Advertisement

ಉಡುಪಿ: ಅಪಾರ್ಟ್‌ಮೆಂಟ್‌ಗಳಿನ್ನು ತಂಬಾಕು ಮುಕ್ತ, ಕಾರ್ಯಯೋಜನೆ ಸಿದ್ಧ

12:14 AM Dec 12, 2022 | Team Udayavani |

ಉಡುಪಿ : ಜಿಲ್ಲೆಯಲ್ಲಿ ಇನ್ನು ಮಂದೆ ರೂಪುಗೊಳ್ಳಲಿರುವ ಅಪಾರ್ಟ್‌ಮೆಂಟ್‌ಗಳನ್ನು ತಂಬಾಕು ಮುಕ್ತವನ್ನಾಗಿಸಲು ಕಾರ್ಯಯೋಜನೆ ಸಿದ್ಧಗೊಂಡಿದೆ.

Advertisement

ರಾಜ್ಯದಲ್ಲಿಯೇ ಮೊದಲ ಬಾರಿಗೆ ಪೈಲಟ್‌ ಯೋಜನೆ ಮೂಲಕ ಉಡುಪಿಯಲ್ಲಿ ಇದನ್ನು ಜಿಲ್ಲಾ ಸರ್ವೇಕ್ಷಣ ಘಟಕದ ಮೂಲಕ ಜಾರಿಗೆ ತರಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಬಿಲ್ಡರ್‌(ಕ್ರೈಡೈ)ಗಳೊಂದಿಗೆ ಸಭೆ ನಡೆಸಲಾಗಿದ್ದು, ಇದಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗಿದೆ.

ಸರ್ವೇ ಕಾರ್ಯ
ಅಪಾರ್ಟ್‌ಮೆಂಟ್‌ಗಳಲ್ಲಿರುವ ಸೊಸೈಟಿ ಮೂಲಕ ಜಿಲ್ಲಾ ಸರ್ವೇಕ್ಷಣ ಘಟಕದ ಮೂಲಕ ಸರ್ವೇ ಕಾರ್ಯ ಮಾಡಲಾಗಿದೆ. ಗೂಗಲ್‌ ಫಾರ್ಮ್ ಮೂಲಕ ಕೆಲವೊಂದು ಪ್ರಶ್ನಾವಳಿಗಳನ್ನು 40 ಮಂದಿ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ನೀಡಲಾಗಿತ್ತು. ಸಾಮಾನ್ಯ ಅಪಾರ್ಟ್‌ ಮೆಂಟ್‌ಗಳು, ತಂಬಾಕು ಮುಕ್ತ ಅಪಾರ್ಟ್‌ ಮೆಂಟ್‌, ಸ್ಮೋಕಿಂಗ್‌ ಝೋನ್‌ ಅಪಾರ್ಟ್‌
ಮೆಂಟ್‌ ಈ ಪೈಕಿ 35 ಮಂದಿ ತಂಬಾಕು ಮುಕ್ತ ಅಪಾರ್ಟ್‌ ಮೆಂಟ್‌ ಬೇಕು ಎಂದು ತಿಳಿಸಿದ್ದರೆ. 3 ಮಂದಿ ಸ್ಮೋಕಿಂಗ್‌ ಝೋನ್‌ ಉಳ್ಳ ಅಪಾರ್ಟ್‌ ಮೆಂಟ್‌ ಬೇಕೆಂದು ತಿಳಿಸಿದ್ದರು.

ಪ್ರತ್ಯೇಕ ಸ್ಮೋಕಿಂಗ್‌ ಝೋನ್‌
ಸಂಪೂರ್ಣ ತಂಬಾಕು ಮುಕ್ತ ಮಾಡುವುದು ಅಥವಾ ಅಪಾರ್ಟ್‌ ಮೆಂಟ್‌ಗಳ ಮೇಲ್ಭಾಗದಲ್ಲಿ ಸ್ಮೋಕಿಂಗ್‌ ಝೋನ್‌ ಮಾಡುವ ಇಂಗಿತವನ್ನು ಬಿಲ್ಡರ್‌ಗಳು ವ್ಯಕ್ತಪಡಿಸಿದ್ದಾರೆ. ಸ್ಮೋಕಿಂಗ್‌ ಝೋನ್‌ಗಳ ನಿರ್ಮಾಣದಿಂದ ಇತರರಿಗೆ ಯಾವುದೇ ರೀತಿಯ ಉಪಟಳ ಆಗುವುದು ತಪ್ಪಲಿದೆ. ಸರ್ವೇಯಲ್ಲಿ ತಿಳಿಸಿದಂತೆ ತಂಬಾಕು ಮುಕ್ತ ಅಪಾರ್ಟ್‌ಮೆಂಟ್‌ಗೆ ಅಧಿಕ ದರ ವಿಧಿಸಿದರೂ ಖರೀಸಿದುವುದಾಗಿ 39 ಮಂದಿ ತಿಳಿಸಿದ್ದಾರೆ!

ನೂತನ ಅಪಾರ್ಟ್‌ಮೆಂಟ್‌ಗಳಿಗಷ್ಟೇ ಅನ್ವಯ
ಈ ಎಲ್ಲ ಪ್ರಕ್ರಿಯೆಗಳು ನೂತನ ಅಪಾರ್ಟ್‌ ಮೆಂಟ್‌ಗಳಿಗಷ್ಟೇ ಅನ್ವಯವಾಗಲಿವೆ. ಪ್ರಸ್ತುತ ಇರುವ ಅಪಾರ್ಟ್‌ಮೆಂಟ್‌ಗಳನ್ನೂ ತಂಬಾಕು ಮುಕ್ತಗೊಳಿಸಲು ಅಪಾರ್ಟ್‌ಮೆಂಟ್‌ ಸೊಸೈಟಿಯ ಸದಸ್ಯರಿಗೆ ಕಾರ್ಯಾಗಾರ ನಡೆಸಲು ಚಿಂತನೆ ಮಾಡಲಾಗಿದೆ. ಈ ಬಗ್ಗೆ ಸರ್ವೇ ಕಾರ್ಯನಡೆಸಲು ಪಬ್ಲಿಕ್‌ ಹೆಲ್ತ್‌ ಸ್ಟೂಡೆಂಟ್ಸ್‌ ಹಾಗೂ ಆರೋಗ್ಯ ಕಾರ್ಯಕರ್ತರು ಸಹಕರಿಸಲಿದ್ದಾರೆ.

Advertisement

ಹಳ್ಳಿಯ ಬಳಿಕ ಅಪಾರ್ಟ್‌ಮೆಂಟ್‌!
ಜಿಲ್ಲಾ ಸರ್ವೇಕ್ಷಣಾ ಘಟಕದ ಮೂಲಕ ಈಗಾಗಲೇ ಕೋಡಿಬೆಂಗ್ರೆಯನ್ನು ತಂಬಾಕು ಮುಕ್ತ ಹಳ್ಳಿಯನ್ನಾಗಿ ಘೋಷಣೆ ಮಾಡಲಾಗಿದೆ. ಮುಂದೆ ಕುಂದಾಪುರದ ಕೊರ್ಗಿ ಹಳ್ಳಿ ತಂಬಾಕು ಮುಕ್ತ ಹಳ್ಳಿಯತ್ತ ಹೆಜ್ಜೆ ಇರಿಸಿಕೊಂಡಿದೆ. ಈ ನಡುವೆ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಈ ನಡೆ ಅನುಸರಿಸಲಾಗಿದೆ. ಈ ನಡುವೆ ಇತರ ಹಳ್ಳಿಗಳನ್ನೂ ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ.

ಪೂರಕ ಸ್ಪಂದನೆ
ಅಪಾರ್ಟ್‌ಮೆಂಟ್‌ಗಳನ್ನು ತಂಬಾಕು ಮುಕ್ತಗೊಳಿಸುವುದು ಆರೋಗ್ಯ ದೃಷ್ಟಿಯಿಂದ ಅತೀ ಅಗತ್ಯವಾಗಿದೆ. ಈಗಾಗಲೇ ಕೆಲವೊಂದು ಹಳ್ಳಿಗಳಲ್ಲಿ ಇದನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಮುಂದೆ ನಿರ್ಮಾಣಗೊಳ್ಳಲಿರುವ ಅಪಾರ್ಟ್‌ ಮೆಂಟ್‌ಗಳಲ್ಲಿಯೂ ಇದನ್ನು ಜಾರಿಗೆ ತರುವ ಬಗ್ಗೆ ಮಾಲಕರೊಂದಿಗೆ ಸಭೆ ನಡೆಸಲಾಗಿದ್ದು, ಅವರು ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ.

-ಡಾ| ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next