Advertisement
ಬೆಂಗಳೂರು: ಸರ್ಕಾರ ರಚನೆ ಕುರಿತ ರಾಜಕೀಯ ಹೈಡ್ರಾಮಾ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ದೇಶದ ಗಮನವೇ ಈಗ ಕರ್ನಾಟಕದತ್ತ ನೆಟ್ಟಿದೆ!
Related Articles
Advertisement
ಒಂದೊಮ್ಮೆ ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದರೆ ಮುಂದಿನ ಆರು ತಿಂಗಳು ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಸಚಿವ ಸಂಪುಟ ವಿಸ್ತರಣೆ ಸೇರಿ ಮುಂದಿನ ಪ್ರಕ್ರಿಯೆಗಳನ್ನು ನಡೆಸಬಹುದು. ಬಹುಮತ ಸಾಬೀತುಪಡಿಸಲು ವಿಫಲರಾದರೆ ಮುಖ್ಯಮಂತ್ರಿ ಸಾœನಕ್ಕೆ ರಾಜೀನಾಮೆ ನೀಡಬೇಕಾಗಿ ಬರುತ್ತದೆ. ಬಳಿಕ ರಾಜ್ಯಪಾಲರು ಜೆಡಿಎಸ್-ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಆಹ್ವಾನ ನೀಡಬೇಕಾಗುತ್ತದೆ. ಆಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ಬಿರುಸಿನ ರಾಜಕೀಯ ಚಟುವಟಿಕೆ* ಶನಿವಾರವೇ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಸೂಚಿಸಿದ ಬೆನ್ನಲ್ಲೇ ಶುಕ್ರವಾರ ರಾಜಕೀಯ ಚಟುವಟಿಕೆಗಳು ಭಿರುಸುಗೊಂಡವು.
* ಆಪರೇಷನ್ ಕಮಲ ಭೀತಿಯಿಂದ ಹೈದರಾಬಾದ್‌ಗೆ ತೆರಳಿದ್ದ ಕಾಂಗ್ರೆಸ್, ಜೆಡಿಎಸ್ ಶಾಸಕರು ಅಲ್ಲೇ ಸಂಭ್ರಮಾಚರಣೆ ಮಾಡಿ ಶನಿವಾರದ ಕಲಾಪಕ್ಕೆ ಬೆಂಗಳೂರಿಗೆ ಆಗಮಿಸಲು ಸಿದ್ಧತೆ ನಡೆಸಿದರು.
* ಶಾಸಕರನ್ನು ಕರೆತರಲು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಹೈದರಾಬಾದ್‌ಗೆ ತೆರಳಿ, ಅಲ್ಲಿಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದರು.
* ಇತ್ತ ಸರ್ಕಾರ ಉಳಿಸಿಕೊಳ್ಳಲು ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವಡೇಕರ್, ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿದರು. ಮುಂದೆ ಮಾಡಬೇಕಾದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಹಂಗಾಮಿ ಸ್ಪೀಕರ್ ಖಡಕ್ ಬೋಪಯ್ಯ
ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುತ್ತಿದ್ದಂತೆ ವಿಧಾನಸಭೆ ಕಲಾಪಕ್ಕೆ ಸಿದ್ಧತೆ ತೀವ್ರವಾಗಿದ್ದು, ಶಾಸಕರ ಪ್ರಮಾಣವಚನ ಸ್ವೀಕಾರ ಮತ್ತು ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ನಡೆಸಲು ರಾಜ್ಯಪಾಲ ವಜೂಭಾಯಿ ವಾಲಾ ಅವರು ಬಿಜೆಪಿಯ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ. ಮುಂದಿನ ಸ್ಪೀಕರ್ ಆಯ್ಕೆವರೆಗೆ ಅವರು ಕಲಾಪ ನಡೆಸಿಕೊಡುತ್ತಾರೆ. ಈ ನಡುವೆ ಬೋಪಯ್ಯ ನೇಮಕದ ವಿರುದ್ಧವೂ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿದ್ದು, ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ. ಯಾರ್ಯಾರ ಸಂಖ್ಯಾಬಲ ಎಷ್ಟೆಷ್ಟು?
ಬಿಜೆಪಿ
221 ಸದಸ್ಯರು ಶನಿವಾರ ಪ್ರಮಾಣವಚನ ಸ್ವೀಕರಿಸಿ ವಿಶ್ವಾಸಮತದ ವೇಳೆ ಹಾಜರಾದರೆ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿಗಳಿಗೆ 112 ಸದಸ್ಯರ ಅವಶ್ಯಕತೆ ಇರುತ್ತದೆ. ಪ್ರಸ್ತುತ ಬಿಜೆಪಿ 104 ಸದಸ್ಯಬಲ ಮಾತ್ರ ಹೊಂದಿದ್ದು, ವಿಶ್ವಾಸಮತ ಸಾಬೀತುಪಡಿಸಲು ಇನ್ನು 8 ಮಂದಿಯ ಅಗತ್ಯವಿದೆ. ಆಗ ವಿಶ್ವಾಸಮತ ಸಾಬೀತುಪಡಿಸಬೇಕಿದ್ದರೆ ಕಾಂಗ್ರೆಸ್, ಜೆಡಿಎಸ್‌ನ ಕನಿಷ್ಟ 14 ಸದಸ್ಯರು ಸದನದಲ್ಲಿ ಇರದಂತೆ ಅಥವಾ ಪ್ರಮಾಣವಚನ ಸ್ವೀಕರಿಸದಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಮಧ್ಯೆ ಬಿಜೆಪಿಗೆ ಒಬ್ಬ ಕೆಪಿಜೆಪಿ ಮತ್ತು ಒಬ್ಬ ಪಕ್ಷೇತರ ಶಾಸಕರ ಬೆಂಬಲ ಸಿಕ್ಕಿದರೂ ಇನ್ನೂ 6 ಮಂದಿ ಬೇಕು. ಆಗ ಕಾಂಗ್ರೆಸ್ ಮತ್ತು ಜೆಡಿಎಸ್‌ನ 10 ಸದಸ್ಯರು ಸದನದಲ್ಲಿ ಇರದಂತೆ ಅಥವಾ ಪ್ರಮಾಣವಚನ ಸ್ವೀಕರಿಸದಂತೆ ನೋಡಿಕೊಳ್ಳಬೇಕು. ಜೆಡಿಎಸ್-ಕಾಂಗ್ರೆಸ್
221 ಸದಸ್ಯಬಲದ ಪೈಕಿ ಬಿಜೆಪಿಯ 104 ಸದಸ್ಯರನ್ನು ಹೊರತುಪಡಿಸಿದರೆ ಕೆಪಿಜೆಪಿ ಮತ್ತು ಪಕ್ಷೇತರ ತಲಾ ಒಬ್ಬ ಸೇರಿದಂತೆ 217 ಸದಸ್ಯರು ಇದ್ದಂತಾಗುತ್ತದೆ. ಸದ್ಯ ನಮ್ಮಲ್ಲಿ 116 ಸದಸ್ಯಬಲ ಇದೆ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಒಂದೊಮ್ಮೆ ವಿಶ್ವಾಸಮತ ನಿರ್ಣಯ ಸೋಲಬೇಕಾದರೆ ಈ ಕಡೆ ಕನಿಷ್ಟ 112 ಸದಸ್ಯರು ಬೇಕು. ಹೀಗಾಗಿ ಎಲ್ಲಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಸದನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ನಾಲ್ಕೈದು ಮಂದಿ ಸದಸ್ಯರು ಕೈಕೊಟ್ಟರೂ ಸರ್ಕಾರ ಉರುಳಿಸುವ ಉದ್ದೇಶಕ್ಕೆ ಯಾವುದೇ ಅಡ್ಡಿ ಆಗುವುದಿಲ್ಲ. ಜತೆಗೆ ವಿಶ್ವಾಸ ಮತ ನಿರ್ಣಯಕ್ಕೆ ಸೋಲಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದರೆ ಮುಂದೆ ಸರ್ಕಾರ ರಚಿಸಲು ಕೂಡ ಸಮಸ್ಯೆ ಇಲ್ಲ. ವಿಶ್ವಾಸಮತ ನಿರ್ಣಯ ಹೇಗೆ?
ಶಾಸಕರ ಪ್ರಮಾಣವಚನ ಸ್ವೀಕಾರ ಪೂರ್ಣಗೊಂಡ ನಂತರ ವಿಶ್ವಾಸಮತ ಸಾಬೀತು ಪ್ರಕ್ರಿಯೆ ನಡೆಯಲಿದೆ. ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ, “ನನ್ನ ನೇತೃತ್ವದ ಸಚಿವ ಸಂಪುಟದ ಮೇಲೆ ವಿಶ್ವಾಸ ವ್ಯಕ್ತಪಡಿಸುವಂತೆ ಕೋರುತ್ತೇನೆ’ ಎಂಬ ಪ್ರಸ್ತಾವವನ್ನು ಸದನದಲ್ಲಿ ಮಂಡಿಸುತ್ತಾರೆ. ಇದರ ಮೇಲೆ ಚರ್ಚೆಗೂ ಅವಕಾಶವಿದೆ. ಚರ್ಚೆಯ ಬಳಿಕ ಪ್ರಸ್ತಾವವನ್ನು ಮತಕ್ಕೆ ಹಾಕಲಾಗುತ್ತದೆ. ಆಗ ಸದಸ್ಯರು ಕೈ ಎತ್ತುವ ಮೂಲಕ ಪ್ರಸ್ತಾವದ ಪರ ಅಥವಾ ವಿರುದ್ಧ ಮತ ಚಲಾಯಿಸಬಹುದು. ಒಬ್ಬ ಸದಸ್ಯ ಪರ ಮತ್ತು ವಿರುದ್ಧ ಮತ ಚಲಾಯಿಸಲು ಅವಕಾಶವಿಲ್ಲ. ಒಮ್ಮೆ ಮಾತ್ರ ಮತ ಚಲಾಯಿಸಬೇಕು. ನಂತರ ಪರ ಮತ್ತು ವಿರುದ್ಧ ಮತಗಳನ್ನು ಲೆಕ್ಕ ಹಾಕಲಾಗುತ್ತದೆ. ಪ್ರಸ್ತಾವದ ಪರ ಹೆಚ್ಚು ಮತ ಬಂದರೆ ಆಗ ಸಿಎಂ ಯಡಿಯೂರಪ್ಪ ವಿಶ್ವಾಸಮತ ಗೆಲ್ಲುವುದರೊಂದಿಗೆ ಸರ್ಕಾರ ರಚನೆ ಪ್ರಕ್ರಿಯೆ ಮುಂದುವರಿಸಬಹುದು. ಪ್ರಸ್ತಾವದ ವಿರುದ್ಧ ಹೆಚ್ಚು ಮತ ಬಂದರೆ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದರ್ಥ. ಬಿಎಸ್‌ವೈ ಮುಂದೆ ಮೂರು ಸಾಧ್ಯತೆಗಳು
1. ಬಹುಮತ ಸಾಬೀತುಪಡಿಸಲು ಸಾಧ್ಯವಿದೆ ಎಂಬುದು ಸ್ಪಷ್ಟವಾದರೆ ವಿಶ್ವಾಸಮತ ಯಾಚಿಸುವುದು.
2. ಬಹುಮತ ಸಾಬೀತು ಅಸಾಧ್ಯ ಎಂದಾದರೆ ಭಾವನಾತ್ಮಕ ಭಾಷಣ ಮಾಡಿ ರಾಜೀನಾಮೆ ನೀಡುವುದು.
3. ಏನಾದರೂ ಆಗಲಿ ಎಂದು ವಿಶ್ವಾಸಮತ ನಿರ್ಣಯ ಮಂಡಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗುವುದು. ಗೆದ್ದರೆ…: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುವುದರ ಜತೆಗೆ ಬಿಜೆಪಿ ಸರ್ಕಾರ ಅಪಾಯದಿಂದ ಪಾರಾಗುತ್ತದೆ. ಸಂಪುಟ ರಚನೆ ಸೇರಿದಂತೆ ಸರ್ಕಾರದ ಮುಂದಿನ ಕೆಲಸಗಳನ್ನು ಮಾಡಬಹುದು. ಐದು ವರ್ಷಗಳ ಬಳಿಕ ಮತ್ತೆ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬಂದಂತಾಗುತ್ತದೆ. ಸೋತರೆ…: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲಿಗೆ ಮೂರು ದಿನದ ಬಿಜೆಪಿ ಸರ್ಕಾರಕ್ಕೆ ತೆರೆ ಬೀಳುತ್ತದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು. ಹೀಗಿದೆ ಬಲಾಬಲ
ಒಟ್ಟು ಸದಸ್ಯ ಬಲ- 221
ಬಿಜೆಪಿ- 104
ಕಾಂಗ್ರೆಸ್- 78
ಜೆಡಿಎಸ್- 36
ಬಿಎಸ್‌ಪಿ- 1
ಕೆಪಿಜೆಪಿ- 1
ಪಕ್ಷೇತರ- 1 ಬೆಳಗ್ಗೆ 11ಕ್ಕೆ ಅಧಿವೇಶನ
ಶನಿವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಹಂಗಾಮಿ ಸ್ಪೀಕರ್ ಸಮ್ಮುಖದಲ್ಲಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತ ನಿರ್ಣಯ ಮಾಡಲಿದ್ದಾರೆ. ವಿಪ್ ಉಲ್ಲಂಘಿಸಿದರೆ ಏನಾಗುತ್ತದೆ?
– ವಿಪ್ ಉಲ್ಲಂ ಸಿದ ಶಾಸಕರನ್ನು ಅನರ್ಹಗೊಳಿಸುವಂತೆ ಪಕ್ಷದ ವತಿಯಿಂದ ಸ್ಪೀಕರ್‌ಗೆ ದೂರು ನೀಡಬೇಕು.
– ಈ ದೂರಿನ ಮೇಲೆ ವಿಚಾರಣೆ ನಡೆಸಿ ಅನರ್ಹಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
– ಅನರ್ಹಗೊಳಿಸಿದರೆ ಅದನ್ನು ಪ್ರಶ್ನಿಸಿ ಶಾಸಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
– ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆಹೋದರೆ ಅಲ್ಲಿ ಇತ್ಯರ್ಥವಾಗಬೇಕು.
– ಅನರ್ಹತೆ ಪ್ರಕರಣ ಇತ್ಯರ್ಥಗೊಳ್ಳಲು ಸಾಕಷ್ಟು ಸಮಯಾವಕಾಶವೂ ಬೇಕು ವಾಜಪೇಯಿ ಹಾದಿ ತುಳಿಯುವರೇ ಯಡಿಯೂರಪ್ಪ?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲಲು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನಗಳನ್ನೂ ನಡೆಸುತ್ತಿದೆ. ಒಂದೊಮ್ಮೆ ವಿಸ್ವಾಸಮತ ಲಭ್ಯವಾಗುವುದಿಲ್ಲ ಎಂದಾದರೆ ಯಡಿಯೂರಪ್ಪ ಅವರು 1996ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತುಳಿದ ಹಾದಿಯಲ್ಲಿ ಮುನ್ನಡೆಯಲಿದ್ದಾರೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. 1996ರಲ್ಲಿ ಲೋಕಸಭೆಯಲ್ಲಿ ಅಲ್ಪಮತ ಇದ್ದಾಗ್ಯೂ ವಾಜಪೇಯಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನಂತರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅಗತ್ಯ ಸದಸ್ಯ ಬಲ ಇಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಲೋಕಸಭೆಯಲ್ಲಿ ಭಾವನಾತ್ಮಕ ಭಾಷಣ ಮಾಡಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದರು. ಆ ಮೂಲಕ ಕೇವಲ 13 ದಿನದ ಪ್ರಧಾನಿ ಎನಿಸಿಕೊಂಡರು. ನಂತರದಲ್ಲಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾದರು. ಈ ಬಾರಿ ಯಡಿಯೂರಪ್ಪ ಅವರು ವಾಜಪೇಯಿ ಅವರ ಹಾದಿಯಲ್ಲೇ ಮುನ್ನಡೆದು, ಬಹುಮತ ಇಲ್ಲ ಎಂದಾದರೆ ವಿಶ್ವಾಸಮತ ಯಾಚನೆಗೆ ಮುನ್ನವೇ ವಿಧಾನಸಭೆಯಲ್ಲಿ ಭಾವನಾತ್ಮಕ ಭಾಷಣ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ನಂತರ ಹೊಸ ಸರ್ಕಾರ ರಚನೆಯಾದರೆ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬಹುದು. ಕೋರ್ಟ್ ಆದೇಶದಂತೆ ಇಂದೇ ಬಹುಮತ ಸಾಬೀತು ಪಡಿಸುತ್ತೇವೆ. ಈ ಬಗ್ಗೆ ನೂರಕ್ಕೆ ನೂರಷ್ಟು ಆತ್ಮವಿಶ್ವಾಸವಿದೆ. ಅಧಿವೇಶನಕ್ಕೆ ಅಗತ್ಯ ತಯಾರಿ ನಡೆದಿದೆ.
– ಬಿ.ಎಸ್. ಯಡಿಯೂರಪ್ಪ, ಸಿಎಂ ಬೋಪಯ್ಯ ನೇಮಕದ ಹಿಂದೆ ಬಿಜೆಪಿಯ ಹುನ್ನಾರವಿದೆ. ಕಾಂಗ್ರೆಸ್ ಇದನ್ನು ಈಗಾಗಲೇ ಖಂಡಿಸಿದೆ. ಅಷ್ಟೇ ಅಲ್ಲ, ಇದರ ವಿರುದ್ಧ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದೇವೆ.
– ಸಿದ್ದರಾಮಯ್ಯ, ಮಾಜಿ ಸಿಎಂ ಬಿಜೆಪಿಗರಿಂದ ವಿಶ್ವಾಸಮತ ಗಳಿಸಲು ಸಾಧ್ಯವೇ ಇಲ್ಲ. ಅವರ ಬಳಿ ಹೇಗೂ ಅಗತ್ಯ ಸಂಖ್ಯಾಬಲವಿಲ್ಲ. ಸುಖಾಸುಮ್ಮನೆ ಮಾತನಾಡುತ್ತಿದ್ದಾರಷ್ಟೆ. ನಮ್ಮ ಹೋರಾಟಕ್ಕೆ ಜಯಸಿಗಲಿದೆ.
– ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ