ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಹಾಗೂ ಚಿಲ್ಕುಂದ ಹರಾಜು ಮಾರುಕಟ್ಟೆಗಳಿಗೆ ಭೇಟಿ ನೀಡಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದಾಗಿ ತಂಬಾಕು ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕಿ ಹಾಗೂ ಪ್ರಭಾರ ಅಧ್ಯಕ್ಷೆ ಕೆ.ಸುನೀತಾ ಭರವಸೆ ನೀಡಿದರು.
ಮಾರುಕಟ್ಟೆ ವ್ಯವಸ್ಥೆ ಪರಿಶೀಲಿಸಿ ತಂಬಾಕು ಬೆಳೆಗಾರರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಅವರು, ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸಲು ಕೂಡಲೇ ಇಲ್ಲಿನ ಅಧಿಕಾರಿಗಳಿಗೆ ನಿರ್ದೇಶಿಸುತ್ತೇನೆ. ಮಾರುಕಟ್ಟೆಯಲ್ಲಿ ಪಾರದರ್ಶಕತೆ ಅನುಸರಿಸಲಾಗುತ್ತಿದೆ. ಖರೀದಿದಾರ ಕಂಪನಿಗಳಿಗೂ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಸೂಚಿಸಿದ್ದೇನೆ. ತಂಬಾಕು ಉತ್ಪಾದನಾ ಪ್ರಮಾಣ 90-95 ಮಿಲಿಯನ್ ಇರುವುದರಿಂದ ಉತ್ತಮ ದರ ಸಿಗಬಹುದೆಂಬ ಆಶಾಭಾವನೆ ಇದೆ ಎಂದರು.
ಬೆಳೆಗಾರರು ಹರಾಜು ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಮನವಿಗೆ ಸ್ಪಂದಿಸಿದ ಸುನೀತಾ ಅಧಿಕಾರ ವಹಿಸಿಕೊಂಡು ಕೇವಲ ಮೂರು ದಿನಗಳಾಗಿದೆ. ಎಲ್ಲಾ ಮಾಹಿತಿ ಪಡೆದು ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಪರವಾನಗಿ ರದ್ದು: ಕೆಲ ಬೆಳೆಗಾರರು ಖರೀದಿ ಬೈಯರ್ ತಮಗೆ ಉತ್ತಮ ಬೆಲೆ ನೀಡಲು ನಿರಾಕರಿಸುತ್ತಾರೆಂಬ ದೂರಿಗೆ ಸ್ಥಳದಲ್ಲಿದ್ದ ಬೈಯರ್ಗೆ ನೀವು ಉತ್ತಮ ತಂಬಾಕಿಗೆ ಉತ್ತಮ ಬೆಲೆ ನೀಡಬೇಕು, ತಾರತಮ್ಯ ಮಾಡಿದಲ್ಲಿ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಸಿದರು.
ಇವರೊಂದಿಗೆ ತಂಬಾಕು ಮಂಡಳಿ ಸದಸ್ಯ ಕಿರಣ್‌ಕುಮಾರ್, ನಿರ್ದೇಶಕ ಬಿಪಿನ್ ಚೌಧುರಿ, ಪ್ರಾದೇಶಿಕ ವ್ಯವಸ್ಥಾಪಕರಾದ ರತ್ನಸಾಗರ್, ಮಂಜುರಾಜ್, ಹರಾಜು ಅಧೀಕ್ಷಕ ಮಂಜುನಾಥ್, ರೈತರಾದ ವಿಷಕಂಠಯ್ಯ, ತಮ್ಮೇಗೌಡ, ವಿಶ್ವನಾಥ್, ಕರುಣಾಕರ್, ಜೆ.ಕೆ.ಶಿವಣ್ಣ ಇತರರಿದ್ದರು.