Advertisement

ಇಂದು ವಿಶ್ವ ಅಪ್ಪಂದಿರ ದಿನ: ಪ್ರೇರಣೆಯ ಬೆಳಕು ಅಪ್ಪ…

01:26 AM Jun 21, 2020 | Sriram |

ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಪ್ರಕಾರ 1910ರಲ್ಲಿ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯಂದಿರ ದಿನಾಚರಣೆ ಪ್ರಾರಂಭಿಸಿದ್ದು, ಪ್ರತಿವರ್ಷ ಜೂನ್‌ ತಿಂಗಳ ಮೂರನೇ ರವಿವಾರ “ವಿಶ್ವ ಅಪ್ಪಂದಿರ ದಿನ’ ಎಂದು ಆಚರಿಸಲಾಗುತ್ತದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ ಮತ್ತು ಗೌರವ ಸಲ್ಲಿಸಲಾಗುತ್ತದೆ.

Advertisement

ಬದುಕಿಗೆ ಅರ್ಥ, ಸಮಾಜದಲ್ಲಿ ಅಸ್ತಿತ್ವವನ್ನು ಒದಗಿಸಿಕೊಟ್ಟವರು ಅಪ್ಪ. ಈ ಅಪ್ಪ ಎಂಬ ಅಪರೂಪದ ಮನುಷ್ಯ ಅಮ್ಮನಂತೆ ಸಲುಗೆಯಿಂದ ಇರುವುದು ಕಡಿಮೆ. ಹೀಗಾಗಿ ಅಪ್ಪನಿಗೆ ಸಲ್ಲಬೇಕಾದ ಪ್ರೀತಿಯ ಪಾಲು ಕೂಡ ಅಮ್ಮನತ್ತವೇ ಹರಿದು ಬಿಡುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಶಿಸ್ತಿನ ಸಿಪಾಯಿಯ ಪಾತ್ರ ನಿರ್ವಹಿಸುವ ಆತ ಜೀವನದುದ್ದಕ್ಕೂ ಕೊಂಚ ಗಡುಸಾಗಿಯೇ ಕಾಣಿಸಿಕೊಳ್ಳುತ್ತಾನೆ. ಆದರೆ ಅವನಲ್ಲಿಯೂ ಆಕಾಶದಷ್ಟು ಪ್ರೀತಿ, ವಾತ್ಸಲ್ಯ, ಮಮತೆಯಿರುತ್ತದೆ. ಅವುಗಳನ್ನು ನಮ್ಮ ಮೂಲಕ ನನಸು ಮಾಡಿಕೊಳ್ಳುವ ಪ್ರಯತ್ನ ಆತನನ್ನು ಕೊಂಚ ಕಠಿನನನ್ನಾಗಿ ಮಾಡುತ್ತದೆ ಎನ್ನುತ್ತಾರೆ ಭಾರತೀಯ ನೌಕಾಪಡೆಯಲ್ಲಿ ವಿಶೇಷ ಅಧಿಕಾರಿಯಾಗಿರುವ ಮಂಗಳೂರಿನ ಹುಡುಗಿ ದಿಶಾ ಅಮೃತ್‌. ಅಪ್ಪಂದಿರ ದಿನಾಚರಣೆಯ ಪ್ರಯುಕ್ತ ತನ್ನ ತಂದೆಯೊಂದಿಗಿನ ಒಡನಾಟವನ್ನು ಅವರು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಕನಸುಗಳ ರೂವಾರಿ
ಅಪ್ಪ ಕಷ್ಟದಿಂದ ಮೇಲೆ ಬಂದವರು. ಅವರಿಗೆ ಸೇನೆ ಸೇರಬೇಕು ಎಂಬ ಆಸೆ ಇತ್ತು. ಆದರೆ ಅವಕಾಶ ಸಿಕ್ಕಿರಲಿಲ್ಲ. ಅದನ್ನು ನನ್ನ ಮೂಲಕ ನನಸು ಮಾಡಿಕೊಂಡರು. ನನ್ನ ಮನದಿಂಗಿತವನ್ನು ಅರಿತು ಪೂರಕ ವಾತಾವರಣ ಕಲ್ಪಿಸಿಕೊಟ್ಟರು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಅವರಿಗೆ ನಂಬಿಕೆ ಇತ್ತು. ಒಂದಿಷ್ಟೂ ಒತ್ತಡ ಹೇರದೆ, ನನ್ನ ಕನಸುಗಳಿಗೆ ಬೆಂಗಾವಲಾಗಿ ನಿಂತ ನನ್ನ ಬದುಕಿನ ರೂವಾರಿ ಅವರು.

ಸ್ಫೂರ್ತಿಯ ಚಿಲುಮೆ
ನನ್ನ ಅಪ್ಪ ನನ್ನ ಗುರು. ಶಿಕ್ಷಣಕ್ಕೆ ಅವರು ಮಹತ್ವ ಕೊಟ್ಟದ್ದರಿಂದ ನನ್ನ ಬದುಕು ಹಸನಾಗಿದೆ. ನೀನು ಗುರುತಿಸಲ್ಪಡುವುದಕ್ಕಾಗಿ ಏನನ್ನಾದರೂ ಮಾಡುವುದಕ್ಕಿಂತ ದೇಶದ ಹೆಸರನ್ನು ಉತ್ತುಂಗಕ್ಕೆ ಒಯ್ಯುವ ಮಹತ್ಕಾರ್ಯದ ಮೂಲಕ ಗುರುತಿಸಿಕೋ ಎಂದು ಸದಾ ಪ್ರೇರೇಪಿಸುತ್ತಿದ್ದರು. ರಾಷ್ಟ್ರಕ್ಕಾಗಿ ನಾನು ಏನು ಮಾಡಬಲ್ಲೆ ಎಂಬ ಮೌಲ್ಯಯುತ ಮನೋಭಾವ ಬೆಳೆಸಿಕೊಂಡಿರುವುದಕ್ಕೆ ಅವರೇ ಕಾರಣ. ಅದರ ಫಲವಾಗಿ ಇಂದು ನಾನು ಈ ಸ್ಥಾನಕ್ಕೆ ಏರಿದ್ದೇನೆ. ಇದು ಅವರ ಯಶಸ್ಸು, ನಾನು ನೆಪ ಮಾತ್ರ.

ಸಣ್ಣಪುಟ್ಟ ಸಂಗತಿಗಳ ಖುಷಿ
ನನ್ನ ನಿರೀಕ್ಷೆಗಳು ಇವು- ಅದಕ್ಕೆ ತಕ್ಕಂತೆ ನೀನು ಇರಬೇಕು; ನಾನು ಹೇಳಿದ್ದನ್ನೇ ನೀನು ಮಾಡಬೇಕು ಎಂದೆಲ್ಲ ಬೇಲಿ ಹಾಕಿದವರಲ್ಲ ಅಪ್ಪ. ತನ್ನ ನಿಷ್ಕಲ್ಮಶ ಪ್ರೀತಿಯಿಂದ ಪ್ರತಿ ಹಂತದಲ್ಲಿಯೂ ಹೆಗಲು ಕೊಟ್ಟಿದ್ದಾರೆ. ವಿದ್ಯಾಭ್ಯಾಸದಲ್ಲೂ ಅಷ್ಟೇ, ಎಂದಿಗೂ ರ್‍ಯಾಂಕಿನ ಹಿಂದೆ ಬೀಳುವಂತೆ ನಮ್ಮನ್ನು ಬೆಳೆಸಲೇ ಇಲ್ಲ. ಸಣ್ಣಪುಟ್ಟ ಸಂಗತಿಗಳಲ್ಲಿಯೂ ಖುಷಿ ಕಾಣಬೇಕು ಎಂಬ ಬದುಕಿನ ಸಾರವನ್ನ ಮನದಟ್ಟು ಮಾಡಿಸುತ್ತಿದ್ದರು.

Advertisement

ಅಪ್ಪ ಎಂದರೆ ಜೀವನ
ನನಗೆ ಅಪ್ಪ ಎಂದ ಕೂಡಲೇ ಜೀವನ ನೆನಪಾಗುತ್ತದೆ. ಏಕೆಂದರೆ ಈ ಜೀವ -ಜೀವನ ಅವರು ಕೊಟ್ಟದ್ದು. ಹೆಣ್ಣು ಎಂದು ನಾಲ್ಕು ಗೋಡೆಗಳ ನಡುವಿಗೆ ಸೀಮಿತವಾಗಿಸದೆ ನೀನು ಸಾಧಿಸಬಲ್ಲೆ ಎಂಬ ಧೈರ್ಯವನ್ನು ಅವರು ಕೊಟ್ಟದ್ದರ ಫಲವೇ ನನ್ನ ಯಶಸ್ಸು.
– ದಿಶಾ ಅಮೃತ್‌,
ನೌಕಾದಳ ಅಧಿಕಾರಿ

ಅಪ್ಪನನ್ನು ಅಭಿನಂದಿಸಿ ಫೋಟೋ ಕಳುಹಿಸಿ
ಅಮ್ಮನೊಂದಿಗಿನ ಮಕ್ಕಳ ಸಂಬಂಧದಂತೆಯೇ ಅಪ್ಪನೊಂದಿಗಿನ ಬಾಂಧವ್ಯವೂ ಅನನ್ಯ. ರವಿವಾರ ವಿಶ್ವ ಅಪ್ಪಂದಿರ ದಿನ. ನೀವು ನಿಮ್ಮ ತಂದೆಯನ್ನು ಅಂದು ಅಭಿನಂದಿಸಿ, ಆಲಂಗಿಸಿ, ಗೌರವಿಸಿ. ಆ ಸವಿ ಕ್ಷಣದ ಫೋಟೋವನ್ನು ಒಂದು ಸಣ್ಣ ಶೀರ್ಷಿಕೆಯೊಂದಿಗೆ ನಮಗೆ
ವಾಟ್ಸ್‌ಆ್ಯಪ್‌ ಮಾಡಿ.
ನಿಮ್ಮ ಹೆಸರು, ಊರು,
ಬರೆದು ರವಿವಾರ (ಜೂ. 21)
ಸಂಜೆ 4 ಗಂಟೆಯೊಳಗೆ
ವಾಟ್ಸ್‌ಆ್ಯಪ್‌ ಮಾಡಿ. ಆಯ್ದವುಗಳನ್ನು ಪ್ರಕಟಿಸುತ್ತೇವೆ.
7618774529

Advertisement

Udayavani is now on Telegram. Click here to join our channel and stay updated with the latest news.

Next