ.

131 ಕೋಟಿ ವೆಚ್ಚದ ಹೊನ್ನಾಳಿ-ನ್ಯಾಮತಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಬೇಕು ಎಂದರು. ಹೊನ್ನಾಳಿ ಪಟ್ಟಣದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಬೀದಿಯಲ್ಲೇ ಚರಂಡಿ ನೀರು ಹರಿಯುತ್ತಿದೆ. ಬಸ್‌ ನಿಲ್ದಾಣ ಕೊಚ್ಚೆಯಂತಾಗಿದೆ. ಒಳ ಚರಂಡಿ ಕಾಮಗಾರಿ ಮುಗಿಸಬೇಕು.

ಹಿಂದಿನಂತೆಯೇ ಶಿವಮೊಗ್ಗ ಪಟ್ಟಣದಲ್ಲಿ ಬಸ್‌ ಸಂಚಾರ ವ್ಯವಸ್ಥೆ ಮುಂದುವರೆಸುವುದು ಒಳಗೊಂಡಂತೆ ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನಿವಾರ್ಯವಾಗಿ ಬಂದ್‌ ನಡೆಸಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ  ಉತ್ತರಿಸಿದರು. ಜಿಲ್ಲಾ ಪಂಚಾಯತ್‌ ಸದಸ್ಯ ಸಿ. ಸುರೇಂದ್ರನಾಯ್ಕ, ಮುಖಂಡರಾದ ನರಸಗೊಂಡನಹಳ್ಳಿ ರಘು, ಅರಕೆರೆ ನಾಗರಾಜ್‌, ತಿಮ್ಮೇನಹಳ್ಳಿ ಚಂದಪ್ಪ, ಮಾರುತಿನಾಯ್ಕ ಇತರರು ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next