Advertisement

ಕಾಂಗ್ರೆಸ್‌ ಸಂಕಲ್ಪ ಯಾತ್ರೆ ಯಾರ ಉದ್ಧಾರಕ್ಕೆ?ಕೈಗಾರಿಕೆ ಸಚಿವ ಜಗದೀಶ ಶೆಟ್ಟರ

06:06 PM Jan 13, 2021 | Team Udayavani |

ರಾಯಚೂರು: ಇಷ್ಟು ವರ್ಷ ಆಡಳಿತ ನಡೆಸಿ ಹಳ್ಳಿಗಳ ಉದ್ಧಾರ ಮಾಡದ ಕಾಂಗ್ರೆಸ್‌ ಈಗ ಸಂಕಲ್ಪ ಯಾತ್ರೆ ಆರಂಭಿಸಿದೆ. ಯಾರ ಉದ್ಧಾರಕ್ಕಾಗಿ ಈ ಯಾತ್ರೆ ಮಾಡುತ್ತಿದ್ದಾರೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಪ್ರಶ್ನಿಸಿದರು. ಸಮೀಪದ ಹರ್ಷಿತಾ ಗಾರ್ಡನ್‌ನಲ್ಲಿ ಜಿಲ್ಲಾ ಬಿಜೆಪಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜನಸೇವಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬಿಜೆಪಿ ಹಳ್ಳಿಗಳ ಅಭಿವೃದ್ಧಿಗಾಗಿ ಗ್ರಾಮ ಸ್ವರಾಜ್‌ ಕಾರ್ಯಕ್ರಮ ನಡೆಸಿತು. ಅದರ ಪರಿಣಾಮ ಇಂದು ಶೇ.50 ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಗೆಲುವು ಸಾಧಿಸಿದ್ದಾರೆ. ಆದರೆ, ಈಗ ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸಂಕಲ್ಪ ಯಾತ್ರೆ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ಗೆ ಸೋನಿಯಾ ಗಾಂಧಿ , ರಾಹುಲ್‌ ಗಾಂಧಿ  ಬಿಟ್ಟರೆ ಗತಿಯಿಲ್ಲ. ಅವರೇ ಅಧ್ಯಕ್ಷರಾಗಬೇಕು. ಆದರೆ, ಇದರಿಂದ ಬಿಜೆಪಿಗೆ ಅನುಕೂಲವಾಗಲಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್‌ ಅಧೋಗತಿಗೆ ತಲುಪಿದೆ. ಮುಂದೆ ಅಡ್ರೆಸ್‌ ಕೂಡ ಇಲ್ಲದಂತಾಗಲಿದೆ ಎಂದು ಕುಟುಕಿದರು. ಗ್ರಾಪಂ ಚುನಾವಣೆಗಳಲ್ಲಿ ಗೆಲುವು ದಾಖಲಿಸುವ ಮೂಲಕ ದೊಡ್ಡ ಬದಲಾವಣೆಗೆ ನಾಂದಿ ಹಾಡಲಾಗಿದೆ. 5670 ಪಂಚಾಯಿತಿಗಳಲ್ಲಿ 3140ರಲ್ಲಿ ಬಿಜೆಪಿಗೆ ಬಹುಮತವಿದೆ ಎಂಬುದು ಪಕ್ಷದ ಆಂತರಿಕ ಸಮೀಕ್ಷೆ ಹಾಗೂ ಮಾಧ್ಯಮಗಳ ವರದಿಯಿಂದ ಸಾಬೀತಾಗಿದೆ.

ಈ ಫಲಿತಾಂಶದಿಂದ ಮುಂದಿನ 15-20 ವರ್ಷ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಮಾತೇ ಇಲ್ಲ ಎಂದರು. ಈಗ ಪ್ರತಿ ಪಂಚಾಯಿತಿಗೆ 80 ಲಕ್ಷದಿಂದ ಒಂದು ಕೋಟಿ ರೂ. ವರೆಗೂ ಅನುದಾನ ಸಿಗುತ್ತಿದೆ. ಅದನ್ನು ಸರಿಯಾಗಿ ಬಳಸಿಕೊಂಡು ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ನೂತನವಾಗಿ ಚುನಾಯಿತರಾಗಿರುವ ಮಹಿಳೆಯರಿಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕು. ಅವರ ಗಂಡಂದಿರೇ ಅಧಿ ಕಾರ ನಡೆಸಬಾರದು. ಇಂಥ  ಸಭೆ-ಸಮಾರಂಭಗಳಿಗೆ ಅವರನ್ನು ಕರೆ ತಂದರೆ ಪಕ್ಷದ ಯೋಜನೆಗಳ ಪರಿಚಯವಾಗಲಿದೆ. ಅವರು ಸ್ವತಂತ್ರರಾಗಿ ಆಡಳಿತ ನಡೆಸಿದಾಗಲೇ ಮೀಸಲಾತಿಗೆ ನಿಜವಾದ ಅರ್ಥ ಬರುತ್ತದೆ ಎಂದರು.

70 ವರ್ಷದಲ್ಲಿ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ದೇಶ ಮಾರುವ ಹಂತಕ್ಕೆ ತಂದಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವವೇ ತಿರುಗಿ ನೋಡುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಸ್ವಾಮಿ  ವಿವೇಕಾನಂದರ ಪ್ರತಿರೂಪವೇ ನರೇಂದ್ರ ಮೋದಿ ಎಂದು ಬಣ್ಣಿಸಿದರು.

Advertisement

ನಗರ ಶಾಸಕ ಡಾ| ಶಿವರಾಜ್‌ ಪಾಟೀಲ್‌ ಪ್ರಾಸ್ತಾವಿಕ ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲುವು ದಾಖಲಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಪಕ್ಷ ಬಲವರ್ಧನೆ ಮಾಡಲಾಗಿದೆ. ಗ್ರಾಮಾಭಿವೃದ್ಧಿಯಿಂದಲೇ ದೇಶದ ಪ್ರಗತಿ ಸಾಧ್ಯ. ಸರ್ಕಾರದ ಎಲ್ಲ ಯೋಜನೆ ಹಳ್ಳಿಗಳಿಗೆ ತಲುಪಿಸುವ ಕೆಲಸ ಚುನಾಯಿತರು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ| ಸಂದೀಪ, ರಾಜ್ಯ ಉಪಾಧ್ಯಕ್ಷ ಮಹೇಶ ತೆಂಗಿನಕಾಯಿ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್‌, ಮಾನಪ್ಪ ವಜ್ಜಲ್‌, ಎನ್‌.ಶಂಕ್ರಪ್ಪ, ನೇಮಿರಾಜ್‌ ನಾಯಕ, ಜಿಲ್ಲಾಧ್ಯಕ್ಷ ರಮಾನಂದ ಯಾದವ್‌, ತ್ರಿವಿಕ್ರಮ ಜೋಶಿ, ಶಂಕರಗೌಡ ಹರವಿ, ಶಿವಬಸಪ್ಪ ಸೇರಿದಂತೆ ಇತರರಿದ್ದರು.

ಕಾಂಗ್ರೆಸ್‌ನವರಿಗೆ ದೂದ್‌ ಬ್ಯಾಡವಾ..?
ಬೀದರ್‌ ಶೈಲಿಯಲ್ಲೇ ಹಿಂದಿ ಮಿಶ್ರಿತ ಕನ್ನಡ ಭಾಷಣ ಮಾಡಿದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು. ಗೋಹತ್ಯೆ ನಿಷೇಧಿಸುವ ಮೂಲಕ ರಾಜ್ಯ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಗೋ ಮಾತಾ ಮೇರಿ ಮಾತಾ. ಆದರೆ, ಕಾಂಗ್ರೆಸ್‌ನವರು ಇದಕ್ಕೆ ವಿರೋಧ ಮಾಡ್ತಾರೆ. ಯಾಕೆ ಅವರು ದೂದ್‌ ಕುಡಿಯಂಗಿಲ್ಲೇನು. ಅವರಿಗೆ ಚಹಾಕ್ಕೆ ಹಾಲು ಬ್ಯಾಡೇನು ಎಂದು ಪ್ರಶ್ನಿಸಿದರು.

ರಾಮಮಂದಿರ ನಿರ್ಮಾಣ ಕನಸಾಗಿಯೇ ಉಳಿದಿತ್ತು. ಕೊನೆಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಭೂಮಿಪೂಜೆ ನೆರವೇರಿದೆ. ಅದನ್ನು ಅಂಬಾನಿಯೋ, ರಿಲಯನ್ಸ್‌ ಕಂಪನಿಯೋ ನಿರ್ಮಿಸುತ್ತಿಲ್ಲ. ದೇಶದ 130 ಕೋಟಿ ಜನ ಕಟ್ಟುತ್ತಿದ್ದಾರೆ. ಜ.15ರಿಂದ ದೇಣಿಗೆ ಸಂಗ್ರಹಿಸುತ್ತಿದ್ದು, ಕೈಲಾದಷ್ಟು ಹಣ ನೀಡುವ ಮೂಲಕ ದೇವಸ್ಥಾನ ನಿರ್ಮಾಣಕ್ಕೆ ನಿಮ್ಮದು ಪಾಲು ನೀಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next