Advertisement

ತಂಬಾಕು ಸಂಪೂರ್ಣ ನಿಷೇಧಕ್ಕೆ ಚಿಂತನೆ

06:40 AM Jan 05, 2019 | Team Udayavani |

ಬೆಂಗಳೂರು: ಗುಜರಾತ್‌ನಲ್ಲಿ ಮದ್ಯ ನಿಷೇಧಿಸಿರುವಂತೆ ರಾಜ್ಯದಲ್ಲಿ ತಂಬಾಕು ಸೇವನೆ ನಿಷೇಧಕ್ಕೆ ಅವಕಾಶವಿದೆಯೇ ಎಂಬ ಕುರಿತು ಚರ್ಚಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. 

Advertisement

ಬಿಬಿಎಂಪಿ ವತಿಯಿಂದ ಶುಕ್ರವಾರ ಮಲ್ಲೇಶ್ವರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಧೂಮಪಾನ ಮುಕ್ತ ಬೆಂಗಳೂರು ಅಭಿಯಾನ ವರದಿ ಹಾಗೂ ಮೊಬೈಲ್‌ ಆ್ಯಪ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಿರಂತರ ಜಾಗೃತಿಯಿಂದಾಗಿ ರಾಜ್ಯದಲ್ಲಿ ತಂಬಾಕು ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ. ತಂಬಾಕು ಬಳಕೆ ಸಂಪೂರ್ಣವಾಗಿ ನಿಷೇಧಿಸುವುದರಿಂದ ಸಾವಿಗೀಡಾಗುವವರ ಸಂಖ್ಯೆ ಕಡಿಮೆಯಾಗಲಿದೆ ಎಂದರು. 

ಧೂಮಪಾನ ಹಾಗೂ ತಂಬಾಕು ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯ ಎಂಬ ಅರಿವಿದ್ದರೂ, ಜನರು ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಸೇವೆಗೆ ಮುಂದಾಗುತ್ತಿರುವುದು ವಿಷಾದದ ಸಂಗತಿ . ತಂಬಾಕು ಪದಾರ್ಥಗಳ ಬಳಕೆ ನಿಯಂತ್ರಣ ಕಾಯ್ದೆ ಬರುವ ಮೊದಲೇ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸರು ಅಭಿಯಾನ ನಡೆಸಿದ್ದರಿಂದ ತಂಬಾಕು ಬಳಕೆದಾರರ ಸಂಖ್ಯೆ ರಾಜ್ಯದಲ್ಲಿ ಕಡಿಮೆಯಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ  ಶೇ.72ರಷ್ಟು ಜನರು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಬೆಂಗಳೂರನ್ನು ಧೂಮಪಾನ ಮುಕ್ತ ನಗರವನ್ನಾಗಿಸಲು ಬಿಬಿಎಂಪಿ ಹಾಗೂ ಪೊಲೀಸ್‌ ಅಧಿಕಾರಿಗಳು ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕನಿಷ್ಠ ಕಾಲೇಜುಗಳ ಬಳಿ ತಂಬಾಕು ನಿಷೇಧಿಸಿ: ನಗರದಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಆಸ್ಪತ್ರೆಗಳಿಂದ 100 ಅಡಿ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂಬ ನಿಯಮವಿದೆ. ಆದರೆ, ಕಾಲೇಜು ಗೊಡೆಗಳಿಗೆ ಹೊಂದಿಕೊಂಡ ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ. ಕನಿಷ್ಠ ಪಕ್ಷ ಶಾಲಾ-ಕಾಲೇಜುಗಳ ಬಳಿಯಿರುವ ಅಂಡಿಗಳನ್ನಾದರೂ ತೆರವುಗೊಳಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಎಂದು ಪರಮೇಶ್ವರ್‌ ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದರು. 

Advertisement

ಆ್ಯಪ್‌ ಮೂಲಕ ದೂರು ಕೊಡಿ: ರಾಜಧಾನಿಯನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡಲು ವಿವಿಧ ಸಂಸ್ಥೆಗಳು ಮುಂದಾಗಿದ್ದು, ಅದಕ್ಕಾಗಿ “ತಂಬಾಕು ಮುಕ್ತ ಬೆಂಗಳೂರು’ ಆ್ಯಪ್‌ನ್ನು ಅಭಿವೃದ್ಧಿಪಡಿಸಿವೆ. ಅದರಂತೆ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಧೂಮಪಾನ ಮಾಡುತ್ತಿದ್ದರೆ ಅದನ್ನು ಫೋಟೋ ಹಾಗೂ ವಿಳಾಸವನ್ನು ಆ್ಯಪ್‌ನಲ್ಲಿ ನಮೂದಿಸಿದರೆ, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅವರಿಗೆ ದಂಡ ವಿಧಿಸಲಿದ್ದಾರೆ.

ಸಿಗರೇಟ್‌ ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯಿದೆ 2003ರ ಅನ್ವಯ ಈಗಾಗಲೇ ನಗರದಲ್ಲಿ ಧೂಮಪಾನ, ತಂಬಾಕು ನಿಷೇಧಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಪಾಲಿಕೆಯ ನಾಲ್ಕು ವಲಯಗಳನ್ನು ಧೂಮಪಾನ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ನಾಲ್ಕು ವಲಯಗಳನ್ನೂ ಧೂಮಪಾನ ಮುಕ್ತಗೊಳಿಸಲು ಕ್ರಮಕೈಗೊಳ್ಳಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ವಲಯವಾರು ಧೂಮಪಾನ ಮುಕ್ತತೆ ವಿವರ
ವಲಯ    ಮುಕ್ತತೆ ಪ್ರಮಾಣ

-ದಕ್ಷಿಣ    ಶೇ.67
-ಬೊಮ್ಮಹಳ್ಳಿ    ಶೇ.65
-ದಾಸರಹಳ್ಳಿ    ಶೇ.59
-ಆರ್‌.ಆರ್‌.ನಗರ    ಶೇ.56
-ಪಶ್ಚಿಮ    ಶೇ.8
-ಪೂರ್ವ    ಶೇ.9
-ಮಹದೇವಪುರ    ಶೇ.5
-ಯಲಹಂಕ    ಶೇ.3

ಧೂಮಪಾನ ನಿಷೇಧ ಫ‌ಲಕ ಅಳವಡಿಕೆ ವಿವರ
ವಿಧಗಳು    ಅಳವಡಿಕೆ ಪ್ರಮಾಣ

-ಆಸ್ಪತ್ರೆಗಳು    ಶೇ.26.8
-ಶಾಲಾ-ಕಾಲೇಜು    ಶೇ.27.4
-ಸಾರಿಗೆ    ಶೇ.30
-ತಿಂಡಿ-ತಿನಿಸು ಮಳಿಗೆ    ಶೇ.34.7
-ಚಿತ್ರಮಂದಿರ    ಶೇ.40
-ಸಭಾಂಗಣಗಳು    ಶೇ.16.2
-ಕಚೇರಿಗಳು    ಶೇ.25.4
-ಸಾರ್ವಜನಿಕ ಸ್ಥಳಗಳು    ಶೇ.49.8

Advertisement

Udayavani is now on Telegram. Click here to join our channel and stay updated with the latest news.

Next