ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಹಾಗೂ ಕೊಡಗಿನ ಹೆಬ್ಟಾಗಿಲಾಗಿರುವ ಹುಣಸೂರು ತಾಲೂ ಕನ್ನು ತಂಬಾಕು ಮುಕ್ತವಾಗಿಸಲು ರೈತರಿಗೆ ಅರಿವು ಮೂಡಿಸಲು ರೋಟರಿಯೊಂದಿಗೆ ಕೈಜೋಡಿಸುವುದಾಗಿ ಬೆಂಗಳೂರಿನ ವೈದ್ಯಕೀಯ ಸಂಶೋಧನಾ ಕೇಂದ್ರದ ಮಕ್ಕಳ ಹೃದ್ರೋಗ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ತಿಳಿಸಿದರು.
ನಗರದ ರೋಟರಿ ವಿದ್ಯಾಸಂಸ್ಥೆಯ 25ನೇ ವರ್ಷದ ಅಂಗವಾಗಿ ಕಾಫಿ ವರ್ಕ್ಸ್ ಆವರಣದಲ್ಲಿ ಆಯೋಜಿಸಿದ್ದ ರಜತ ಮಹೋತ್ಸವದಲ್ಲಿ ಮಾತನಾಡಿದ ಅವರು, ಅರಣ್ಯ ಹೊಂದಿರುವ ಪುಣ್ಯಭೂಮಿ ಇದಾಗಿದ್ದು, ಇಂತಹ ಸ್ಥಳದಲ್ಲಿ ತಂಬಾಕು ಬೆಳೆಯುತ್ತಿರುವುದು ದುರಂತ. ಪ್ರತಿ ಒಂದು ಕೆ.ಜಿ. ತಂಬಾಕು ಹದಗೊಳಿಸಲು ಪ್ರತಿಯಾಗಿ 118 ಗಿಡಗಳನ್ನು ನೆಟ್ಟು ಬೆಳೆಸಬೇಕಿದೆ. ರೋಟರಿ ಸಂಸ್ಥೆ ಹುಣಸೂರಿನಲ್ಲಿ ರೈತರಿಗೆ ಪರ್ಯಾಯ ಬೆಳೆಗಳ ಅಗತ್ಯತೆ ಕುರಿತು ಅರಿವು ಮೂಡಿಸುವ ಕಾರ್ಯ ಕೈಗೊಂಡಲ್ಲಿ ತಾವು ಕೂಡ ಅದರಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದರು.
ಈ ನೆಲದಲ್ಲಿ ಆಂಗ್ಲಭಾಷೆ ವ್ಯಾಮೋಹಕ್ಕೆ ಸಿಲುಕಬೇಡಿ. ಕನ್ನಡ ನಿಮ್ಮ ಆದ್ಯತೆಯಾಗಲಿ. ಆಂಗ್ಲಭಾಷೆ ಕೂಡ ಬೇಕು. ಪ್ರಾಮುಖ್ಯತೆ ಕನ್ನಡವಾಗಲಿ ಎಂದರು. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ ಮಾತನಾಡಿ, ಹುಣಸೂರು ರೋಟರಿ ವಿದ್ಯಾಸಂಸ್ಥೆ ಪ್ರತಿವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪಿ.ರೋಹಿನಾಥ್, ನಗರಸಭಾಧ್ಯಕ್ಷ ಎಚ್.ವೈ.ಮಹದೇವ್, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ್ ವಿ.ರಾವ್, ವಿದ್ಯಾಸಂಸ್ಥೆ ಅಧ್ಯಕ್ಷ ಅನಂತರಾಜೇಅರಸ್, ರೋಟರಿ ಕ್ಲಬ್ ಅಧ್ಯಕ್ಷ ನರಹರಿ, ಕಾರ್ಯದರ್ಶಿ ಸುನೀತಾ ಇತರರಿದ್ದರು.
ಸಾಂಸ್ಕೃತಿಕ ಸೌರಭ: 25ನೇ ವರ್ಷದ ಸವಿ ನೆನಪಿಗಾಗಿ ವಿದ್ಯಾರ್ಥಿಗಳು ಕೇರಳ ನಾಡಿನ ತೈಯ್ಯಂ ನೃತ್ಯದ ಮೂಲಕ ಹಿರಣ್ಯ ಕಶಿಪುವಿನ ಸಂಹಾರ, ಕೇಳರದ ಮೋಹಿನಿ ಯಾಟ್ಟಂ ನೃತ್ಯ, ದಿ ವಿಲನ್ ಚಲನಚಿತ್ರದ ರಾವಣ ಸಂಹಾರ ನೃತ್ಯ, ಜಪಾನಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.