ಪಿರಿಯಾಪಟ್ಟಣ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತಂಬಾಕು ಮತ್ತು ಶುಂಠಿ ಬೆಲೆಯಲ್ಲಿ ತುಸು ಬೆಲೆ ಏರಿಕೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ವರದಾನ: ರಾಜ್ಯ ಸರ್ಕಾರ ಪಿರಿಯಾಪಟ್ಟಣ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ರೈತರು ಪ್ರಾರಂಭದಲ್ಲಿ ಸಾಲ ಮಾಡಿ ಭೂಮಿಯನ್ನು ಹದಗೊಳಿಸಿ ತಂಬಾಕು, ಜೋಳ ಹಾಗೂ ಶುಂಠಿ ಬಿತ್ತನೆ ಮಾಡಿದ್ದರು. ಇದರ ನಡುವೆ ತಿಂಗಳಿಗೊಮ್ಮೆಯಂತೆ ಬೀಳುತ್ತಿದ್ದ ಮಳೆ ಎರಡು ತಿಂಗಳಾದರೂ ಬಾರದೇ ನಾಟಿ ಮಾಡಿದ ತಂಬಾಕು ಒಣಗುತ್ತಾ ಬೆಳವಣಿಗೆಯಲ್ಲಿ ಕುಂಠಿತವಾಯಿತು. ಇತ್ತ ಶುಂಠಿ ಬೆಳೆಗೆ ಮಳೆ ಕೊರತೆಯಾಗಿ ಬೆಳವಣಿಗೆಯೂ ಕಾಣಲಿಲ್ಲ. ಕೆಲವು ಜಮೀನುಗಳಲ್ಲಿ ಉಷ್ಣಾಂಶ ಹೆಚ್ಚಳದಿಂದ ಶುಂಠಿ ಬೆಳೆ ನಷ್ಟವಾಗಿರುವ ಉದಾಹರಣೆಯೂ ಇದೆ. ಇವುಗಳನ್ನೆಲ್ಲ ಮರೆಮಚ್ಚುವಂತೆ ರೈತರು ಬೆಳೆದಿರುವ ತಂಬಾಕು ಹಾಗೂ ಶುಂಠಿ ಬೆಲೆಯಲ್ಲಿ ಸ್ವಲ್ಪ ಬೆಲೆ ಹೆಚ್ಚಳವಾಗುತ್ತಿದ್ದು ಸಂಕಷ್ಟ ಕಾಲದಲ್ಲಿ ರೈತನಿಗೆ ವರದಾನವಾಗುವ ಲಕ್ಷಣ ಗೋಚರವಾಗುತ್ತಿದೆ.
ಇನ್ನಷ್ಟು ಏರಿಕೆ ಆಗುವ ಲಕ್ಷಣ: ದಿನೇ ದಿನೆ ಕೂಲಿಯಾಳುಗಳ ಕೊರತೆ, ಕಚ್ಚಾ ಪದಾರ್ಥಗಳ ಬೆಲೆಗಳಲ್ಲಿ ಏರಿಕೆ ನಡುವೆ ಈ ಬಾರಿ ಎರಡು ಬೆಳೆಗಳ ದರ ಏರಿಕೆಯಿಂದ ರೈತ ಸಮುದಾಯದಕ್ಕೆ ತುಸು ನೆಮ್ಮದಿ ತಂದಿದೆ. ತಂಬಾಕು ಮತ್ತು ಶುಂಠಿ ಬೆಲೆಯೂ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗಿ ರೈತರ ಬಾಳಿಗೆ ಬೆಳಕು ಚೆಲ್ಲುವ ಲಕ್ಷಣ ಗೋಚರವಾಗುತ್ತಿದೆ.
ತಂಬಾಕು 2 ಸಾವಿರ ರೂ.ನಿಂದ 5 ಸಾವಿರ ರೂ.ಗೆ ಹೆಚ್ಚಳ: ಮಾರುಕಟ್ಟೆ ಆರಂಭದಲ್ಲಿ 230 ರೂ.ಗೆ ಮಾರಾಟವಾಗುತ್ತಿದ್ದ ಗುಣಮಟ್ಟದ ತಂಬಾಕು, ದಿನ ಕಳೆದಂತೆ ತನ್ನ ದರದಲ್ಲಿ ಏರಿಕೆಯಾಗುತ್ತಾ 265 ರೂ. ತಲುಪಿದೆ. ಈ ನಡುವೆ ಶುಂಠಿ ಬೆಲೆಯೂ ತಂಬಾಕು ಬೆಳೆಗೆ ಸಡ್ಡು ಹೊಡೆಯುತ್ತಿದೆ. ಆರಂಭದಲ್ಲಿ ಕೆಲವು ರೈತರು ತಮ್ಮ ಬಳಿ ಇದ ಅಲ್ಪಸ್ವಲ್ಪ ಶುಂಠಿಯನ್ನು ಕೇವಲ 2 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಈಗ, ಒಮ್ಮೆಲೇ ಶುಂಠಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು 5 ಸಾವಿರ ರೂ.ಗಳ ಗಡಿ ದಾಟಿದೆ. ಆಗ, ಕಡಿಮೆ ಬೆಲೆಗೆ ಶುಂಠಿ ಮಾರಾಟ ಮಾಡಿದ್ದ ರೈತರು ಈಗ, ತಮ್ಮ ಕೈ ಕೈ ಇಸುಕಿಕೊಳ್ಳುವಂತಾಗಿದೆ.
ತಾಲೂಕಿನಲ್ಲಿ ಅಂಕಿ ಅಂಶದ ಪ್ರಕಾರ ಅಂದಾಜು ಐದೂವರೆ ಸಾವಿರಕ್ಕೂ ಅಧಿಕ ಹೆಕ್ಟೇರ್‌ನಲ್ಲಿ ಶುಂಠಿ ಬೆಳೆದರೆ, ಸುಮಾರು 23 ಸಾವಿರ ಹೆಕ್ಟರ್‌ನಲ್ಲಿ ತಂಬಾಕನ್ನು ಬೆಳೆದಿದ್ದಾರೆ. ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ಮಳೆ ಪ್ರಮಾಣ ವಾಡಿಕೆಗಿಂತಲೂ ಕಡಿಮೆ ಆಗದಿದ್ದಿದ್ದರೆ ತಂಬಾಕು ಹಾಗೂ ಶುಂಠಿ ಬೆಳೆಯಲ್ಲಿ ಇಳುವರಿ ಹೆಚ್ಚಾಗಿ ಲಾಭವೂ ಹೆಚ್ಚಾಗುತ್ತಿತ್ತು. ಆದರೆ ಮಳೆ ಕಡಿಮೆಯಾದರಿಂದ ಫಸಲು ಕಡಿಮೆಯಾಗಿ ನಮ್ಮ ಲಾಭವೂ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ರೈತರು.
ಶುಂಠಿ ಬೆಳೆಗೆ ಉತ್ಕೃಷ್ಟ ಗುಣಮಟ್ಟದ ನೀರಾವರಿ ಸೌಲಭ್ಯವುಳ್ಳ ಜಮೀನು ಅಗತ್ಯವಿದೆ. ಪ್ರತಿವರ್ಷ ಒಂದು ಎಕರೆಯಲ್ಲಿ ಶುಂಠಿ ಬೆಳೆಯಲು 45 ಸಾವಿರ ರೂ. ಖರ್ಚು ಮಾಡುತ್ತಿದ್ದೆ. ಈ ವರ್ಷ ಬರೋಬ್ಬರಿ 80 ಸಾವಿರ ರೂ, ದಾಟಿದೆ. ಖರ್ಚು ಹೆಚ್ಚಾಗುತ್ತಿದ್ದು ನಷ್ಟವಾಗುವ ಪರಿಸ್ಥಿತಿ ಎದುರಾಗಿದೆ.
– ಕಿರಣ್‌ಯಾದವ, ಯುವ ರೈತ ಗೊಲ್ಲರಬೀದಿ, ಪಿರಿಯಾಪಟ್ಟಣ
ಪ್ರತಿ ವರ್ಷ ನಾನು ಎಕರೆಗೆ 15 ಸಾವಿರ ರೂ., ಹೂಡಿಕೆ ಮಾಡಿ ತಂಬಾಕು ವ್ಯವಸಾಯ ಮಾಡುತ್ತಿದ್ದೇನೆ. ಆದರೆ ಈ ವರ್ಷ ಏಕಾಏಕಿ 30 ಸಾವಿರ ರೂ. ಆಗಿದೆ. ಇದರಿಂದ ನನಗೆ ಹೆಚ್ಚು ಹೊರೆಯಾಗಿ ನಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
-ತೇಜಸ್, ಚನ್ನಪಟ್ಟಣ ಬೀದಿ ಪಿರಿಯಾಪಟ್ಟಣ
-ವಸಂತಕುಮಾರ್ ಸಿ.ಎಸ್