Advertisement

ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟ ಇಂದು ಉದ್ಘಾಟನೆ

03:45 AM Feb 03, 2017 | |

ಹುಬ್ಬಳ್ಳಿ/ಧಾರವಾಡ: ಹುಬ್ಬಳ್ಳಿ-ಧಾರವಾಡದ ಅವಳಿ ನಗರದಲ್ಲಿ ಶುಕ್ರವಾರ ರಾಜ್ಯ ಒಲಿಂಪಿಕ್ಸ್‌ ಗೇಮ್ಸ್‌ ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಜೆ 3 ಗಂಟೆಗೆ ಧಾರವಾಡದ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಕೂಟಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

Advertisement

ರಾಜ್ಯದ ವಿವಿಧ ಭಾಗಗಳಿಂದ ಒಟ್ಟು  4 ಸಾವಿರ ಕ್ರೀಡಾಪಟುಗಳು ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಧಾರವಾಡ ಜಿಲ್ಲಾ ಆಡಳಿತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಜಂಟಿ ಆಶ್ರಯದಲ್ಲಿ ಕೂಟವನ್ನು ಆಯೋಜಿಸಲಾಗಿದೆ. ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಕ್ರಮವಾಗಿ 25 ಸ್ಪರ್ಧೆಗಳು ನಡೆಯಲಿದೆ. ಫೆ.10ರಂದು ಕೂಟಕ್ಕೆ ತೆರೆಬೀಳಲಿದೆ.

ಯಾವ್ಯಾವ ವಿಭಾಗದಲ್ಲಿ ಸ್ಪರ್ಧೆ ಆಯೋಜನೆ?: ಬಿಲ್ಗಾರಿಕೆ, ಅಥ್ಲೆಟಿಕ್ಸ್‌, ಬಾಸ್ಕೆಟ್‌ಬಾಲ್‌, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ಸೈಕ್ಲಿಂಗ್‌, ಫ‌ುಟ್ಬಾಲ್‌, ಕತ್ತಿವರಸೆ, ಜಿಮ್ನಾಸ್ಟಿಕ್‌, ಹ್ಯಾಂಡ್‌ಬಾಲ್‌, ಹಾಕಿ, ಜೂಡೋ, ಕಬಡ್ಡಿ, ಖೋಖೋ, ಲಾನ್‌ ಟೆನಿಸ್‌, ನೆಟ್‌ಬಾಲ್‌, ರೈಫ‌ಲ್‌ ಶೂಟಿಂಗ್‌, ಸ್ವಿಮ್ಮಿಂಗ್‌, ಟೇಬಲ್‌ ಟೆನಿಸ್‌, ಟೇಕ್ವಾಂಡೊ, ಟ್ರಯಥ್ಲಾನ್‌, ವಾಲಿಬಾಲ್‌, ವೇಟ್‌ಲಿಫ್ಟಿಂಗ್‌, ಕುಸ್ತಿ, ವುಶು ಸ್ಪರ್ಧೆಗಳು ನಡೆಯಲಿವೆ.

ಒಟ್ಟು 3 ನಗರದಲ್ಲಿ ಆಯೋಜನೆ: ಧಾರವಾಡ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಧಾರವಾಡದಲ್ಲಿ ಬಿಲ್ಗಾರಿಕೆ, ಬ್ಯಾಡ್ಮಿಂಟನ್‌, ಕತ್ತಿವರಸೆ, ಹ್ಯಾಂಡ್‌ಬಾಲ್‌, ಅಥ್ಲೆಟಿಕ್ಸ್‌, ಬಾಕ್ಸಿಂಗ್‌, ಜಿಮ್ನಾಸ್ಟಿಕ್‌, ಜೂಡೋ, ನೆಟ್‌ಬಾಲ್‌, ಬಾಸ್ಕೆಟ್‌ಬಾಲ್‌, ಫ‌ುಟ್‌ಬಾಲ್‌, ಹಾಕಿ, ಖೋ ಖೋ, ವೇಟ್‌ಲಿಫ್ಟಿಂಗ್‌, ಕುಸ್ತಿ, ಟೇಕ್ವಾಂಡೋ, ವುಶು, ಟೇಬಲ್‌ ಟೆನಿಸ್‌ ಸ್ಪರ್ಧೆಗಳು ನಡೆಯಲಿವೆ.

ಹುಬ್ಬಳ್ಳಿಯಲ್ಲಿ ಸೈಕ್ಲಿಂಗ್‌, ವಾಲಿಬಾಲ್‌, ಕಬಡ್ಡಿ, ಈಜು ಸ್ಪರ್ಧೆಗಳು  ನಡೆಯಲಿವೆ. ಬೆಂಗಳೂರಿನಲ್ಲಿ ರೈಫ‌ಲ್‌ ಶೂಟಿಂಗ್‌, ಟ್ರಯಥ್ಲಾನ್‌, ಲಾನ್‌ ಟೆನಿಸ್‌ ಸ್ಪರ್ಧೆಗಳು ಆರಂಭವಾಗಲಿದೆ. ಮೂಲಭೂತ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ನಗರಗಳಲ್ಲಿ ಕೂಟವನ್ನು ಹಂಚಲಾಗಿದೆ. ಅಂತಿಮವಾಗಿ ಫೆ.10ರಂದು  ಸಮಾರೋಪ ಸಮಾರಂಭವನ್ನು ಧಾರವಾಡದ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Advertisement

4 ಸಾವಿರ ಅಥ್ಲೀಟ್‌ಗಳು ಭಾಗಿ
ಕೂಟದಲ್ಲಿ ರಾಜ್ಯದ ವಿವಿಧ ಭಾಗದಿಂದ ಒಟ್ಟು 4 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ವಿಶೇಷ. ಅಲ್ಲದೆ 500ಕ್ಕೂ ಹೆಚ್ಚು ತೀರ್ಪುಗಾರರು, ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಇದು ರಾಜ್ಯದ ಮಟ್ಟಿಗೆ ಬೃಹತ್‌ ಕ್ರೀಡಾಕೂಟವಾಗಿದೆ. ಜೊತೆಗೆ ಇಲ್ಲಿ 25 ಕ್ರೀಡೆಗಳ 200ಕ್ಕೂ ಹೆಚ್ಚು ಉಪವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಏನಿದು ರಾಜ್ಯ ಒಲಿಂಪಿಕ್ಸ್‌?
ಒಲಿಂಪಿಕ್ಸ್‌ ಮಾದರಿಯಲ್ಲಿ ರಾಜ್ಯ ಮಟ್ಟದಲ್ಲಿ ಕೂಟವನ್ನು ಆಯೋಜಿಸಲಾಗಿದೆ. 2008ರಲ್ಲಿ ಮೈಸೂರು, ಮಂಡ್ಯದಲ್ಲಿ ಮೊದಲ ಬಾರಿಗೆ ರಾಜ್ಯ ಒಲಿಂಪಿಕ್ಸನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಆದರೆ ಆನಂತರ ರಾಜ್ಯದಲ್ಲಿ ಭೀಕರ ಬರ, ಚುನಾವಣೆ ಎದುರಾಯಿತು. ಹೀಗಾಗಿ ಆನಂತರ ಕೂಟವನ್ನು ಸರ್ಕಾರ ನಡೆಸಿರಲಿಲ್ಲ. ಕಳೆದ ವರ್ಷ ಕೆಒಎ ಅಧ್ಯಕ್ಷ ಗೋವಿಂದರಾಜ್‌ ಕೂಟವನ್ನು ಮತ್ತೆ  ನಡೆಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು. ಹೀಗಾಗಿ ಬಜೆಟ್‌ನಲ್ಲಿ ಕೂಟಕ್ಕಾಗಿ ಹಣ ಬಿಡುಗಡೆ ಮಾಡಲಾಯಿತು.

3 ಕೋಟಿ ರೂ. ವೆಚ್ಚ: ರಾಜ್ಯ ಒಲಿಂಪಿಕ್ಸ್‌ಗಾಗಿ ಸರ್ಕಾರ ಒಟ್ಟು 3 ಕೋಟಿ ರೂ. ನೀಡಿದೆ. ಕಳೆದ ಬಜೆಟ್‌ನಲ್ಲೇ ಈ ಹಣವನ್ನು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next