ಎಚ್.ಡಿ.ಕೋಟೆ: ತಂಬಾಕು ಉತ್ಪನ್ನ ಮತ್ತು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮದಿಂದ ಇಂದೇ ತಂಬಾಕು ಬೆಳೆ ನಿಷೇಧಿಸಲು ರೈತರು ಸಿದ್ಧರಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ತಂಬಾಕು ಬೆಳೆ ಪರವಾನಗಿ ಹೊಂದಿರುವ ಬೆಳೆಗಾರರಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಲು ಸಿದ್ಧವಿದಿಯೇ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ತಮ್ಮದೇ ಆದ ಮೋದಿ ಸರ್ಕಾರಕ್ಕೆ ಸವಾಲು ಎಸೆದರು.
ತಂಬಾಕು ಬೆಳೆಗೆ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ತಂಬಾಕು ಖರೀದಿಸುವ ಕಂಪನಿಗಳ ಪರವಿರುವ ತಂಬಾಕು ಖರೀದಿದಾರರು ಸರಿಯಾದ ಬೆಲೆ ನೀಡುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಮತ್ತು ಬೆಂಬಲಿಗರು ಶುಕ್ರವಾರ ಎಚ್.ಡಿ.ಕೋಟೆ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
1 ರೂ. ಮಾತ್ರ ಲಾಭ: ಈ ವೇಳೆ ಮಾತನಾಡಿದ ಪ್ರಸಾದ್, ಪ್ರತಿ ಕೇಜಿ ತಂಬಾಕು ಬೆಳೆಯಲು ರೈತರು 130 ರೂ. ವ್ಯಯಿಸುತ್ತಾರೆ. ಆದರೆ, ತಂಬಾಕು ಮಾರುಕಟ್ಟೆಯಲ್ಲಿ ತಂಬಾಕು ಖರೀದಿಸುವ ಕಂಪನಿಗಳು ಪ್ರತಿ ಕೇಜಿಗೆ 131 ರೂ. ಬೆಲೆ ನಿಗದಿಪಡಿಸುತ್ತಿವೆ. ಪ್ರತಿ ಕೇಜಿ ತಂಬಾಕಿಗೆ ಒಂದು ರೂ. ಲಾಭಕ್ಕೆ ಮಾರಾಟ ಮಾಡಿದರೆ ರೈತರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ತಂಬಾಕು ಬೆಳೆಯುವ ರೈತರ ಬೆಳೆಗೆ ಕೇಂದ್ರ ಸರ್ಕಾರ ಸರಿಯಾದ ಬೆಲೆ ಸಿಗುವಂತೆ ಮಾಡಲಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಮಸ್ಯೆಗಳನ್ನು ಸಾವಧಾನದಿಂದಲೇ ಆಲಿಸಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ತಂಬಾಕು ಬೆಳೆ ಮತ್ತು ಬೆಲೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದರೂ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಪಾಟೀಲ್ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ರೈತರ ಶ್ರಮ ನನಗೆ ಗೊತ್ತು. ಸಂಬಂಧ ಪಟ್ಟ ಕೇಂದ್ರ ಸಚಿವರು ಮತ್ತು ತಂಬಾಕು ಮಂಡಳಿಯ ತಂಬಾಕು ಖರೀದಿದಾರರ ಬಳಿ ಸಮಾಲೋಚನೆ ನಡೆಸಿ ತಂಬಾಕು ಬೆಳೆಗಾರರಿಗೆ ಅನ್ಯಾಯವಾಗದಂತೆ ರೈತರ ಪರವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಜಿಪಂ ಸದಸ್ಯ ವೆಂಕಟಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಗಿರೀಶ್, ರಾಜು, ಮೊತ್ತ ಬಸವರಾಜಪ್ಪ, ಬಿ.ವಿ.ಬಸವರಾಜು, ತಾಪಂ ಸದಸ್ಯ ಮಹದೇವಸ್ವಾಮಿ, ರಾಜು, ಜಯರಾಮು, ಯೋಗೇಶ್, ಶಿವರಾಜಪ್ಪ, ಚನ್ನಪ್ಪ, ವಿನಯ್, ಲೋಕೇಶ್, ವೈ.ಟಿ.ಮಹೇಶ್, ಪರೀಕ್ಷಿತ ರಾಜೇಅರಸ್, ತಂಬಾಕು ಮಂಡಳಿಯ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ತಂಬಾಕು ಬೆಳೆ ಬೆಳೆಯುವ ಬಗ್ಗೆ ಸಂಸದರ ಸಮರ್ಥನೆ: ಆರೋಗ್ಯ ಅಷ್ಟೇ ಅಲ್ಲದೇ ಪರಿಸರದ ಮೇಲೂ ದುಷ್ಪರಿಣಾಮ ಬೀರುವ ತಂಬಾಕು ಬೆಳೆಯನ್ನೇ ಈ ಭಾಗದ ರೈತರು ಬೆಳೆಯಲು ಮುಖ್ಯ ಕಾರಣವೂ ಇದೆ. ಈ ತಾಲೂಕುಗಳು ಬಹುತೇಕ ಅರಣ್ಯ ಪ್ರದೇಶದಿಂದ ಆವೃತ್ತವಾಗಿವೆ. ಅರಣ್ಯದಂಚಿನ ಗ್ರಾಮಗಳ ರೈತರು ಯಾವುದೇ ಬೆಳೆ ಬೆಳೆದರೂ ಕಾಡಾನೆ, ಹಂದಿ ಸೇರಿದಂತೆ ಇನ್ನಿತರ ವನ್ಯಜೀವಿಗಳ ದಾಳಿಗೆ ಸಿಲುಕಿ ಇಡೀ ವರ್ಷ ಬೆಳೆದ ಬೆಳೆ ಕೆಲವೇ ಕ್ಷಣದಲ್ಲಿ ನಾಶವಾಗುತ್ತದೆ. ಆದರೆ, ತಂಬಾಕು ಬೆಳೆಗೆ ಯಾವುದೇ ವನ್ಯಜೀವಿಗಳ ಕಾಟ ಇಲ್ಲ. ಹೀಗಾಗಿ ಇಲ್ಲಿನ ರೈತರು ತಂಬಾಕು ಬೆಳೆಯುತ್ತಾರೆ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸಮರ್ಥಸಿಕೊಂಡರು.