ಬೆಳಗಾವಿ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಬುಧವಾರ ಬೆಳಗಾವಿಯಲ್ಲಿ ಬೃಹತ್ ಹೋರಾಟಕ್ಕೆ ಕರೆ ನೀಡಿದ್ದು, ಚಳಿಗಾಲದ ಅಧಿವೇಶನ ಸಂದರ್ಭದಲ್ಲಿಯೇ ಸದನದ ಹೊರಗೂ ಸರಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದೆ.
ಪ್ರತಿಭಟನೆಗೆ 25 ಸಾವಿರಕ್ಕೂ ಹೆಚ್ಚು ರೈತರು, ಬಡವರು, ಯುವಕರು, ಮಹಿಳೆಯರು, ಕಾರ್ಮಿ ಕರು ಬೆಂಬಲ ನೀಡಲಿದ್ದಾರೆ ಎಂದು ಮೇಲ್ಮನೆ ಸದಸ್ಯ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಅಪರಾಹ್ನ 3.30ಕ್ಕೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ನಡೆಯಲಿರುವ ಹೋರಾಟಕ್ಕಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ರಾತ್ರಿಯೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದು 6 ತಿಂಗಳುಗಳಲ್ಲಿ ಸಾಕಷ್ಟು ಹಗರಣಗಳನ್ನು ಮಾಡಿದ್ದು, ಜನಪರ ಆಡಳಿತ ನೀಡುತ್ತಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಜನಸಾಮಾನ್ಯರಿಗೆ ವಂಚನೆ ಮಾಡುತ್ತಿದ್ದು, ಇದರ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ವಿಪಕ್ಷಗಳು ಟೀಕಿಸಿದ ಅನಂತರ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಸರಕಾರವು ರೈತರಿಗೆ ತನ್ನ ಬೊಕ್ಕಸದಿಂದ ಬೆಳೆನಷ್ಟ ಪರಿಹಾರ ಒದಗಿಸದೆ ಕೇಂದ್ರ ಸರಕಾರದತ್ತ ಬೊಟ್ಟು ಮಾಡುತ್ತಿದೆ. ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ನಾವು 7 ತಾಸು ವಿದ್ಯುತ್ ಕೊಡುತ್ತಿದ್ದೆವು. ಈ ಸರಕಾರ 5 ತಾಸು ಕೂಡ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಹೊಸ ಕೊಳವೆಬಾವಿ ಕೊರೆಸಿದಾಗ ವಿದ್ಯುತ್ ಸಂಪರ್ಕ ಪಡೆಯಲು 2-3 ಲಕ್ಷ ರೂ. ಖರ್ಚಾಗುತ್ತದೆ. ಅದನ್ನೂ ರೈತರೇ ಭರಿಸಬೇಕಾಗಿದೆ ಎಂದರು.ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಶ್ರೀರಾಮುಲು ಸಹಿತ ಪಕ್ಷದ ಎಲ್ಲ ಮುಖಂಡರೂ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೇಲ್ಮನೆ ಸದಸ್ಯ ರವಿಕುಮಾರ್ ಮಾಹಿತಿ ನೀಡಿದರು.