ಪಿರಿಯಾಪಟ್ಟಣ: ತಂಬಾಕು ಹರಾಜು ಮಾಟುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಮಹದೇವ್ ಕಗ್ಗಂಡಿ, ರೈತರ ಸಮಸ್ಯೆ ಆಲಿಸಿ, ಬಹುರಾಷ್ಟ್ರೀಯ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ರೈತರಿಗೆ ಸಮರ್ಪಕ ಬೆಲೆ ನೀಡಬೇಕು: ತಾಲೂಕಿನಾದ್ಯಂತ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ತುತ್ತಾಗಿ ತಂಬಾಕು ಬೆಳೆ ಗುಣಮಟ್ಟ ಮತ್ತು ಉತ್ಪಾದನೆ ಕುಂಠಿತಗೊಂಡು ರೈತರು ನಷ್ಟ ಅನುಭವಿಸುವಂತಾಗಿದೆ. ಜತೆಗೆ ಬಹುರಾಷ್ಟ್ರೀಯ ಕಂಪನಿಗಳು ರೈತರಿಗೆ ಸೂಕ್ತ ಬೆಲೆ ನೀಡದೆ ವಂಚಿಸುತ್ತಿವೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದ್ದು, ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ರೈತರ ಕುಟುಂಬಗಳು ಬೀದಿ ಪಾಲಾಗುತ್ತಿವೆ.
ಹೀಗಾಗಿ ಮಂಡಳಿ ಅಧಿಕಾರಿಗಳು ಮತ್ತು ಕಂಪನಿಗಳು ಹೊಂದಾಣಿಕೆಯಿಂದ ರೈತರ ಹಿತಕಾಯುವ ನಿಟ್ಟಿನಲ್ಲಿ ಅವರು ಬೆಳೆದ ತಂಬಾಕಿಗೆ ಹರಾಜು ಪ್ರಕ್ರಿಯೆ ಪ್ರಾರಂಭದ ಹಂತದಿಂದ ಕೊನೆ ಹಂತದವರೆಗೂ ಸರಾಸರಿ ಬೆಲೆ ನೀಡಿ ರೈತರನ್ನು ಉಳಿಸುವ ಕೆಲಸ ಮಾಡಬೇಕು. ತಂಬಾಕು ಮಂಡಳಿಯಲ್ಲಿ, ರಾಜಕೀಯ ಪ್ರವೇಶ, ಜಾತಿಭೇದ ಯಾವುದಕ್ಕೂ ಅವಕಾಶ ನೀಡದೆ ಮಾರುಕಟ್ಟೆಯಲ್ಲಿ ಎಲ್ಲಾ ರೈತರಿಗೂ ಸಮರ್ಪಕವಾದ ಬೆಲೆ ನೀಡಬೇಕು. ಅದೇ ರೀತಿ ರೈತರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದರು.
ವಿನಾ ಕಾರಣ ನನ್ನ ವಿರುದ್ಧ ಆರೋಪ: ಕೆಲವರು ನಾನು ತಂಬಾಕು ಮಂಡಳಿ ಮತ್ತು ಕಂಪನಿಯೊಂದಿಗೆ ಶಾಮೀಲಾಗಿ ಕಮಿಷನ್ ಪಡೆಯುತ್ತಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ಅದು ಸತ್ಯಕ್ಕೆ ದೂರ. ಹೀಗೆ ಮಾತಾಡುವವರಿಗೆ ಅದು ಶೋಭೆಯಲ್ಲ. ರೈತರು ಕಷ್ಟಪಟ್ಟು ದುಡಿದ ಹಣ ಮುಟ್ಟಿದ ಯಾರಿಗೂ ದೇವರು ಒಳ್ಳೆಯದನ್ನು ಮಾಡುವುದಿಲ್ಲ. ಅವರ ಕುಟುಂಬಗಳು ನಾಶವಾಗಿ ಹೋಗುತ್ತವೆ.
ಈ ರೀತಿ ಆರೋಪಿಸಿದವರು ಮುಂದೊಂದು ದಿನ ಪಶ್ಚತಾಪ ಪಡಬೇಕಾಗುತ್ತದೆ ಎಂದರು. ಪ್ರಾದೇಶಿಕ ತಂಬಾಕು ಮಂಡಳಿಯ ವ್ಯವಸ್ಥಾಪಕ ಕೆ.ವಿ.ತಲಾಪಸಾಯಿ ಮಾತನಾಡಿ, ರೈತರ ಶ್ರೇಯೋಭಿವೃದ್ಧಿಗಾಗಿಯೇ ತಂಬಾಕು ಮಂಡಳಿಯಿದೆ. ರೈತರಿಲ್ಲದಿದ್ದರೆ ಕಂಪನಿಗಳು ಉಳಿಯುವುದಿಲ್ಲ. ನಾವು ಆನ್‌ಲೈನ್ ಮುಖಾಂತರ ಬಿಡ್ ಕೂಗುವುದರಿಂದ ಮಧ್ಯವರ್ತಿಗಳಿಗೆ ಅವಕಾಶವಿಲ್ಲ.
ಮೇಲಾಧಿಕಾರಿಗಳೊಂದಿಗೆ ಮಾತನಾಡಿ ರೈತರಿಗೆ ಸರಾಸರಿ ಬೆಲೆ ಕೊಡಿಸಲು ಸಹಕರಿಸುವುದಾಗಿ ತಿಳಿಸಿದರು. ತಂಬಾಕು ಮಂಡಳಿ ಹರಾಜು ಅಧೀಕ್ಷಕ ಎಚ್.ಕೆ. ಗೋಪಾಲ, ಕೆ.ಎಸ್. ಮಂಜುನಾಥ, ಐಟಿಸಿ ಕಂಪನಿ ಅಧಿಕಾರಿಗಳಾದ ಪೂಣೇಶ್, ವಾಸು ಹಾಜರಿದ್ದರು.