Advertisement

ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸ್ಪಂದಿಸಿ

12:02 PM Jan 21, 2018 | Team Udayavani |

ಮೈಸೂರು: ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಾಗ ಐಟಿಸಿ ಸೇರಿದಂತೆ ತಂಬಾಕು ಖರೀದಿ ಕಂಪನಿಗಳು ಬೆಳೆಗಾರರ ಕೈಹಿಡಿಯುವ ಕೆಲಸ ಮಾಡಬೇಕು ಎಂದು ಪಶು ಸಂಗೋಪನಾ ಸಚಿವ ಎ.ಮಂಜು ಹೇಳಿದರು.

Advertisement

ಭಾರತೀಯ ತಂಬಾಕು ಸಂಸ್ಥೆ, ಶನಿವಾರ ಮೈಸೂರಿನಲ್ಲಿ ಏರ್ಪಡಿಸಿದ್ದ ಪ್ರಗತಿಪರ ತಂಬಾಕು ಬೆಳೆಗಾರರಿಗೆ 18ನೇ ವರ್ಷದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ರೈತ ತನ್ನ ಭೂಮಿಯ ಫ‌ಲವತ್ತತೆ ಹಾಳುಮಾಡಿಕೊಂಡು, ಶ್ರಮಹಾಕಿ ತಂಬಾಕು ಬೆಳೆಯುವುದರಿಂದ ತಂಬಾಕು ಕಂಪನಿಗಳ ಆರ್ಥಿಕತೆ ಉತ್ತಮವಾಗಿದೆ. ಹೀಗಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ಬರಬೇಕು ಎಂದರು.

ಗುಣಮಟ್ಟದ ತಂಬಾಕು ಬೆಳೆಯುವಂತೆ ಬೆಳೆಗಾರರನ್ನು ಉತ್ತೇಜಿಸಲು ಐಟಿಸಿ ಕಂಪನಿ ಕಳೆದ 17 ವರ್ಷಗಳಿಂದಲೂ ಅತ್ಯುತ್ತಮ ತಂಬಾಕು ಬೆಳೆಗಾರರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ತಂಬಾಕು ಬೆಳೆಗಾರರಿಂದ ಐಟಿಸಿ ಕಂಪನಿಗೂ ಜಾಗತಿಕವಾಗಿ ಮನ್ನಣೆ ದೊರೆತಿದೆ. ಕೇಂದ್ರೀಯ ತಂಬಾಕು ಮಂಡಳಿ ಬೆಳೆಗಾರರ ಹಿತಕಾಯುವಲ್ಲಿ ಸಪಲವಾಗಿದ್ದು, ಮಂಡಳಿ ಇಲ್ಲವಾಗಿದ್ದರೆ ಬೆಳೆಗಾರರು ಸಮಸ್ಯೆ ಎದುರಿಸಬೇಕಾಗುತ್ತಿತ್ತು ಎಂದು ತಿಳಿಸಿದರು.

ಸಂಸದ ಆರ್‌.ಧ್ರುವನಾರಾಯಣ ಮಾತನಾಡಿ, ಈ ಬಾರಿ ಉತ್ತಮ ಬೆಳೆಬಂದಿದ್ದು, ಬೆಲೆಯೂ ಪರವಾಗಿಲ್ಲ, ಆದರೆ, ಕಳೆದ ಒಂದು ವಾರದಿಂದ ಬೆಲೆ ಕುಸಿತವಾಗಿದೆ. ಹೀಗಾಗಿ ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸಲು ಮುಂದಾಗಿ ಎಂದರು.

ಭಾರತೀಯ ತಂಬಾಕು ಸಂಸ್ಥೆ ನಿರ್ದೇಶಕ ಸೈಯದ್‌ ಮೊಹ್ಮದ್‌ ಅಹ್ಮದ್‌ ಮಾತನಾಡಿ, ವಿಶ್ವದಲ್ಲಿ ಅತಿ ಹೆಚ್ಚು ತಂಬಾಕು ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ದೇಶದಲ್ಲಿ 45.7 ದಶಲಕ್ಷ ಜನರ ಜೀವನಾಡಿಯಾಗಿದೆ.

Advertisement

ದೇಶದ ಬೊಕ್ಕಸಕ್ಕೆ ತಂಬಾಕು ಉತ್ಪನ್ನಗಳಿಂದ ವಾರ್ಷಿಕ 34 ಸಾವಿರ ಕೋಟಿ ರೂ. ಗೂ ಅಧಿಕ ತೆರಿಗೆ ಸಂದಾಯವಾಗುತ್ತಿದೆ. ಇದಲ್ಲದೇ, ತಂಬಾಕು ಉತ್ಪನ್ನಗಳ ರಫ್ತಿನಿಂದಾಗಿ ವಿದೇಶಿ ವಿನಿಮಯದ ರೂಪದಲ್ಲಿ 6 ಸಾವಿರ  ಕೋಟಿ ರೂ.ಗೂ ಅಧಿಕ ಹಣ ಬೊಕ್ಕಸಕ್ಕೆ ನೀಡಲಾಗುತ್ತಿದೆ ಎಂದು ಹೇಳಿದರು.

ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಸಿಗರೆಟ್‌ ಮೇಲಿನ ತೆರಿಗೆ  ಹೆಚ್ಚಳ ಮಾಡುತ್ತಾ ಬಂದಿರುವುದು ಮತ್ತು ತಂಬಾಕು ಬಳಕೆ ಮೇಲೆ ಸಾಕಷ್ಟು ನಿಯಂತ್ರಣ ಹೇರುತ್ತಾ ಬಂದಿರುವುದರಿಂದ ನಿಯಮಬದ್ಧವಾದ ಸಿಗರೆಟ್‌ ಉದ್ಯಮ ಸಾಕಷ್ಟು ಒತ್ತಡಕ್ಕೆ ಸಿಲುಕಿದೆ. ಕಳೆದ ಆರು ವರ್ಷಗಳಲ್ಲಿ ಸಿಗರೆಟ್‌ ಮೇಲಿನ ತೆರಿಗೆಯನ್ನು ಶೇ.202 ರಷ್ಟು ಹೆಚ್ಚಳ ಮಾಡಲಾಗಿದೆ.

ಭಾರೀ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತಿರುವ ಪರಿಣಾಮ ವಿದೇಶಗಳಿಂದ ಕಳ್ಳ ಸಾಗಣೆ ಮೂಲಕ ಸಿಗರೆಟ್‌ ಬರುವಂತಾಗಿದೆ. ದೇಶದಲ್ಲಿಯೂ ಕಾನೂನು ಬಾಹಿರವಾಗಿ ಮಾರಾಟವಾಗುವ ಸಿಗರೆಟಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾದರೆ, ನಿಯಮಬದ್ಧವಾಗಿ ಸಿಗರೆಟ್‌ ಉತ್ಪಾ$ದನೆ ಮಾಡುತ್ತಿರುವ ಉದ್ಯಮಗಳಿಗೆ ಭಾರೀ ಪೆಟ್ಟು ಬೀಳುತ್ತಿದೆ. ಇದಿಷ್ಟೇ ಅಲ್ಲದೇ, ತಂಬಾಕು ಬೆಳೆಗಾರರಿಗೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ತಂಬಾಕು ಮಂಡಳಿ ಕಾರ್ಯದರ್ಶಿ ಎ.ಶ್ರೀಧರಬಾಬು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ತಂಬಾಕು ಬೇಡವಾದ ಬೆಳೆ ಎಂಬಂತಾಗಿದ್ದು, ಜಿಎಸ್‌ಟಿ ಸಮಸ್ಯೆ, ತಂಬಾಕು ಸೇವನೆ ಕಡಿಮೆಯಾಗುತ್ತಿರುವುದು, ವಿದೇಶಿ ವ್ಯಾಪಾರ ನೀತಿ ಕಠಿಣವಾಗುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ ಎಂದರು.
ಶಾಸಕ ಸಾ.ರಾ.ಮಹೇಶ್‌, ತಂಬಾಕು ಮಂಡಳಿ ಉಪಾಧ್ಯಕ್ಷ ಪಿ.ವಿ.ಬಸವರಾಜಪ್ಪ, ಸದಸ್ಯ ಕಿರಣ್‌ ಕುಮಾರ್‌, ಶೇಷಗಿರಿರಾವ್‌, ಬಿ.ವಿ.ಜವರೇಗೌಡ, ಸಿಟಿಆರ್‌ಐನ ರಾಮಕೃಷ್ಣನ್‌ ಇತರರು ಇದ್ದರು.

17 ಮಂದಿಗೆ ಪ್ರಶಸ್ತಿ ಪ್ರದಾನ: ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಮತ್ತು ಅತ್ಯುತ್ತಮ ಗುಣಮಟ್ಟದ ತಂಬಾಕನ್ನು ಬೆಳೆದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ 17 ಮಂದಿ ಪ್ರಗತಿಪರ ತಂಬಾಕು ಬೆಳೆಗಾರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹುಣಸೂರು ತಾಲೂಕು ಲಕ್ಷ್ಮೀಪುರ ಗ್ರಾಮದ ಎಚ್‌.ಜೆ.ಮುತ್ತುರಾಜು ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next