ಎಚ್.ಡಿ.ಕೋಟೆ: ಮನುಷ್ಯನನ್ನು ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಆರ್ಥಿಕವಾಗಿ ದುರ್ಬಲಗೊಳಿಸುವ ತಂಬಾಕಿನಂತಹ ಮಾದಕ ವಸ್ತುಗಳಿಂದ ದೂರಾಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಮಾಧ್ಯಮಗಳ ಮೂಲಕ ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ಇಂದಿಗೂ ತಂಬಾಕು ಸೇವನೆ ಮಾಡುವವರ ಸಂಖ್ಯೆ ಇಳಿಮುಖವಾಗಿಲ್ಲ ಎಂದು ಪಟ್ಟಣ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಸಫìರಾಜ್ ಹುಸೇನ್ ಕಿತ್ತೂರು ವಿಷಾದ ವ್ಯಕ್ತಪಡಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ ಎಚ್.ಡಿ.ಕೋಟೆ ಮತ್ತು ತಾಲೂಕು ವಕೀಲರ ಸಂಘ ಹಾಗೂ ಸರ್ಕಾರಿ ಅಭಿಯೋಜಕರ ಸಹಯೋಗದೊಂದಿಗೆ ಪಟ್ಟಣ ನ್ಯಾಯಾಲಯದಲ್ಲಿ ತಂಬಾಕು ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗಿಡಕ್ಕೆ ನೀರೆರವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗ ಬರುತ್ತದೆ ಎಂಬ ಅರಿವನ್ನು ಗ್ರಾಮ ಮಟ್ಟದಲ್ಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪಾರಿಣಾಮ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಸಂಘ ಸಂಸ್ಥೆಗಳು ರೈತರು ತಂಬಾಕು ಬೆಳೆಯ ಬದಲು ಪರ್ಯಾಯ ಬೆಳೆಯಲು ಉತ್ತೇಜಿಸುವಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಅಭಿಯೋಜಕ ಎ.ಎನ್.ಮಧು ಮಾತನಾಡಿ, ತಂಬಾಕು ಸೇವನೆ ದೇಶದ ಯುವ ಶಕ್ತಿಗೆ ಮಾರಕವಾಗಿದ್ದು, ಇದರಿಂದ ದೇಶದ ಅಭಿವೃದ್ಧಿಯು ಕುಂಠಿತವಾಗಲಿದೆ. ಆದ್ದರಿಂದ ಮುಂದಿನ ಪ್ರಜೆಗಳ ಆರೋಗ್ಯದ ದೃಷ್ಟಿಯಿಂದ ದುಷ್ಪಾರಿಣಾಮಕಾರಿಯಾಗಿರುವ ತಂಬಾಕು ನಿಷೇಧ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಟ್ಟದಲ್ಲೇ ದೊಡ್ಡ ಚೆರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಸಂಗಮೇಶ್ವರ್, ಹಿರಿಯ ವಕೀಲರಾದ ಜಿ.ಎನ್.ನಾರಾಯಣಗೌಡ, ಕೆ.ಚಂದ್ರಶೇಖರ್, ಡಿ.ಆರ್.ಮಹೇಶ್, ಕೃಷ್ಣೇಗೌಡ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ವಕೀಲರಾದ ಎ.ಟಿ.ಕೃಷ್ಣ, ಚೌಡಳ್ಳಿ ಜವರಯ್ಯ, ಪುಟ್ಟಸ್ವಾಮಿ, ಉಮೇಶ್, ಸೋಮಶೇಖರ್, ಎಂ.ಬಿ.ಶ್ರೀನಿವಾಸ್, ಕರೀಗೌಡ, ಕುಮಾರ್, ಪ್ರವೀಣ್, ದಿನೇಶ್, ಹನುಮೇಶ್, ಹೇಮಂತ್, ಆರ್.ನಾಗೇಶ್, ಶಾಂತ, ಸರಸ್ವತಿ, ದೊರೆಸ್ವಾಮಿ ಸೇರಿದಂತೆ ನೂರಾರು ಕಕ್ಷಿದಾರರು ಸಾರ್ವಜನಿಕರು ಇದ್ದರು.