ಹುಣಸೂರು: ತಂಬಾಕಿನಲ್ಲಿ ಸುಮಾರು ನಾಲ್ಕು ಸಾವಿರದಷ್ಟು ಅಪಾಯಕಾರಿ ರಾಸಾಯನಿಕ ಆಂಶಗಳಿದ್ದು, ಇದರಿಂದಲೇ ಭಾರತದಲ್ಲಿ ನಿತ್ಯ 2500 ಮಂದಿ ಸಾವನ್ನಪ್ಪುತ್ತಿದ್ದರೆ, ವಿಶ್ವದ ಹತ್ತು ಸಾವಿನಲ್ಲಿ ಒಂದು ಸಾವು ತಂಬಾಕಿನಿಂದ ಉಂಟಾಗುತ್ತಿದೆ ಎಂದು ತಾಲೂಕು ಆರೋಗ್ಯಾಕಾರಿ ಡಾ.ದೇವತಾಲಕ್ಷ್ಮೀ ತಿಳಿಸಿದರು.
ನಗರದಲ್ಲಿ ತಾಲೂಕು ಆರೋಗ್ಯಾಕಾರಿಗಳ ಕಚೇರಿ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತಂಬಾಕು ಸೇವನೆ ವಿರೋಧಿ ದಿನದ ಪ್ರಯುಕ್ತ ಅರಿವು ಜಾಥಾ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯು ನಡೆಸಿರುವ ವಿವಿಧ ಸಂಶೋಧನೆಗಳಲ್ಲಿ ತಂಬಾಕಿನಲ್ಲಿ 4 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ರಾಸಾಯನಿಕಗಳು ಇದ್ದು, ಅನೇಕ ರೋಗಗಳಿಗೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿ ಸಿಗರೆಟ್-ಬೀಡಿ ಸೇವನೆಯಿಂದ 7 ನಿಮಿಷ ಆಯಸ್ಸು ಮೊಟಕುಗೊಳ್ಳುತ್ತದೆ. ಅಲ್ಲದೆ ಕೂದಲು ಉದುರುವಿಕೆ, ಕಣ್ಣಿನ ಪೊರೆ, ನರದೌರ್ಬಲ್ಯ, ಶ್ವಾಸಕೋಶದ ಕ್ಯಾನ್ಸರ್, ಹದಯ ತೊಂದರೆ ಸೇರಿದಂತೆ ಅನೇಕ ಕಾಯಿಲೆಗಳು ಬರಲಿದೆ ಎಂದರು.
ಪ್ರಪಂಚದಲ್ಲಿ ನಿತ್ಯ 70 ಸಾವಿರಕ್ಕೂ ಹೆಚ್ಚು ಹಾಗೂ ಭಾರತದಲ್ಲಿ 2500ಕ್ಕೂ ಹೆಚ್ಚು ಮಂದಿ ಪ್ರತಿದಿನ ತಂಬಾಕು ಸೇವನೆ ಸಂಬಂಧಿತ ಕಾಯಿಲೆಗಳಿಂದ ಮೃತಪಡುತ್ತಿದ್ದಾರೆ. ಸರ್ಕಾರ ಸಾಕಷ್ಟು ಕಾರ್ಯಕ್ರಮ, ಕಠಿಣ ಕಾಯ್ದೆಗಳನ್ನು ಜಾರಿಗೊಳಿಸಿದ್ದರೂ ನಿಯಂತ್ರಣಗೊಂಡಿಲ್ಲ. ಇದಕ್ಕೆ ಸ್ವಯಂ ನಿರ್ಬಂಧವೇ ಪರಿಣಾಮಕಾರಿ ಸಾಧನ ಎಂದರು.
ನಗರದ ಪ್ರಮುಖ ಬೀದಿಗಳಲ್ಲಿ ಜಾಥಾದಲ್ಲಿ ಅನಾಹುತಗಳ ಬಗ್ಗೆ ಘೋಷಣೆ ಕೂಗಿದರು. ಜಾಥಾದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಶಿವನಂಜು, ಕ್ಷೇತ್ರ ಆರೋಗ್ಯ ಶಿಕ್ಷಣಾಕಾರಿ ಮಹದೇವ್, ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.