Advertisement
ಕಳೆದ ಮೇ ತಿಂಗಳಲ್ಲಿ ಬಿದ್ದ ಭರಣಿ ಮಳೆ ಮತ್ತು ನೀರಾವರಿ ವ್ಯವಸ್ಥೆ ಹೊಂದಿರುವ ರೈತರು ಏಪ್ರಿಲ್ ತಿಂಗಳಲ್ಲಿ ಜಮೀನಿಗೆ ತಂಬಾಕು ಗಿಡಗಳನ್ನು ನಾಟಿ ಮಾಡಿದ್ದ ತಂಬಾಕು ಎಲೆಗಳು ಇಂದು ಕೊಯ್ಲಿಗೆ ಬಂದು ನಿಂತಿವೆ. ಬೆಳೆಗಾರರು ತಂಬಾಕು ಸೊಪ್ಪನ್ನು ಹದ ಮಾಡುವ ಕೆಲಸದಲ್ಲಿ ನಿರತರಾಗಿರುವುದು ತಾಲೂಕಿನಾದ್ಯಂತ ಕಂಡು ಬರುತ್ತಿದೆ.
Related Articles
Advertisement
ಇಳುವರಿ: ಒಂದು ಎಕರೆಯಲ್ಲಿ ಉತ್ತಮ ಇಳುವರಿ ಬಂದರೆ 700 ರಿಂದ 800 ಕೆ.ಜಿ. ತಂಬಾಕು ಬೆಳೆಯಬಹುದು. ಸರಾಸರಿ ಒಂದು ಕೆ.ಜಿ. ತಂಬಾಕು ಬೆಳೆಯಲು ರೈತರಿಗೆ 100 ರಿಂದ 120 ರೂ. ಖರ್ಚು ತಗಲುತ್ತದೆ. 2018-19ನೇ ಸಾಲಿನಲ್ಲಿ ಪಿರಿಯಾಪಟ್ಟಣ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ತಂಬಾಕಿಗೆ 168 ರೂ.ಗಳು ಬೆಳೆಗಾರರಿಗೆ ಸಿಕ್ಕ ಅತ್ಯಧಿಕ ಮೊತ್ತವಾಗಿದ್ದು, ಈ ಬಾರಿ ಸರಾಸರಿ 220 ರೂ.ಗೂ ಹೆಚ್ಚಿನ ಮೊತ್ತ ಸಿಕ್ಕಿದರೆ ಮಾತ್ರ ಪ್ರಸಕ್ತ ವರ್ಷ ತಂಬಾಕು ಬೆಳೆಗಾರರು ಚೇತರಿಕೊಂಡು, ಈಗಾಗಲೇ ಲಕ್ಷಾಂತರ ರೂ ಸಾಲ ಮಾಡಿ ಬೆಳೆ ಬೆಳೆದ ರೈತ ನೆಮ್ಮದಿಯಿಂದ ಬದುಕಲು ಸಾಧ್ಯ.
ಸೌದೆಗೆ ಬೇಡಿಕೆ: ತಂಬಾಕು ಹದಗೊಳಿಸಲು ಸಾಕಷ್ಟು ಸೌದೆ ಅತ್ಯಗತ್ಯವಿದ್ದು, ಈ ಸೌದೆಗೆ ಟನ್‌ಗೆ 3,500 ದಿಂದ 4,000 ರೂ.ಗೂ ಅಧಿಕವಾಗಿದೆ. ಈಗಾಗಲೇ ಪಿರಿಯಾಪಟ್ಟಣ ತಾಲೂಕು ಸೇರಿದಂತೆ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದ ಕಾಫಿ, ನೀಲಗಿರಿ, ಹರ್ಕಿಲಸ್, ಹುಣಸೆ, ಹಲಸು, ಮಾವು ಸೇರಿದಂತೆ ವಿವಿಧ ಕಾಡು ಜಾತಿಯ ಸೌದೆಗಳನ್ನು ಪಟ್ಟಣಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಒಂದು ಎಕರೆಯಲ್ಲಿ ಬೆಳೆದ ತಂಬಾಕು ಹದ ಮಾಡಲು ಕನಿಷ್ಠ 50 ಸಾವಿರ ರೂ.ನಷ್ಟು ಸೌದೆ ಬೇಕಾಗುತ್ತಿದೆ.
ಉತ್ತಮ ಬೆಲೆ ನಿರೀಕ್ಷೆ: ಈ ಬಾರಿ ತಂಬಾಕು ಬೆಳೆಗಾರರು ತಾಲೂಕಿನಾದ್ಯಂತ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶಗಳಿಂತಲೂ ಹೆಚ್ಚು ಪ್ರದೇಶದಲ್ಲಿ ತಂಬಾಕನ್ನು ಬೆಳೆದಿದ್ದು, ಉತ್ತಮ ದರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ನೆರೆಯ ಆಂಧ್ರ ಪ್ರದೇಶದಲ್ಲಿ ತಂಬಾಕು ಖರೀದಿ ಕೇಂದ್ರ ಪ್ರಾರಂಭವಾಗಿ ರೈತರು ಬೆಳೆದಿರುವ ತಂಬಾಕಿಗೆ ಪ್ರತಿ ಕೆ.ಜಿ.ಗೆ 203 ರೂ. ನಿಗದಿ ಮಾಡಿ ರೈತರಿಂದ ಖರೀದಿಸಲಾಗುತ್ತಿದೆ.
ರಾಜ್ಯದಲ್ಲಿಯೂ ಇದಕ್ಕಿಂತ ಹೆಚ್ಚಿನ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ರೈತರು ತಂಬಾಕು ಬೆಳೆ ಬೆಳೆಯುವುದಕ್ಕಾಗಿ ಬ್ಯಾಂಕುಗಳಿಂದ, ಖಾಸಗಿಯವರಿಂದ ಸಾಲ ಪಡೆದು ಹಾಗೂ ತಮ್ಮಲ್ಲಿದ್ದ ಒಡವೆಗಳನ್ನು ಗಿರವಿ ಇಟ್ಟು ಈಗಾಗಲೇ ಸಾಕಷ್ಟು ಹಣ ವ್ಯಯ ಮಾಡಿರುವ ಬೆಳೆಗಾರರು ತಂಬಾಕು ಖರೀದಿ ಮಾಡುವ ಕಂಪನಿಗಳು ನಿಗದಿ ಮಾಡುವ ಮೊತ್ತದ ಮೆಲೆ ತಮ್ಮ ಅಳಿವು ಉಳಿವಿನ ಪ್ರಶ್ನೆ ಇರುತ್ತದೆ ಎಂದು ಹೇಳುವುದನ್ನು ಅಲ್ಲಗಳಿಯುವಂತಿಲ್ಲ.
ತಂಬಾಕು ಕೆಲಸಕ್ಕೆ ಕೂಲಿ ದುಬಾರಿ: ತಂಬಾಕು ಹದ ಮಾಡುವ ಕೆಲಸದಲ್ಲಿ ನಿರತರಾದ ಪುರುಷರಿಗೆ ದಿನ ಒಂದಕ್ಕೆ 600 ರಿಂದ 700 ರೂ. ಹಾಗೂ ಮಹಿಳೆಯರಿಗೆ ಹೊಗೆಸೊಪ್ಪು ಕೊಯ್ಲು ಮಾಡಿ ತಂದು ಅದಕ್ಕೆ ದಾರ ಹಾಕಿ ಕಟ್ಟಲು ಒಂದು ಕಡ್ಡಿಗೆ( ಸರಕ್ಕೆ) 8 ರೂಪಾಯಿಗಳಂತೆ ನಿಗದಿಪಡಿಸಲಾಗಿದ್ದು, ಪ್ರತಿ ಮಹಿಳೆಯರು ದಿನಕ್ಕೆ 600 ರಿಂದ 700 ರೂ. ವರೆಗೆ ಕೂಲಿ ಪಡೆಯುತ್ತಾರೆ.
ಕೆಲವು ಭಾಗಗಳಲ್ಲಿ ಮಹಿಳಾ ಕಾರ್ಮಿಕರು 6 ರಿಂದ 7 ಜನರ ಗುಂಪು ಮಾಡಿಕೊಂಡು ಪ್ರತಿ ಬ್ಯಾರೆನ್ ಒಂದಕ್ಕೆ ಸೊಪ್ಪು ಕೊಯ್ಲು ಮಾಡಿ ಕಡ್ಡಿಗೆ ಧಾರ ಕಟ್ಟಲು ಸುಮಾರು ರೂ. 5000 ಕ್ಕೂ ಹೆಚ್ಚು ಹಣ ಪಡೆಯುತ್ತಿರುವುದು ಕಂಡುಬರುತ್ತದೆ. ಇದಲ್ಲದೇ ಈ ಕೆಲಸದಲ್ಲಿ ನಿತರರಾದವರಿಗೆ ಇದರೊಂದಿಗೆ ಕೂಲಿಯ ಜೊತೆಗೆ ಕಾಫೀ, ಟೀ, ಊಟ ತಿಂಡಿಯನ್ನು ನೀಡಬೇಕು. ಒಟ್ಟಾರೆ ಒಬ್ಬ ಕೂಲಿ ಆಳಿಗೆ ದಿನಕ್ಕೆ ಕನಿಷ್ಠ 600 ಕ್ಕೂ ಹೆಚ್ಚು ಖರ್ಚು ಬರುತ್ತಿದೆ ಎಂದು ಬೆಳೆಗಾರರು ಹೇಳುತ್ತಾರೆ.
* ಪಿ.ಎನ್.ದೇವೇಗೌಡ