Advertisement

ಇಬ್ಬನಿ ತಬ್ಬದ ಹೆಮ್ಮಾಡಿ ಸೇವಂತಿಗೆ

12:02 AM Dec 20, 2019 | Sriram |

ಹೆಮ್ಮಾಡಿ: ಪ್ರತಿಕೂಲ ಹವಾಮಾನದ ಬಿಸಿ ಹೆಮ್ಮಾಡಿ ಸೇವಂತಿಗೆಗೂ ತಟ್ಟಿದೆ. ಚಳಿ – ಇಬ್ಬನಿ ಕಡಿಮೆಯಾಗಿ ಈ ಬಾರಿ ನಿಗದಿತ ಸಮಯಕ್ಕೆ ಅದು ಕೊಯ್ಲಿಗೆ ಸಿಗುವುದು ಅನುಮಾನ. ಪ್ರತಿವರ್ಷ ಮಾರಣಕಟ್ಟೆ ಜಾತ್ರೆಗೆ ಸಿದ್ಧವಾಗುತ್ತಿದ್ದ ಹೂವು ಈ ಬಾರಿ ಅರ್ಧಕ್ಕರ್ಧ ಸಿಗುವುದೂ ಕಷ್ಟ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.

Advertisement

ಹೆಮ್ಮಾಡಿ ಸೇವಂತಿಗೆ ಹೂವಿಗೆ ತನ್ನದೇ ಇತಿಹಾಸವಿದೆ. ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರನಿಗೆ ಪ್ರಿಯ ಎಂಬ ಪುರಾಣ ಕತೆಯೂ ಇದೆ. ಜನವರಿಯ ಮಕರ ಸಂಕ್ರಮಣದಂದು ಮಾರಣಕಟ್ಟೆ ದೇವರ ಕೆಂಡಸೇವೆಗೆ ಈ ಹೂವನ್ನು ಮೊದಲಿಗೆ ಅರ್ಪಿಸಲಾಗುತ್ತದೆ. ಬಳಿಕವೇ ಉಳಿದೆಡೆಗೆ ರವಾನೆಯಾಗುತ್ತದೆ.

ಭಾರೀ ಬೇಡಿಕೆ
ಹೆಮ್ಮಾಡಿ ಸೇವಂತಿಗೆ ಬೆಳೆದುದರಲ್ಲಿ ಅತ್ಯಧಿಕ ಪಾಲು ಮಾರಣಕಟ್ಟೆ ಜಾತ್ರೆಗೆ ಮಾರಾಟವಾಗುವುದು ವಾಡಿಕೆ. ಆದರೆ ಈ ಬಾರಿ ಚಳಿಗಾಲದಲ್ಲಿಯೂ ಸೆಕೆಯಿಂದಾಗಿ ಗಿಡ ಮತ್ತು ಹೂವಿನ ಬೆಳವಣಿಗೆಗೆ ಹೊಡೆತ ಬಿದ್ದಿದೆ. ಮಾರಣಕಟ್ಟೆ ಕೆಂಡ ಸೇವೆ ವೇಳೆಗೆ ಹೂವು ಸಿಗದಿದ್ದರೆ ಲಾಭ ಕಷ್ಟ ಎನ್ನುವುದು ಕೃಷಿಕರ ಅಳಲು.

ಎಲ್ಲೆಲ್ಲಿ ಬೆಳೆ?
ಹೆಮ್ಮಾಡಿ ಸುತ್ತಮುತ್ತಲಿನ ಕಟ್ಟು, ಜಾಲಾಡಿ, ಹರೇಗೋಡು, ಕೆಂಚನೂರು ಮತ್ತು ಇನ್ನಿತರ ಪ್ರದೇಶಗಳ ಸುಮಾರು 50 – 60ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆಯುತ್ತಾರೆ. ಇಲ್ಲಿನ ರೈತರು ಮುಂಗಾರಿನಲ್ಲಿ ಭತ್ತ ಬೇಸಾಯ ಅವಲಂಬಿಸಿದರೆ ಹಿಂಗಾರಿನಲ್ಲಿ ಸೇವಂತಿಗೆ ಬೆಳೆಯುತ್ತಾರೆ.

ಮಳೆಯಿಂದಲೂ ಹೊಡೆತ
ಆಗಸ್ಟ್‌ನಿಂದ ಸೇವಂತಿಗೆ ಬೀಜ ಬಿತ್ತನೆ ಮಾಡಲಾಗಿತ್ತು. ಆದರೆ ನವೆಂಬರ್‌ವರೆಗೂ ಮಳೆ ಇದ್ದುದರಿಂದ ಕೆಲವೆಡೆ ಬೆಳೆದ ಗಿಡ ಕೊಳೆತು ಹೋಗಿದೆ. ಇದರಿಂದ ಈ ಬಾರಿ ನಿರೀಕ್ಷೆಯಷ್ಟು ಹೂವು ಸಿಗುವುದು ಕೂಡ ಅನುಮಾನ.

Advertisement

ಸಮಸ್ಯೆಯೇನು?
6 ತಿಂಗಳ ಕೃಷಿ ಇದಾಗಿದ್ದು, ಆಗಸ್ಟ್‌ನಲ್ಲಿ ಬಿತ್ತನೆ ಮಾಡಲಾಗುತ್ತದೆ. ಜನವರಿ ವೇಳೆಗೆ ಕೊಯ್ಲು ಆರಂಭವಾಗುವುದು ಸಾಮಾನ್ಯ. ನವೆಂಬರ್‌-ಡಿಸೆಂಬರ್‌ ವೇಳೆಗೆ ಸಾಮಾನ್ಯವಾಗಿ ಕರಾವಳಿಯಲ್ಲಿ ಚಳಿ ಇರುತ್ತದೆ. ಆದರೆ ಈ ಬಾರಿ ಇನ್ನೂ ಆರಂಭವಾಗಿಲ್ಲ. ರಾತ್ರಿ ಅಥವಾ ಬೆಳಗ್ಗೆ ಸೆಕೆಯೇ ಹೆಚ್ಚು, ಇಬ್ಬನಿ ಬೀಳುವುದು ಕಡಿಮೆ. ಚಳಿ -ಇಬ್ಬನಿ ಇದ್ದರೆ ಸೇವಂತಿಗೆ ಗಿಡ ಉತ್ತಮವಾಗಿ ಬೆಳೆಯುತ್ತದೆ, ಮೊಗ್ಗು ಬಾಡುವುದಿಲ್ಲ. ಆದರೆ ಈ ಬಾರಿ ಸೆಕೆಯಿಂದಾಗಿ ಗಿಡದ ಬೆಳವಣಿಗೆಯೂ ಕುಂಠಿತಗೊಂಡಿದ್ದು, ಮೊಗ್ಗಿಗೂ ಸಮಸ್ಯೆಯಾಗಿದೆ.

ಕಳೆದ ವರ್ಷ 1 ಸಾವಿರ ಹೂವಿಗೆ 100ರಿಂದ 150 ರೂ., ಕೆಲವೊಮ್ಮೆ 50 ರೂ. ವರೆಗೆ ಮಾರಾಟವಾಗಿತ್ತು. ಆದರೆ ಈ ಬಾರಿ ಬೆಳೆ ಕಡಿಮೆ, ಕೊಯ್ಯುವ ಕೂಲಿಯೂ ಈಗ ತುಂಬಾ ದುಬಾರಿ. 1 ಸಾವಿರ ಹೂವಿಗೆ ಕನಿಷ್ಠ 150ರಿಂದ 200 ರೂ.ವರೆಗೆ ದರ ಸಿಕ್ಕಿದರೆ ಖರ್ಚಾದರೂ ಹುಟ್ಟುತ್ತದೆ. ಈ ಬಾರಿ ವಾತಾವರಣದ ಏರುಪೇರಿನಿಂದಾಗಿ ಉತ್ತಮ ಇಳುವರಿ ಇಲ್ಲ, ದರವೂ ಇಲ್ಲ.
– ನರಸಿಂಹ ದೇವಾಡಿಗ,
ಕಟ್ಟು, ಸೇವಂತಿಗೆ ಬೆಳೆಗಾರರು

ಆಗಸ್ಟ್‌ನಲ್ಲಿ ಬಿತ್ತನೆ ಮಾಡಿದ ಸೇವಂತಿಗೆ ಗಿಡಗಳಿಗೆಲ್ಲ ಮಳೆಯಿಂದ ಭಾರೀ ಹಾನಿಯಾಗಿದೆ. ಆ ಗಿಡಗಳೆಲ್ಲ ಈಗಷ್ಟೇ ಚಿಗುರಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿಲ್ಲ.
– ರಾಘವೇಂದ್ರ ಗಾಣಿಗ, ಕಟ್ಟು ಹೆಮ್ಮಾಡಿ, ಬೆಳೆಗಾರ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next