Advertisement

ಗೌರಿಬಿದನೂರಲ್ಲಿ ನೀರಿಗೆ ತತ್ವಾರ; ಬದಲಿ ವ್ಯವಸ್ಥೆಗೆ ಆಗ್ರಹ

09:38 PM Apr 02, 2019 | Team Udayavani |

ಗೌರಿಬಿದನೂರು: ಸತತ ಬರಗಾಲದಿಂದ ತತ್ತರಿಸಿರುವ ಗೌರಿಬಿದನೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯುಂಟಾಗಿದ್ದು ಇರುವ ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ಅಲ್ಪ ಸ್ವಲ್ಪ ನೀರೂ ಬಾರದಂತಾಗಿದೆ.

Advertisement

ಕಳೆದ 30 ವರ್ಷಗಳಲ್ಲಿ ಮಳೆ ಬಾರದೆ ನದಿಯೇ ಬಾರದಿರುವುದರಿಂದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಹುತೇಕ ಕೊಳವೆ ಬಾವಿಗಳು ಬತ್ತಿಹೋಗುತ್ತಿವೆ. ಇನ್ನು ಹೊಸ ಬೋರ್‌ವೆಲ್‌ ಕೊರೆಸಿದರೂ ಬರುವ ನೀರು ಕೆಲವೇ ದಿನಗಳಲ್ಲಿ ನಿಂತು ಹೋಗುತ್ತಿದೆ.

ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಈಗಾಗಲೇ 1ಕೋಟಿ ರೂ. ವೆಚ್ಚದಲ್ಲಿ ಕೊಳವೆ ಬಾವಿ ಮತ್ತು ಅವುಗಳಿಗೆ ಪಂಪ್‌ ಮೋಟರ್‌ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದ್ದರೂ ನೀರಿನ ಕೊರತೆ ಇರುವುದರಿಂದ ಹೊಸದಾಗಿ 2.5ಕೋಟಿ ರೂ.,ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಲ್ಲದೇ, ತಾಲೂಕಿನ ಟಾಸ್ಕ್ಪೋರ್ಸ್‌ ಸಮಿತಿಯಲ್ಲಿ ಅನುಮೋದನೆ ಪಡೆದು ಜಿಪಂ ಮೂಲಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಅನುಮೋದನೆ ಹಾಗೂ ಹಣ ಬಿಡುಗಡೆಯಾಗುವವರೆಗೂ ಬದಲಿ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಅವುಗಳಿಂದ ಟ್ಯಾಂಕರ್‌ ಮೂಲಕ ಹಳ್ಳಿಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.

ಪರಿಸ್ಥಿತಿ ಹೀಗಿದ್ದರೂ ಏಪ್ರಿಲ್‌ ಪ್ರಾರಂಭದಲ್ಲಿಯೇ ನೀರಿಗೆ ಸಾಕಷ್ಟ ತತ್ವಾರ ಉಂಟಾಗಿದೆ. ಹೀಗಾಗಿ ಮುಂದಿನ 2 ತಿಂಗಳು ನೀರಿನ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಗಳು ಹೇಗೆ ನಿಭಾಯಿಸಲಿದೆ ಎಂಬುದು ತಾಲೂಕಿನ ಜನರ ಪ್ರಶ್ನೆಯಾಗಿದೆ. 6 ಹೋಬಳಿ, 38 ಗ್ರಾಪಂಗಳು ಹಾಗೂ 250ಕ್ಕೂ ಹೆಚ್ಚು ಗ್ರಾಮಗಳನ್ನು ಗೌರಿಬಿದನೂರು ತಾಲೂಕು ಹೊಂದಿದೆ.

Advertisement

ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿರುವ 2.5ಕೋಟಿ ರೂ., ಬಿಡುಗಡೆಯಾಗುವವರೆಗೂ ಜಿಲ್ಲಾಧಿಕಾರಿಗಳಿಂದ ಬಿಡುಗಡೆಯಾಗುವ ಹಣದಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕಿದೆ. ಹೀಗಾಗಿ ಸೂಕ್ತ ಸಮಯಕ್ಕೆ ನೀರು ಸಿಗದೆ ಗ್ರಾಮೀಣ ಜನತೆ ಪಂಚಾಯ್ತಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದಾರೆ.

ಪ್ರಸ್ತಾವನೆ ಸಲ್ಲಿಸಿದ್ದೇವೆ…: ಗೌರಿಬಿದನೂರು ತಾಲೂಕಿನ 22 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. 13 ಹಳ್ಳಿಗಳಲ್ಲಿ ಜಟಿಲವಾದ ನೀರಿನ ಸಮಸ್ಯೆ ಉಂಟಾಗಿದ್ದು ಖಾಸಗಿ ಕೊಳವೆ ಬಾವಿಗಳಿಂದ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

9 ಗ್ರಾಮಗಳಲ್ಲಿ ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿದೆ. ಸರ್ಕಾರಕ್ಕೆ ಸಲ್ಲಿಸಿರುವ 2.5ಕೋಟಿ ರೂ., ವೆಚ್ಚದ ಪ್ರಸ್ತಾವನೆ ಹಣ ಬಿಡುಗಡೆಯಾಗುವವರೆಗೂ ಹೊಸಕೊಳವೆ ಬಾವಿ ಕೊರೆಸಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೆ ಪ್ರಭಾರ ಸಹಾಯಕ ಅಭಿಯಂತರ ಆದಿನಾರಾಯಣಪ್ಪ ತಿಳಿಸಿದ್ದಾರೆ.

ನಗರಗೆರೆ ಹೋಬಳಿ ನಗರಗೆರೆ ವಾಟದಹೊಸಳ್ಳಿ, ಬಂದಾರ್ಲಹಳ್ಳಿ, ಮಟ್ಟಾವಲಹಳ್ಳಿ, ಕೋಟಪ್ಪನಹಳ್ಳಿ ಅಂಬೇಡ್ಕರ್‌ ಕಾಲೋನಿಗಳಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
-ನಗರಗೆರೆ ಲಕ್ಷ್ಮೀನಾರಾಯಣ, ಡಿಎಸ್‌ಎಸ್‌ ಮುಖಂಡರು

* ವಿ.ಡಿ.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next