ಬೀದರ: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಟರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗುರುವಾರ ನಗರದಲ್ಲಿ ಏರ್ಪಡಿಸಲಾಗಿದ್ದ ರ್ಯಾಲಿ ಗಮನ ಸೆಳೆಯಿತು. ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಪಿ. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ
ಕಚೇರಿ ಆವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.
ರ್ಯಾಲಿ ವೇಳೆ ತಂಬಾಕು ಆರೋಗ್ಯಕ್ಕೆ ಮಾರಕ, ತಮ್ಮ ಜೀವನವನ್ನು ಸಿಗರೇಟಿಗೆ ತಂಬಾಕಿಗೆ ನೀಡದಿರಿ, ನೀನು ಸಿಗರೇಟನ್ನು ಸುಡಬೇಡ. ಅದು ನಿನ್ನನ್ನು ಸುಡುತ್ತದೆ. ಎನ್ನುವ ನಾನಾ ಫಲಕಗಳನ್ನು ವಿದ್ಯಾರ್ಥಿಗಳು ಹಿಡಿದು ಘೋಷವಾಕ್ಯ ಕೂಗಿದರು. ಬ್ರಹ್ಮಕುಮಾರಿ ಈಶ್ವರೀಯ ವಿವಿ ಪ್ರತಿನಿಧಿಗಳು ತಂಬಾಕು ಮತ್ತು ಗುಟಕಾ ವ್ಯಸನಿಗಳಿಗೆ ಹೂವುಗಳನ್ನು ನೀಡಿ ವ್ಯಸನಗಳನ್ನು ದಾನ ಪೆಟ್ಟಿಗೆಯಲ್ಲಿ ಹಾಕಿ ವ್ಯಸನ ಮುಕ್ತರಾಗುವಂತೆ ಮನವಿ ಮಾಡುತ್ತಿರುವುದು ಕಂಡುಬಂದಿತು.
ರ್ಯಾಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವರಣದಿಂದ ಹೊರಟು, ಜನರಲ್ ಕರಿಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಚೌಬಾರಾ, ಗವಾನ್ ಸರ್ಕಲ್, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಮೋಹನ್ ಮಾರ್ಕೆಟ್ ಹಾಗೂ ಜಿಲ್ಲಾಸ್ಪತ್ರೆ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಗಳ ಕಚೇರಿಗೆ ಬಂದು ಮುಕ್ತಾಯವಾಯಿತು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್. ಸೆಲ್ವಮಣಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಎಂ.ಎ. ಜಬ್ಟಾರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಡಾ| ಶಿವಶಂಕರ ಬಿ., ಬ್ರಹ್ಮಕುಮಾರಿ ಪಾವನಧಾಮದ ಪ್ರತಿಮಾ ಬೆಹೇನ್, ಐಎಂಎ ಘಟಕದ ಅಧ್ಯಕ್ಷ ಡಾ| ಎ.ಸಿ. ಲಲಿತಮ್ಮ, ಶಾಹೀನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಖದೀರ್, ವಿಜಡಮ್ ಶಾಲೆ ಮುಖ್ಯಸ್ಥ ಆಸೀಫ್ ಅಲಿ, ಡಾ| ಸಿ. ಆನಂದರಾವ, ಡಾ| ಅನೀಲ ಚಿಂತಾಮಣಿ, ಡಾ| ಇಂದುಮತಿ ಪಾಟೀಲ, ಡಾ| ರಾಜಶೇಖರ ಪಾಟೀಲ, ಡಾ| ಸಂತೋಷ ಕಾಳೆ, ಡಾ| ಜಿ.ಎಸ್. ಬಿರಾದಾರ, ಡಾ| ಸುಭಾಷ ಕರ್ಪೂರ, ಡಾ| ವಿಶ್ವನಾಥ ನಿಂಬೂರ, ಡಾ| ದೀಪಕ, ಡಾ| ಕಪೀಲ, ಡಾ| ಮಹೇಶ, ಡಾ| ರಾಹುಲ, ಸುಭಾಷ ಮುದಾಳೆ, ಸಂಗಪ್ಪ ಕಾಂಬಳೆ, ಶ್ರಾವಣ ಜಾಧವ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಬ್ರಿಮ್ಸ್ ಬೋಧಕರ ಆಸ್ಪತ್ರೆ, ನಿರ್ಣೆ ಕ್ಯಾನ್ಸರ್ ಫೌಂಡೇಶನ್, ಎಸ್.ಬಿ. ಪಾಟೀಲ ದಂತ ವೈದ್ಯ ಮಹಾವಿದ್ಯಾಲಯ, ಎನ್.ಕೆ. ಜಾಬಶೆಟ್ಟಿ ಆಯುರ್ವೇದ ಮೆಡಿಕಲ್ ಕಾಲೇಜು, ಶಾಹಿನ್ ಕಾಲೇಜು, ವಿಜಡಮ್ ಶಿಕ್ಷಣ ಸಂಸ್ಥೆ, ಜಿಲ್ಲಾ ವಕೀಲರ ಸಂಘ, ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ಸರ್ಕಾರಿ ನರ್ಸಿಂಗ್ ಶಾಲೆ ಸೇರಿದಂತೆ ನಗರದ ವಿವಿಧ ಶಾಲಾ-ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಗೂ ನಾನಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ನಗರದ ಶಿವಾಜಿ ವೃತ್ತದ ಬಳಿ ತಂಬಾಕು ಸೇವನೆಯಿಂದ ಆಗುವ ಹಾನಿ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿದರು. ಜಿಲ್ಲಾಧಿಕಾರಿಗಳು, ಸಿಗರೇಟು ಪ್ರತಿಕೃತಿಗಳಿಗೆ ಬೆಂಕಿ ಹಚ್ಚುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಿದರು.