ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ಹೊಸ ನಾಯಕತ್ವ ಮತ್ತು ಹೊಸ ತಂಡದೊಂದಿಗೆ ಸಜ್ಜಾಗಿರುವ ರಾಜ್ಯ ಬಿಜೆಪಿಯು ಬುಧವಾರ ಮತ್ತು ಗುರುವಾರ ಪಕ್ಷದ ಮುಂದಿನ ಹೋರಾಟ, ಸಂಘಟನೆಯ ಬಗ್ಗೆ ಚರ್ಚೆ ನಡೆಸಲಿದೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುವ ಮೊದಲ ಸಭೆ ಇದೆಂಬ ಕಾರಣಕ್ಕೆ ಮಹತ್ವ ಪಡೆದಿದೆ.
ಮಂಗಳವಾರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮಾಹಿತಿ ನೀಡಿ, ಬುಧವಾರ ಬೆಳಗ್ಗೆ 10ಕ್ಕೆ ಪಕ್ಷದ ರಾಜ್ಯ ಕಚೇರಿಯಲ್ಲಿ ಸಭೆ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ಕೊಡುವ ಸಭೆ ನಡೆಯಲಿದೆ ಎಂದರು.
ಅನಂತರ ಪಕ್ಷದ ಪ್ರಮುಖರು ಎಲ್ಲ ಜಿಲ್ಲೆಗಳಿಗೆ ತೆರಳಿ ಆಯಾ ಜಿಲ್ಲೆಗಳ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾ ಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.
ಗುರುವಾರ ಪಕ್ಷದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯದ ಮಾಜಿ ಸಚಿವರು, ಪ್ರಮುಖರು ಭಾಗವಹಿಸುತ್ತಾರೆ. ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಹೋರಾಟ, ಪಕ್ಷದ ಸಂಘಟನೆ ಹಾಗೂ ಲೋಕಸಭಾ ಚುನಾವಣೆ ಎದುರಿಸುವುದರ ಕುರಿತು ಪ್ರಮುಖರ ಸಲಹೆಗಳನ್ನು ವಿಜಯೇಂದ್ರ ಪಡೆಯಲಿದ್ದಾರೆ ಎಂದು ರಾಜೀವ್ ತಿಳಿಸಿದರು.
ಈ ಸಭೆಯಲ್ಲಿ ರಾಜ್ಯದಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ, ಹೋರಾಟ ಮತ್ತು ಪ್ರತಿಭಟನೆಯ ರೂಪುರೇಷೆಯನ್ನು ನಿರ್ಧರಿಸಲಾಗುತ್ತದೆ. ಎಲ್ಲರ ಅಭಿಪ್ರಾಯದೊಂದಿಗೆ ಪಕ್ಷವನ್ನು ಮುನ್ನಡೆಸುವ ತೀರ್ಮಾನವನ್ನು ರಾಜ್ಯಾಧ್ಯಕ್ಷರು ಕೈಗೊಂಡಿದ್ದಾರೆ ಎಂದು ರಾಜೀವ್ ಹೇಳಿದರು.
ರೈತರಿಗೆ ಪರಿಹಾರ ನೀಡಲಿ
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವಾಗಲೆಲ್ಲ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತವೆ. ಇಲ್ಲಿಯವರೆಗೆ ರೈತರಿಗೆ ಭರವಸೆ ಮೂಡಿಸುವ ಯಾವ ಹೇಳಿಕೆಯನ್ನೂ ಸರಕಾರ ಕೊಟ್ಟಿಲ್ಲ. ಸಚಿವರು ರೈತರ ಜೀವ, ಬದುಕಿನ ಜತೆ ಚೆಲ್ಲಾ ಟವಾಡುವ ಭಾವನೆಯಿಂದ ಹೊರಬರಬೇಕು. ರೈತರಿಗೆ ತತ್‌ಕ್ಷಣವೇ ಪರಿಹಾರ ಮೊತ್ತವನ್ನು ವಿತರಿಸಬೇಕು ಎಂದು ರಾಜೀವ್ ಆಗ್ರಹಿಸಿದರು.