Advertisement

TOBY: ನಿರೀಕ್ಷೆ ಹೆಚ್ಚಿಸಿದ ಟೋಬಿ

03:32 PM Aug 06, 2023 | Team Udayavani |

“ಒಂದು ಮೊಟ್ಟೆಯ ಕಥೆ’ ಮೂಲಕ ಸೈಲೆಂಟ್‌ ಆಗಿ ಬಂದ ರಾಜ್‌ ಬಿ ಶೆಟ್ಟಿ ಈಗ ಸಖತ್‌ ವೈಲೆಂಟ್‌ ಆಗಿದ್ದಾರೆ. ಈಗಾಗಲೇ “ಗರುಡ ಗಮನ ವೃಷಭ ವಾಹನ’ ಮೂಲಕ ಕೈಗೆ ರಕ್ತ ಮೆತ್ತಿಕೊಂಡಿದ್ದ ರಾಜ್‌ ಶೆಟ್ಟಿ ಈ ಬಾರಿ ಇಡೀ ಪೂರ್ತಿ ದೇಹಕ್ಕೆ ರಕ್ತಾಭಿಷೇಕ ಮಾಡಿಕೊಂಡಂತಿದೆ. ಅವರ ಈ ರಕ್ತತರ್ಪಣಕ್ಕೆ ಕಾರಣವಾಗಿರೋದು “ಟೋಬಿ’.

Advertisement

ನಿಮಗೆ ಗೊತ್ತಿರುವಂತೆ ರಾಜ್‌ ಬಿ ಶೆಟ್ಟಿ “ಟೋಬಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಆಗಸ್ಟ್‌ 25ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಫ‌ಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಸಿನಿಮಾದೊಳಗಿನ ಮಾಸ್‌ ಎಲಿಮೆಂಟ್ಸ್‌ ಅನ್ನು ಎತ್ತಿಹಿಡಿದಿದೆ.

ರೆಡ್‌ ಥೀಮ್‌ನೊಂದಿಗೆ ಮೂಡಿ ಬಂದಿರುವ ಈ ಫ‌ಸ್ಟ್‌ಲುಕ್‌ನಲ್ಲಿ ರಾಜ್‌ ಬಿ ಶೆಟ್ಟಿ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಮುಖದ ತುಂಬಾ ಕುರುಚಲು ಗಡ್ಡ, ಮೂಗಿನಲ್ಲೊಂದು ದೊಡ್ಡ ಮೂಗುತಿ, ತಲೆ, ಮೂಗಿನ ಮೇಲೆ ರಕ್ತ ಸೋರುತ್ತಿರುವ ಗಾಯ … ಹೀಗೆ ಔಟ್‌ ಅಂಡ್‌ ಔಟ್‌ ಮಾಸ್‌ ಫೀಲ್‌ ಕೊಡುವ “ಟೋಬಿ’ ಚಿತ್ರದ ಫ‌ಸ್ಟ್‌ ಲುಕ್‌ ವೈರಲ್‌ ಆಗಿದೆ.

ನೈಜ ಘಟನೆ ಸುತ್ತ ಟೋಬಿ

ಬರಹಗಾರ ಟಿ.ಕೆ.ದಯಾನಂದ್‌ ಅವರ ಕಥೆ ಈಗ “ಟೋಬಿ’ ಆಗಿದೆ. ಇದು ಕಾರವಾರದಲ್ಲಿ ಕಂಡ ಒಬ್ಬ ವಿಲಕ್ಷಣ ವ್ಯಕ್ತಿತ್ವದ ವ್ಯಕ್ತಿಯ ಕಥೆಯಂತೆ. ಅದನ್ನು ಈಗ ಸಿನಿಮಾ ಮಾಡಲಾಗಿದೆ. ರಾಜ್‌ ಬಿ ಶೆಟ್ಟಿ ಅವರಿಗೆ ಈ ಸಿನಿಮಾದ ಕಥೆ ತುಂಬಾ ಹೊಸದಾಗಿದೆಯಂತೆ. “ನನಗೆ ಈ ಸಿನಿಮಾದ ಕಥೆ ತುಂಬಾ ಹೊಸದೆನಿಸಿತು. ಮುಖ್ಯವಾಗಿ ನನ್ನ ಪಾತ್ರವೇ ವಿಭಿನ್ನವಾಗಿದೆ. ಅದರ ಜೊತೆಗೆ ನಿರೂಪಣೆ. ನಾವು ಕಂಫ‌ರ್ಟ್‌ ಝೋನ್‌ನಿಂದ ಆಚೆ ಬಂದು ಮಾಡಿರುವ ಸಿನಿಮಾವಿದು. ಇಲ್ಲಿ ಸಿಟ್ಟು, ಕ್ರೋಧ, ಆಕ್ರೋಶ ಎಲ್ಲವೂ ಇದೆ. ಅವೆಲ್ಲದಕ್ಕೂ ಒಂದು ಕಾರಣವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು’ ಎನ್ನುವುದು ರಾಜ್‌ ಬಿ ಶೆಟ್ಟಿ ಅವರ ಮಾತು. “ನನಗೆ ಗೊತ್ತಿಲ್ಲದ ವಿಚಾರಗಳನ್ನು ಕಲಿತು ಈ ಸಿನಿಮಾದಲ್ಲಿ ಹೇಳಿದ್ದೇನೆ’ ಎನ್ನಲು ರಾಜ್‌ ಶೆಟ್ಟಿ ಮರೆಯುವುದಿಲ್ಲ.

Advertisement

“ಟೋಬಿ’ ಚಿತ್ರ ಮೇಲ್ನೋಟಕ್ಕೆ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾದಂತೆ ಕಾಣುತ್ತಿದೆ. ಆದರೆ, ರಾಜ್‌ ಬಿ ಶೆಟ್ಟಿ ಹೇಳುವಂತೆ ಇದು ಔಟ್‌ ಅಂಡ್‌ ಔಟ್‌ ಫ್ಯಾಮಿಲಿ ಡ್ರಾಮಾ. ಚಿತ್ರದಲ್ಲಿ ಫ್ಯಾಮಿಲಿ ಎಮೋಶನ್ಸ್‌ಗೆ ಹೆಚ್ಚಿನ ಮಹತ್ವ ನೀಡಲಾಗಿದೆಯಂತೆ. “ಇದು ಕೌಟುಂಬಿಕ ಸಿನಿಮಾ. ಇದರಲ್ಲಿ ಫ್ಯಾಮಿಲಿ ಎಮೋಶನ್ಸ್‌ಗೆ ತುಂಬಾ ಸ್ಕೋಪ್‌ ಇದೆ. ಒಂದು ಕುಟುಂಬದ ನಡುವಿನ ಸಂಬಂಧ, ಅವರ ನಡುವಿನ ಬಂಧ ಯಾವ ರೀತಿಯದ್ದು ಎಂಬ ವಿಷಯವನ್ನು ನಾವು ಟೋಬಿಯ ಮೂಲಕ ಜನರಿಗೆ ಹೇಳಲಿದ್ದೇವೆ’ ಎನ್ನುವುದು ರಾಜ್‌ ಶೆಟ್ಟಿ ಮಾತು.

ಕುತೂಹಲ ಹೆಚ್ಚಿಸಿದ ಫ‌ಸ್ಟ್‌ಲುಕ್‌

ಕೆಲವು ಸಿನಿಮಾಗಳ ಫ‌ಸ್ಟ್‌ಲುಕ್‌ ಪೋಸ್ಟರ್‌ಗಳು ಸಿನಿಮಾದ ಮೇಲಿನ ಕುತೂಹಲವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸುತ್ತವೆ. ಸಿನಿಮಾದೊಳಗೆ ಏನಿರಬಹುದು, ನಾಯಕನ ಮುಖದ ಅಷ್ಟೊಂದು ರಗಡ್‌ ಯಾಕಿದೆ, ದೊಡ್ಡ ಮೂಗುತಿಯ ಹಿಂದಿನ ಕಥೆಯೇನು ಎಂಬ ಪ್ರಶ್ನೆಗಳು ಎದ್ದಿವೆ.

ನಾಯಕ ರಾಜ್‌ ಬಿ ಶೆಟ್ಟಿಗೆ ಅವರಿಗೆ ಪೋಸ್ಟರ್‌ ಇಂತಹ ಪ್ರಶ್ನೆಗಳನ್ನು ಹುಟ್ಟು ಹಾಕಬೇಕು ಎಂಬ ಆಸೆ ಇತ್ತಂತೆ. ಅದು ಈಗ ಸಫ‌ಲವಾಗಿದೆ. “ನನ್ನ ಪ್ರಕಾರ, ಜನರಿಗೆ ಸಿನಿಮಾ ಯಾವ ರೀತಿ ಇರುತ್ತದೆ ಎಂಬುದನ್ನು ಪೋಸರ್‌ ಹೇಳುವಂತಿರಬೇಕು. ಪೋಸ್ಟರ್‌ಗೂ ಕಥೆಗೂ ಸಂಬಂಧವಿಲ್ಲದೇ ಇದ್ದರೆ ನಮ್ಮ ಪ್ರಯತ್ನ ವ್ಯರ್ಥ. ಫೋಟೊ ಒಂದು ಕಥೆ ಹೇಳುವಂತಿರಬೇಕು. ನಾವು ಬಿಡುಗಡೆ ಮಾಡಿರುವ ಟೋಬಿ ಮೋಶನ್‌ ಪೋಸ್ಟರ್‌  ಚಿತ್ರದೊಳಗಿನ ಕೆಲವು ಅಂಶಗಳನ್ನು ಹೇಳುತಿದೆ. ಈ ಪೋಸ್ಟರ್‌ ಬಿಟ್ಟ ನಂತರ ಸಿನಿಮಾ ಪ್ರೇಮಿಗಳಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿವೆ. ಮೂಗುತಿ, ಮುಖದ ಮೇಲಿನ ಇಂಟೆನ್ಸ್‌, ಬ್ಯಾಕ್‌ ಡ್ರಾಪ್‌… ಹೀಗೆ ಅನೇಕ ಅಂಶಗಳ ಬಗ್ಗೆ ಪ್ರಶ್ನೆ ಎದ್ದಿದೆ. ನಾನು ಹೋದಲ್ಲೆಲ್ಲಾ ಈ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ. ಈ ಮೂಲಕ ನನ್ನ ಉದ್ದೇಶ ಸಫ‌ಲವಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ.

ಬಿಗ್‌ ಬಜೆಟ್‌ನ ಚಿತ್ರ

“ಟೋಬಿ’ ಚಿತ್ರಕ್ಕೆ “ಮಾರಿ ಮಾರಿ ..ಮಾರಿಗೆ ದಾರಿ’ ಎಂಬ ಅಡಿಬರಹವಿದೆ. ರಾಜ್‌ ಬಿ ಶೆಟ್ಟಿ ಈವರೆಗಿನ ಚಿತ್ರಗಳ ಪೈಕಿ ಟೋಬಿ ಬಿಗ್‌ ಬಜೆಟ್‌ನ ಚಿತ್ರ. ಲೈಟರ್‌ ಬುದ್ಧ ಫಿಲಂಸ್‌, ಅಗಸ್ತ್ಯ ಫಿಲಂಸ್‌ ಹಾಗೂ ಕಾಫಿ ಗ್ಯಾಂಗ್‌ ಸ್ಟುಡಿಯೋ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ರೈ ಕಳಸ ಈ ಚಿತ್ರದ ನಿರ್ಮಾಪಕರು. ಶಾಮಿಲ್‌ ಬಂಗೇರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ರಾಜ್‌ ಬಿ ಶೆಟ್ಟಿ ರಚನೆ ಹಾಗೂ ಬಾಸಿಲ್‌ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಮಿಥುನ್‌ ಮುಕುಂದನ್‌ ಸಂಗೀತ ನಿರ್ದೇಶನ, ಪ್ರವೀಣ್‌  ಶ್ರೀಯನ್‌ ಛಾಯಾಗ್ರಹಣ, ಸಂಕಲನ ಹಾಗೂ ಅರ್ಜುನ್‌ ರಾಜ್‌ – ರಾಜಶೇಖರ್‌ ಅವರ ಸಾಹಸ ನಿರ್ದೇಶನ ಟೋಬಿ ಚಿತ್ರಕಿದೆ. ರಾಜ್‌ .ಬಿ. ಶೆಟ್ಟಿ, ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್‌ ರಾಜ್‌ ಶೆಟ್ಟಿ  ಮುಂತಾದವರು  ತಾರಾಬಳಗದಲ್ಲಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ “ಟೋಬಿ’ ಚಿತ್ರ ನಿರೀಕ್ಷೆ ಹೆಚ್ಚಿಸಿರುವುದಂತೂ ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next