Advertisement

ಜವಾಹರಲಾಲ್ ನೆಹರು ಸ್ಮರಣೆ; ನ.14 ಮಕ್ಕಳ ದಿನಾಚರಣೆ,  ಬಾಲ್ಯದ ದಿನವದು ಚಿರಂತನವಾಗಿರಲಿ

01:17 PM Nov 14, 2020 | |

ಬಾಲ್ಯವೆಂದರೆ ಹಾಗೆ ಏನೂ ತಿಳಿಯದ ಮುಗ್ಧ ಸ್ಥಿತಿ. ಮಣ್ಣಿನಲ್ಲಿ ಮನೆ ಮಾಡಿ, ಎಲೆಗಳನ್ನು ಕತ್ತರಿಸಿ ಪದಾರ್ಥ ತಯಾರಿಸಿ ಅಮ್ಮನ ಸೀರೆ ಉಟ್ಟು ಟೀಚರ್‌ ನಂತೆ ವರ್ತಿಸುವ ಆ ದಿನ ಬಹುಶಃ ಮತ್ತೆ ಮತ್ತೆ ನೆನೆದರೆ ಎಲ್ಲರಿಗೂ ಮನದಲ್ಲಿ ಮಂದಹಾಸ ಮೂಡುತ್ತದೆ. ನೆನಪುಗಳು ಅತಿ ಸುಂದರ, ಬೆಳೆದಂತೆ ನಮ್ಮ ಬುದ್ಧಿ ವಿಕಸನ ಹೊಂದಿ ನೆನಪುಗಳ ವ್ಯೂಹದಲ್ಲಿ ಅದು ಅವಿಸ್ಮರಣೀಯ ಇತಿಹಾಸವಾಗಿ ಉಳಿದುಬಿಡುತ್ತದೆ. ಹೋದ ಹೋದಂತೆ ಅದು ಮಸುಕಾದರೂ ನಮ್ಮ ಅರಿವಿನ ಸಂಕೋಲೆಗಳಿಂದ ದೂರ ನಡೆಯುವುದಿಲ್ಲ.

Advertisement

ಇದೆಲ್ಲ ಮಕ್ಕಳ ದಿನಾಚರಣೆ ಹತ್ತಿರ ಬರುತ್ತಿದ್ದಂತೆ ಒಕ್ಕರಿಸಿ ಬಂದು ಬೀಡುತ್ತವೆ. ಶಾಲೆ ಕಾಲೇಜುಗಳಲ್ಲಿ ಹುಟ್ಟು ಹಬ್ಬದಂತೆ ಆಚರಿಸುವ   ಹಬ್ಬ ಇಂದಿನ ಮಕ್ಕಳನ್ನು ನೋಡುವಾಗ ಹಂಬಲಿಸಿ ಮರೆಯಾಗುತ್ತದೆ. ತಪ್ಪೋ ಸರಿಯೋ, ಇಂದಿನ ಮಕ್ಕಳು ಇಂತಹ ಬಾಲ್ಯದ ನೆನಪುಗಳನ್ನು ಅನುಭವಿಸುತ್ತಿಲ್ಲ ಎಂಬ ಅಪವಾದ ಆಗಾಗ ಕೇಳಿಬರುತ್ತದೆ. ಬದಲಾಗಿ ವೀಡಿಯೋ ಗೇಮ್‌, ಟಿ.ವಿ., ಮೊಬೈಲ್‌ನಲ್ಲಿಯೇ ಸಮಯ ಕಳೆಯುತ್ತಾರೆ. ಅವರಿಗೆ ಮನೆಯ ಮುಂದೆ ಅರಳುವ ಹೂವಿನ ಗಿಡ, ಪಕ್ಕದ ಮನೆಯ ಬದಿಯಲ್ಲಿರುವ ಮರ ಯಾವುದು ಎಂಬ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಅದಕ್ಕಾಗಿ ಮಕ್ಕಳ ಬಾಲ್ಯವನ್ನು ನೆನಪಿಸಲು ಹಾಗೂ ಜಾಗೃತಿ ಮೂಡಿಸಲು ಮಕ್ಕಳ ದಿನಾಚರಣೆಯ ನೆಪದಲ್ಲಿ ಅನಿವಾರ್ಯ ಕಾರ್ಯವಾಗಬೇಕಿದೆ.

ಮಕ್ಕಳ ಪಾಲನೆಯಲ್ಲಿ ಹೆತ್ತವರಿಗೆ ಕಿವಿಮಾತು
ಮಕ್ಕಳನ್ನು ಅತಿ ಮುದ್ದು ಮಾಡುವುದು ಹಾಗೂ ಮಕ್ಕಳನ್ನು ಪ್ರೀತಿಸದೆ  ಬೆಳೆಸುವುದರಿಂದ ಅವರು ಬಾಲ್ಯದಲ್ಲಿ ಅಪರಾಧಗೈಯಲು ಹಾಗೂ ಮನೋರೋಗಗಳಿಗೆ ಒಳಗಾಗಿ ಯಾವುದರಲ್ಲೂ ಆಸಕ್ತಿ ಇಲ್ಲದಂತಾಗಿ ಮಾಡಿಬಿಡುತ್ತಾರೆ ಎಂಬುದು ಸುಪ್ರಸಿದ್ಧ ಮನೋವಿಜ್ಞಾನಿ ಆಡ್ಲರ್‌ ಅವರ ಅಭಿಪ್ರಾಯ.

ಹಾಗೆಯೇ ಒಂದು ಮಗುವಿನೆದುರು ಇನ್ನೊಂದು ಮಗುವನ್ನು ಹೀಯಾಳಿಸಿ ಮಾತನಾಡಿದಾಗ ಆ ಮಗುವಿಗೆ ತಾನು ಇನ್ನೊಂದು ಮಗುವಿಗಿಂತ ಕೀಳು ಎಂಬ ಮನೋಭಾವ ಬೆಳೆಯುತ್ತದೆ. ಇದರಿಂದಾಗಿ ಆತ್ಮವಿಶ್ವಾಸ ಕುಗ್ಗಿ ಆ ಮಗು ಸ್ವತಂತ್ರವಾಗಿ ಏನನ್ನೂ ಮಾಡಲಾರದ ಪರಿಸ್ಥಿತಿ ಎದುರಿಸುತ್ತದೆ. ಯಾವಾಗಲೂ ಮಕ್ಕಳ ಭವಿಷ್ಯ ಅವರ ಮನಸ್ಸಿನ ಬೆಳವಣಿಗೆಯನ್ನು ಅವಲಂಬಿಸಿರುವುದರಿಂದ ಅವರ ಆರೋಗ್ಯದ ಜತೆಗೆ ಮಕ್ಕಳ ಮನೋವಿಜ್ಞಾನಕ್ಕೂ ಮಹತ್ವ ನೀಡಬೇಕು.

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬ ಮಾತಿದೆ.  ಇದು ಅಕ್ಷರಶಃ ನಿಜ. ಆದರೆ ಬರಬರುತ್ತಾ ಇದು ಬದಲಾಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ಮಕ್ಕಳಿಗೆ ವಾಸ್ತವದ ಅರಿವನ್ನು ಮಾಡಿ ಸುತ್ತಾ, ಸ್ವಾವಲಂಬನೆಯ ಬದುಕನ್ನು ಕಲಿಸುವುದು ಒಳಿತು, ಅಂದಾಗ ಮಾತ್ರ ಒಂದು ಮಗು ಮುಂದಿನ ಸಮಾಜದ ಒಳ್ಳೆಯ ಪ್ರಜೆಯಾಗಲು ಸಾಧ್ಯ.

Advertisement

ಮಕ್ಕಳ ಕಲ್ಯಾಣಕ್ಕಾಗಿ ಶ್ರಮ
ಮಕ್ಕಳ ಹಕ್ಕು, ಹಿತರಕ್ಷಣೆ, ಯೋಗ ಕ್ಷೇಮ, ಮಕ್ಕಳ ಆರೋಗ್ಯ, ಶಿಕ್ಷಣ  ಮತ್ತು ಅಭಿವೃದ್ಧಿಗೆ ಶ್ರಮಿಸುವ ಉದ್ದೇಶದಿಂದ ಜಗತ್ತಿನಾದ್ಯಂತ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.

ದಿನಾಚರಣೆ ಆರಂಭಗೊಂಡಿದ್ದು ಹೇಗೆ?
ವಿ.ಎನ್‌. ಕುಲಕರ್ಣಿ ಎನ್ನುವವರು 1951ರಲ್ಲಿ ವಿಶ್ವ ಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್‌ನ‌ ಮಕ್ಕಳ ಅಭಿವೃದ್ಧಿಗಾಗಿ ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜಬೆತ್‌-2 ಅವರ ಜನ್ಮದಿನವನ್ನು ಧ್ವಜ ದಿನಾಚರಣೆಯನ್ನಾಗಿ ಆಚರಿಸಿ, ಧನ ಸಂಗ್ರಹಿಸಲಾಗುತ್ತಿತ್ತು. ಈ ಸಂದರ್ಭ ಕುಲಕರ್ಣಿಯವರು ಭಾರತದಲ್ಲೂ ಇಂತಹ ಯೋಜನೆ ಜಾರಿಗೆ ಬರಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ವಿಶ್ವ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಸ್ತಾವವನ್ನು ಮುಂದಿಟ್ಟರು. ಎಲ್ಲರೂ ಈ ಬಗ್ಗೆ ಚರ್ಚಿಸಿ ದೇಶದ ಮೊದಲ ಪ್ರಧಾನಿ ಪಂ| ಜವಾಹರಲಾಲ್‌ ನೆಹರೂ ಅವರ ಜನ್ಮ ದಿನವಾದ ನ. 14ರಂದು ಮಕ್ಕಳ ದಿನ ಎಂದು ಆಚರಿಸಲು ಘೋಷಿಸಲಾಯಿತು. ಜಗತ್ತಿನಾದ್ಯಂತ ನವೆಂಬರ್‌ 20, 1954ರಂದು ವಿಶ್ವಸಂಸ್ಥೆ ಮಕ್ಕಳ ದಿನವನ್ನು ಆಚರಿಸಲು ಕರೆ ನೀಡಲಾಯಿತು.

ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next