ದಯವಿಟ್ಟು ಗಮನಿಸಿ! ರೈಲು ಪ್ಲಾಟ್‌ಫಾರ್ಮ್ ಮೂರರಲ್ಲಿ ಬಂದು ನಿಲ್ಲಲಿದೆ … ಇಂಥದ್ದೊಂದು ಪ್ರಕಟಣೆಯ ಮೂಲಕ ಚಿತ್ರ ಶುರುವಾಗುತ್ತದೆ. ಆ ರೈಲು ಆ ಸ್ಟೇಷನ್‌ನಿಂದ ಹೊರಡುವ ಮೂಲಕ ಚಿತ್ರ ಮುಗಿಯುತ್ತದೆ. ಈ ಮಧ್ಯೆ ನಾಲ್ಕು ಕಥೆಗಳು ಅನಾವರಣಗೊಳ್ಳುತ್ತವೆ. ನಾಲ್ಕು ಬೇರೆ ಪ್ರಪಂಚಗಳು, ಹಿನ್ನೆಲೆ, ಪರಿಸರ, ಮನಸ್ಥಿತಿಗಳು ಎಲ್ಲವೂ ಕಾಣಸಿಗುತ್ತದೆ. ಈ ನಾಲ್ಕೂ ಕಥೆಗಳು ಒಂದರಹಿಂದೊಂದು ಬರುತ್ತವೆ. ಕೊನೆಗೆ ಅದೇ ರೈಲಿನಲ್ಲಿ ನಾಲ್ಕೂ ಕಥೆಗಳಿಗೆ ಒಂದು ಅರ್ಥ ಸಿಗುತ್ತವೆ. ಅರ್ಥ ಸಿಗುತ್ತವೆ ಎನ್ನುವದಕ್ಕಿಂತ ಹೆಚ್ಚಾಗಿ ಅದೇ ರೈಲಿನಡಿ ಮುಕ್ತಾಯವಾಗುತ್ತದೆ.
ಮೊದಲೇ ಹೇಳಿದಂತೆ, ಒಂದೊಂದು ಕಥೆ ಒಂದೊಂದು ಹಿನ್ನೆಲೆಯದ್ದು. ಇಲ್ಲೊಬ್ಬ ಮದುವೆಯಾಗವ ನಡುವಯಸ್ಕನಿದ್ದಾನೆ. ಇನ್ನೆಲ್ಲೋ ಪ್ರಾಕ್ಸಿ ಎಂಬ ಪಿಕ್‌ಪಾಕೆಟ್ ಇದ್ದಾನೆ. ಮತ್ತೂಂದು ಕಡೆ ಭ್ರಾಂತಿಯಿಂದ ಹೊರಬರಬೇಕು ಎಂದು ಒದ್ದಾಡುತ್ತಿರುವ ಸನ್ಯಾಸಿಯೊಬ್ಬನಿದ್ದಾನೆ. ಮಗದೊಂದು ಕಡೆ ಕೆಲಸ ಮಾಡಿ ಮಾಡಿ ಸುಸ್ತಾಗಿ, ಹೆಂಡತಿಯೊಂದಿಗೆ ಮನಸ್ಥಾಪ ಮಾಡಿಕೊಂಡಿರುವ ಸಾಫ್ಟ್ವೇರ್ ಇಂಜಿನಿಯರ್ ಒಬ್ಬನಿದ್ದಾನೆ. ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಒಬ್ಬೊಬ್ಬರದ್ದೂ ಒಂದೊಂದು ಹುಡುಕಾಟ.
ಮೇಲ್ನೋಟಕ್ಕೆ ಎಲ್ಲರೂ ಸರಿಯಾಗಿದ್ದಾರೆ ಅಂತ ಕಂಡರೂ, ಒಬ್ಬೊಬ್ಬರದ್ದು ಒಂದೊಂದು ಮಾನಸಿಕ ತೊಳಲಾಟ. ಏನು ಮಾಡಿದರೂ ನೆಮ್ಮದಿಯಿಲ್ಲ. ಯಾವುದು ಸರಿ, ಯಾವುದು ತಪ್ಪು ಎಂಬ ಉತ್ತರವಿಲ್ಲ. ಆದರೆ, ನಾಲ್ಕೂ ಕಥೆಗಳು ಮತ್ತು ನಾಲ್ಕೂ ಪ್ರಧಾನ ಪಾತ್ರಧಾರಿಗಳು ಒಂದಲ್ಲ ಒಂದು ರೀತಿಯಲ್ಲಿ ಇಂಟರ್‌ಲಿಂಕ್ಡ್ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಈ ಸತ್ಯಾಂಶ ಪ್ರೇಕ್ಷಕನಿಗೆ ಗೊತ್ತಾಗುವುದು ಕೊನೆಯ ಐದು ನಿಮಿಷಗಳಲ್ಲೇ. ಹೇಗೆ ಇವನ್ನೆಲ್ಲಾ ರೋಹಿತ್ ಒಂದೆಡೆ ಸೇರಿಸಿ, ಒಂದು ಚಿತ್ರ ಮಾಡಿದ್ದಾರೆ ಎಂಬ ಕುತೂಹಲಕ್ಕಾದರೂ ಒಮ್ಮೆ “ದಯವಿಟ್ಟು ಗಮನಿಸ’ಬೇಕು.
ಇದೊಂದು ವಿಭಿನ್ನ ಪ್ರಯೋಗದ ಸಿನಿಮಾ. ಇಲ್ಲಿ ಮನರಂಜನೆ, ಹಾಡು, ಫೈಟು, ಕಾಮಿಡಿ ಅಂತೆಲ್ಲಾ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆದರೂ ಚಿತ್ರ ಖುಷಿಯಾಗುವುದಕ್ಕೆ ಕಾರಣ ಆಪ್ತವೆನಿಸುವಂತಹ ಪಾತ್ರಗಳು. ನಮ್ಮ ಸುತ್ತಮುತ್ತಲಿರುವ ಒಂದಿಷ್ಟು ವಿಚಿತ್ರ ಪಾತ್ರಗಳನ್ನು ತಂದು ಒಂದೆಡೆ ಕಲೆ ಹಾಕಿದ್ದಾರೆ ರೋಹಿತ್ ಪದಕಿ. ಅವರೊಂದು ಅದ್ಭುತ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಎನ್ನುವುದಕ್ಕಿಂತ ಒಂದು ವಿಭಿನ್ನ ಸಿನಿಮಾ ಮಾಡಿದ್ದಾರೆ ಅಥವಾ ಬೇರೆ ಏನನ್ನೋ ಹೇಳುವುದಕ್ಕೆ ಪ್ರಯತ್ನಿಸಿದ್ದಾರೆ ಎನ್ನುವುದು ಹೆಚ್ಚು ಸೂಕ್ತ. ಅದ್ಭುತ ಏಕಲ್ಲ ಎನ್ನುವುದಕ್ಕೆ ಅದರದೇ ಕಾರಣಗಳಿವೆ.
ಪ್ರಮುಖವಾಗಿ ನಾಲ್ಕು ಬೇರೆ ಬೇರೆ ಕಥೆಗಳನ್ನು ಅಷ್ಟೇ ಬಿಡಿಬಿಡಿಯಾಗಿ ಹೇಳುತ್ತಾ ಹೋಗುತ್ತಾರೆ ರೋಹಿತ್. ಕೆಲವೊಂದು ಆ ಕ್ಷಣಕ್ಕೆ ಕಾಡುತ್ತದೆ. ಇನ್ನೊಂದು ಸ್ವಲ್ಪ ನಿಧಾನ ಎಂತನಿಸುತ್ತದೆ. ಮತ್ತೂಂದರಲ್ಲಿ ಏನೋ ಕೊರತೆ ಇದೆ ಎಂದನಿಸಬಹುದು. ಮತ್ತೂಂದರಲ್ಲಿ ಇನ್ನೇನೋ ಬೇಕು ಅಂತನಿಸಬಹುದು. ಇವಕ್ಕೆಲ್ಲಾ ಒಂದು ಅರ್ಥ ಸಿಗಬೇಕಾದರೆ, ಕೊನೆಯವರೆಗೂ ತಾಳ್ಮೆಯಿಂದ ಕಾಯಬೇಕು. ಕೊನೆಯಲ್ಲೂ, ಚಿತ್ರ ಸಡನ್ ಆಗಿ ಮುಗಿದೇ ಹೋಯಿತು ಎಂಬ ಅಪಸ್ವರ ಬಂದರೆ, ಅದು ತಪ್ಪಲ್ಲ. ಆದರೂ ಒಂದೊಳ್ಳೆಯ ಥ್ರಿಲ್‌ಗಾಗಿ ಕೊನೆಯವರೆಗೂ ಕಾಯಿರಿ. ಚಿತ್ರ ಕಾಡುವುದು ಪಾತ್ರಗಳು ಮತ್ತು ಪಾತ್ರಧಾರಿಗಳಿಂದ. ಪಾತ್ರಕ್ಕೆ ತಕ್ಕ ಕಲಾವಿದರನ್ನು ಆಯ್ಕೆ ಮಾಡಿದ್ದಾರೆ ರೋಹಿತ್.
ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ವಸಿಷ್ಠ ಸಿಂಹ, ರಘು ಮುಖರ್ಜಿ, ಪೂರ್ಣಚಂದ್ರ ಎಲ್ಲರೂ ಆಯಾ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದಾರೆ. ಅದರಲ್ಲೂ ತುಂಬಾ ಕಾಡುವುದು ರಾಜೇಶ್ ಮತ್ತು ಪೂರ್ಣಚಂದ್ರ ಇಬ್ಬರೂ, ಪಾತ್ರದ ತಳಮಳವನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಇನ್ನು ನಾಯಕಿಯರ ಪೈಕಿ ಎಲ್ಲರೂ ತಮ್ಮ ಕೆಲಸ ಮಾಡಿದ್ದಾರೆ ಎನ್ನುವುದಕ್ಕಿಂತ ಹೆಚ್ಚು ಹೇಳುವುದು ಸಾಧ್ಯವಿಲ್ಲ. ಪಾತ್ರ ಮತ್ತು ಪಾತ್ರಧಾರಿಗಳ ಜೊತೆಗೆ ಖುಷಿಕೊಡುವುದು ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಣ. ಇಂಥದ್ದೊಂದು ಪ್ರಯೋಗ ಕನ್ನಡದಲ್ಲಿ ಆಗಿದೆ. ದಯವಿಟ್ಟು ಗಮನಿಸಿ!
ಚಿತ್ರ: ದಯವಿಟ್ಟು ಗಮನಿಸಿ
ನಿರ್ಮಾಣ: ಕೃಷ್ಣ
ನಿರ್ದೇಶನ: ರೋಹಿತ್ ಪದಕಿ
ತಾರಾಗಣ: ರಘು ಮುಖರ್ಜಿ, ಪೂರ್ಣಚಂದ್ರ ಮೈಸೂರು, ರಾಜೇಶ್ ನಟರಂಗ, ವಸಿಷ್ಠ ಸಿಂಹ, ಭಾವನಾ ರಾವ್, ಸಂಯುಕ್ತಾ ಹೊರನಾಡು ಮುಂತಾದವರು
* ಚೇತನ್ ನಾಡಿಗೇರ್