Advertisement

ಇಂದಿನಿಂದ 15ನೇ ಏಷ್ಯಾ ಕಪ್‌ ಕ್ರಿಕೆಟ್‌: ಟಿ20 ವಿಶ್ವಕಪ್‌ಗೆ ಏಷ್ಯನ್‌ ದೇಶಗಳ ತಾಲೀಮು

12:23 AM Aug 27, 2022 | Team Udayavani |

ದುಬಾೖ: ಕೊನೆಗೂ 15ನೇ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಕಾಲ ಕೂಡಿಬಂದಿದೆ. 4 ವರ್ಷ ಗಳ ಸುದೀರ್ಘ‌ ವಿರಾಮದ ಬಳಿಕ, ಕೋವಿಡ್‌ ಕಂಟಕ ಬಹುತೇಕ ಕಡಿ ಮೆಗೊಂಡ ತರುವಾಯ, ಪಾಕಿಸ್ಥಾನ ಹಾಗೂ ಶ್ರೀಲಂಕಾದ ಆತಿಥ್ಯದಿಂದ ದೂರಾದ ಈ ಪಂದ್ಯಾವಳಿ ಶನಿವಾರ ಅರಬ್‌ ನಾಡಿನಲ್ಲಿ ಮೊದಲ್ಗೊಳ್ಳಲಿದೆ. ಆದರೆ ಕೂಟದ ಹಕ್ಕು ಲಂಕಾ ಬಳಿಯೇ ಇರಲಿದೆ.

Advertisement

6 ತಂಡಗಳು ಪ್ರಶಸ್ತಿ ರೇಸ್‌ಗೆ
ಇಳಿಯಲಿವೆ. “ಎ’ ವಿಭಾಗದಲ್ಲಿ ಭಾರತ, ಪಾಕಿಸ್ಥಾನ ಹಾಗೂ ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಹಾಂಕಾಂಗ್‌; “ಬಿ’ ವಿಭಾಗದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ತಂಡಗಳಿವೆ. 5 ಬಾರಿಯ ಚಾಂಪಿಯನ್‌ ತಂಡವಾದ ಶ್ರೀಲಂಕಾ ಉದ್ಘಾಟನ ಪಂದ್ಯದಲ್ಲಿ ಅಫ್ಘಾನಿಸ್ಥಾನವನ್ನು ಎದುರಿಸಲಿದೆ. ರವಿವಾರ ಭಾರತ-ಪಾಕಿಸ್ಥಾನ ನಡುವಿನ ಹೈ ವೋಲ್ಟೇಜ್ ಸ್ಪರ್ಧೆ ಸಾಗಲಿದೆ.

ವಿಶ್ವಕಪ್‌ಗೆ ಮಹತ್ವದ ಅಭ್ಯಾಸ
ವಿಳಂಬವಾದರೂ ಸೂಕ್ತ ಸಮಯದಲ್ಲೇ ಏಷ್ಯಾ ಕಪ್‌ ಪಂದ್ಯಾವಳಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ವರ್ಷಾಂತ್ಯ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯ ಹಿನ್ನೆಲೆಯಲ್ಲಿ ಏಷ್ಯಾದ ಈ ದಿಗ್ಗಜಗಳ ಕಾಳಗ ಅತ್ಯಂತ ಮಹತ್ವ ಪಡೆದುಕೊಂಡಿದೆ. ಪ್ರತಿಷ್ಠೆಯ ಜತೆಗೆ ತಂಡಗಳ ಬಲಾಬಲ, ಸಮಸ್ಯೆ, ಕುಂದುಕೊರತೆಯನ್ನೆಲ್ಲ ನೀಗಿಸಿಕೊಳ್ಳಲು, ತಂಡದ ಕಾಂಬಿನೇಶನ್‌ ಅಂತಿಮಗೊಳಿಸಲಿಕ್ಕೆ ಈ ಕೂಟ ನೆರವಿಗೆ ಬರಲಿದೆ. ಈ ಕಾರಣಕ್ಕಾಗಿಯೇ 6 ವರ್ಷಗಳ ಬಳಿಕ ಏಷ್ಯಾ ಕಪ್‌ ಪಂದ್ಯಾವಳಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಇಲ್ಲಿ ಮಿಂಚಿದವರು ಟಿ20 ವಿಶ್ವಕಪ್‌ಗೆ “ನೇರ ಪ್ರವೇಶ’ ಪಡೆಯುವುದರಲ್ಲಿ ಅನುಮಾನವಿಲ್ಲ.

ಆದರೂ ಕೆಲವು ಸ್ಟಾರ್‌ ಆಟಗಾರರು ಗಾಯಾಳಾದ ಕಾರಣ ಈ ಕೂಟದಿಂದ ದೂರ ಉಳಿದಿರುವುದೊಂದು ಹಿನ್ನಡೆ. ಜಸ್‌ಪ್ರೀತ್‌ ಬುಮ್ರಾ, ಹರ್ಷಲ್‌ ಪಟೇಲ್‌, ದೀಪಕ್‌ ಚಹರ್‌, ಶಾಹೀನ್‌ ಶಾ ಅಫ್ರಿದಿ, ದುಷ್ಮಂತ ಚಮೀರ ಮೊದಲಾದವರೆಲ್ಲ ಏಷ್ಯಾ ಕಪ್‌ನಲ್ಲಿ ಆಡುತ್ತಿಲ್ಲ. ಇದೀಗ ಪಾಕಿಸ್ಥಾನದ ಮತ್ತೋರ್ವ ವೇಗಿ ಮೊಹಮ್ಮದ್‌ ವಾಸಿಮ್‌ ಕೂಡ ಗಾಯಾಳಾಗಿ ಹೊರಬಿದ್ದಿದ್ದಾರೆ.

ಇವರೆಲ್ಲರ ನಡುವೆ ಕೆಲವು ಆಟಗಾರರಿಗೆ ಫಾರ್ಮ್ ಕಂಡು ಕೊಳ್ಳಲಿಕ್ಕೂ ಏಷ್ಯಾ ಕಪ್‌ ಒಂದು ವೇದಿಕೆ ಆಗಲಿದೆ. ಉದಾಹರಣೆಗೆ, ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌. ರಾಹುಲ್‌.

Advertisement

ಲಂಕಾ-ಅಫ್ಘಾನ್‌ ಮುಖಾಮುಖಿ
ಉದ್ಘಾಟನ ಪಂದ್ಯದಲ್ಲಿ ಕಾಣಿಸಿಕೊಳ್ಳಲಿರುವ ಶ್ರೀಲಂಕಾ 5 ಸಲ ಏಷ್ಯಾ ಕಪ್‌ ಎತ್ತಿದ್ದು, ದ್ವಿತೀಯ ಸ್ಥಾನದಲ್ಲಿದೆ. ಕ್ರಿಸ್‌ ಸಿಲ್ವರ್‌ವುಡ್‌ ಈ ತಂಡದ ನೂತನ ಕೋಚ್‌ ಆಗಿದ್ದಾರೆ. ಆದರೆ ಸ್ಟಾರ್‌ ಆಟಗಾರರ ಕೊರತೆ ಇದೆ. ಸ್ಥಿರ ಪ್ರದರ್ಶನ ನೀಡುವಲ್ಲೂ ತಂಡ ಹಿಂದುಳಿದಿದೆ.

ಲಂಕೆಗೆ ಹೋಲಿಸಿದರೆ ಅಫ್ಘಾನಿಸ್ಥಾನ ತಂಡದಲ್ಲೇ ಹೆಚ್ಚಿನ ವೈವಿಧ್ಯವನ್ನು ಕಾಣಬಹುದು. ಮೊಹಮ್ಮದ್‌ ನಬಿ ಪಡೆ ಅಗ್ರ ರ್‍ಯಾಂಕಿಂಗ್‌ ತಂಡಗಳನ್ನು ಮಣಿಸುವ ಯೋಜನೆಯಲ್ಲಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫ‌ಲವಾಗಿದ್ದ ಅಫ್ಘಾನ್‌ ಪಡೆ, ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಹವಣಿಸುತ್ತಿದೆ. ಎಂದಿನಂತೆ ವಿಶ್ವ ದರ್ಜೆಯ ಸ್ಪಿನ್ನರ್‌ ರಶೀದ್‌ ಖಾನ್‌ ಟ್ರಂಪ್‌ಕಾರ್ಡ್‌ ಆಗಿದ್ದಾರೆ.

ಗ್ರೂಪ್‌ ಆಫ್ ಡೆತ್‌
ಒಂದು ವಿಭಾಗದಿಂದ ಅಗ್ರ ಎರಡು ತಂಡಗಳು “ಸೂಪರ್‌ ಫೋರ್‌’ ಹಂತದಲ್ಲಿ ಆಡುವುದು ಈ ಕೂಟದ ಮಾದರಿ. “ಎ’ ವಿಭಾಗದಲ್ಲಿ ಅಂಥ ಪೈಪೋಟಿ ಏನಿಲ್ಲ. ಇಲ್ಲಿ ಭಾರತ, ಪಾಕಿಸ್ಥಾನಕ್ಕೆ ಈ ಅವಕಾಶ ಕಟ್ಟಿಟ್ಟ ಬುತ್ತಿ ಎನ್ನಬಹುದು. ಹಾಂಕಾಂಗ್‌ನಿಂದ ಯಾವುದೇ ಪವಾಡ ನಿರೀಕ್ಷಿಸುವಂತಿಲ್ಲ.

ಆದರೆ “ಬಿ’ ವಿಭಾಗದಲ್ಲಿ ಪೈಪೋಟಿ ಜೋರಿದೆ. ಇಲ್ಲಿನ ಮೂರೂ ತಂಡಗಳು ಬಲಿಷ್ಠವಾಗಿವೆ. ಲಂಕಾ, ಅಫ್ಘಾನ್‌, ಬಾಂಗ್ಲಾ ನಡುವಿನ ಪೈಪೋಟಿಯಲ್ಲಿ ಯಾವ ತಂಡಗಳು ಮುಂದಡಿ ಇಡುತ್ತವೆ, ಯಾವ ತಂಡ ಹೊರಬೀಳುತ್ತದೆ ಎಂದು ಅಂದಾಜಿಸಲು ಸಾಧ್ಯವಾಗದು. ಹೀಗಾಗಿ ಇದು “ಗ್ರೂಪ್‌ ಆಫ್ ಡೆತ್‌’ ಎನಿಸಿಕೊಂಡಿದೆ. ಮೊದಲ ಪಂದ್ಯದಿಂದಲೇ ಕೂಟದ ಕಾವೇರುವು ದರಲ್ಲಿ ಅನುಮಾನವಿಲ್ಲ.

ಭಾರತ- ಪಾಕ್‌
ನೂತನ ಜೆರ್ಸಿ
ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡದ ಆಟಗಾರರು ನೂತನ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೀಮ್‌ ಇಂಡಿಯಾದ ಆಲ್‌ರೌಂಡರ್‌ ರವೀಂದ್ರ ಜಡೇಜ ಈ ನೂತನ ಜೆರ್ಸಿ ಧರಿಸಿದ ತಮ್ಮ ಫೋಟೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪಾಕಿಸ್ಥಾನದ ನಾಯಕ ಬಾಬರ್‌ ಆಜಂ ಮತ್ತು ಇತರ ಕೆಲವು ಕ್ರಿಕೆಟಿಗರು ನೂತನ ಹಸುರು ಜೆರ್ಸಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಭಾರತರ ಜೆರ್ಸಿ ಎಂದಿನಂತೆ ನೀಲಿ ಬಣ್ಣದ್ದಾಗಿದ್ದು, 2022ರ ಏಷ್ಯಾ ಕಪ್‌ ಲಾಂಛನವನ್ನು ಹೊಂದಿದೆ. ಕೂಟದ ಹೆಸರನ್ನೂ ಬರೆಯಲಾಗಿದೆ.

ವೀಲ್‌ಚೇರ್‌ನಲ್ಲಿ ಆಗಮಿಸಿದ
ಕೊಹ್ಲಿಯ ಪಾಕ್‌ ಅಭಿಮಾನಿ!
ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸಮಕಾಲೀನ ಕ್ರಿಕೆಟಿಗರಲ್ಲಿ ವಿರಾಟ್‌ ಕೊಹ್ಲಿಗೆ ನಿಸ್ಸಂಶಯವಾಗಿಯೂ ಅಗ್ರಸ್ಥಾನ. ಇದೀಗ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಗಾಗಿ ದುಬಾೖಯಲ್ಲಿರುವ ಕೊಹ್ಲಿ ಸುತ್ತ ಅಭಿಮಾನಿಗಳ ದೊಡ್ಡ ವರ್ಗವೇ ಜಮಾಯಿಸಿದೆ. ಇವರಲ್ಲಿ ಬಹುತೇಕ ಮಂದಿ ಪಾಕಿಸ್ಥಾನದವರು ಎಂಬುದು ವಿಶೇಷ!

ಪಾಕಿಸ್ಥಾನದ ಇಂಥ ಓರ್ವ ಅಂಗವಿಕಲ ವನಿತಾ ಅಭಿಮಾನಿ ಗಾಲಿಕುರ್ಚಿಯಲ್ಲಿ ಕುಳಿತು ಕೊಹ್ಲಿ ಭೇಟಿಗಾಗಿ ಕಾದ ಘಟನೆಗೆ ದುಬಾೖ ಸಾಕ್ಷಿಯಾಗಿದೆ. ಕೊಹ್ಲಿ ನೆಟ್‌ ಪ್ರ್ಯಾಕ್ಟೀಸ್‌ ನಡೆಸುತ್ತಿದ್ದ ವೇಳೆ ಈ ಅಭಿಮಾನಿ ಮೈದಾನದ ಹೊರಗೆ ಕಾದು ಕುಳಿತ್ತಿದ್ದರು. ಕೊಹ್ಲಿ ಅವರನ್ನು ಭೇಟಿ ಮಾಡಿ ಹೋಗುವುದು ಅವರ ಉದ್ದೇಶವಾಗಿತ್ತು. ಕೊಹ್ಲಿ ಈ ಅಭಿಮಾನಿಯನ್ನು ನಿರಾಸೆಪಡಿಸಲಿಲ್ಲ. ಅಭ್ಯಾಸ ಮುಗಿದ ಬಳಿಕ ಆಕೆಯನ್ನು ಭೇಟಿಯಾಗಿ ಮಾತನಾಡಿಸಿದರು. ಫೋಟೊ ಕೂಡ ತೆಗೆಸಿಕೊಂಡರು. “ಅಬ್ಟಾ… ನನ್ನ ಖುಷಿಗೆ ಪಾರವೇ ಇಲ್ಲ’ ಎಂಬುದು ಆ ಮಹಿಳೆ ಉದ್ಗಾರವಾಗಿತ್ತು.

ಮತ್ತೋರ್ವ ಪಾಕ್‌ ಅಭಿಮಾನಿ
ಇದು ಮತ್ತೋರ್ವ ಅಭಿಮಾನಿಯ ಕತೆ. ಗುರುವಾರ ಅಭ್ಯಾಸ ಮುಗಿಸಿದ ಕೊಹ್ಲಿ ತಂಡದ ಬಸ್‌ ಏರಿ ಕುಳಿತಾಗ ಪಾಕಿಸ್ಥಾನದ ಮತ್ತೋರ್ವ ಅಭಿಮಾನಿ, ಕೊಹ್ಲಿ ಫೋಟೊ ತೆಗೆಯಲು ವಿಫ‌ಲ ಪ್ರಯತ್ನ ನಡೆಸುತ್ತಿದ್ದ. ಭದ್ರತಾ ಸಿಬಂದಿ ಆತನನ್ನು ತಡೆಯುತ್ತಿದ್ದರು. ಇದನ್ನು ಗಮನಿಸಿದ ಕೊಹ್ಲಿ ಸ್ವತಃ ಕೆಳಗಿಳಿದು ಆತನೊಂದಿಗೆ ಫೋಟೊ ತೆಗೆಸಿಕೊಂಡರು.ಬಳಿಕ ಪಾಕ್‌ ಟಿವಿ ಜತೆ ಮಾತಾಡಿದ ಆತ, “ನಾನು ವಿರಾಟ್‌ ಕೊಹ್ಲಿ ಅವರ ಬಹು ದೊಡ್ಡ ಅಭಿಮಾನಿ. ಅವರೊಡನೆ ನಿಂತು ಫೋಟೊ ತೆಗೆಸಿಕೊಳ್ಳಲೆಂದೇ ನಾನು ಪಾಕಿಸ್ಥಾನದಿಂದ ಬಂದದ್ದು…’ ಎಂಬುದಾಗಿ ಹೇಳಿದ್ದ.

ತಂಡಗಳು
ಶ್ರೀಲಂಕಾ
ಶ್ರೀಲಂಕಾ: ದಸುನ್‌ ಶಣಕ (ನಾಯಕ), ದನುಷ್ಕ ಗುಣತಿಲಕ, ಪಥುಮ್‌ ನಿಸ್ಸಂಕ, ಕುಸಲ್‌ ಮೆಂಡಿಸ್‌, ಚರಿತ ಅಸಲಂಕ, ಭನುಕ ರಾಜಪಕ್ಸ, ಅಶೇನ್‌ ಬಂಡಾರ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಮಹೀಶ್‌ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್‌ ಜಯವಿಕ್ರಮ, ಚಮಿಕ ಕರುಣಾರತ್ನೆ, ದಿಲ್ಶನ್‌ ಮದುಶಂಕ, ಮತೀಶ ಪತಿರಣ, ನುವನಿಂದು ಫೆರ್ನಾಂಡೊ, ದಿನೇಶ್‌ ಚಂಡಿಮಾಲ್‌.

ಅಫ್ಘಾನಿಸ್ಥಾನ
ಮೊಹಮ್ಮದ್‌ ನಬಿ (ನಾಯಕ), ನಜೀಬುಲ್ಲ ಜದ್ರಾನ್‌, ಜಜಾಯ್‌, ಅಜ್ಮತುಲ್ಲ ಒಮರ್‌ಜಾಯ್‌, ಫ‌ರೀದ್‌ ಅಹ್ಮದ್‌ ಮಲಿಕ್‌, ಫ‌ಜಲ್‌ ಹಕ್‌ ಫಾರೂಖೀ, ಹಶ್ಮತುಲ್ಲ ಶಾಹಿದಿ, ಹಜ್ರತುಲ್ಲ ಜಜಾಯ್‌, ಇಬ್ರಾಹಿಂ ಜದ್ರಾನ್‌, ಕರೀಂ ಜನತ್‌, ಮುಜೀಬ್‌ ಉರ್‌ ರೆಹಮಾನ್‌, ನವೀನ್‌ ಉಲ್‌ ಹಕ್‌, ನೂರ್‌ ಅಹ್ಮದ್‌, ರೆಹಮಾನುಲ್ಲ ಗುರ್ಬಜ್‌, ರಶೀದ್‌ ಖಾನ್‌, ಸಮಿಯುಲ್ಲ ಶಿನ್ವರಿ, ಉಸ್ಮಾನ್‌.

ಇಂದಿನ ಪಂದ್ಯ
ಶ್ರೀಲಂಕಾ-ಅಫ್ಘಾನಿಸ್ಥಾನ
ಸ್ಥಳ: ದುಬಾೖ ; ಆರಂಭ: 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್

 

Advertisement

Udayavani is now on Telegram. Click here to join our channel and stay updated with the latest news.

Next