ಬೆಂಗಳೂರು: ಹಣ ಇದ್ದೆಡೆ ಸಮಸ್ಯೆಗಳು ಹೆಚ್ಚಿರುತ್ತವೆ. ಆದರೆ, ಸಹಕಾರಿ ಕ್ಷೇತ್ರ ಅಸಂಘಟಿತರನ್ನು ಸಂಘಟಿತ ವ್ಯವಸ್ಥೆಯೊಳಗೆ ತರುವ ಜತೆಗೆ ಸಮಾಜದ ಏಳ್ಗೆಗೆ ನೆರವಾಗುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅಭಿಪ್ರಾಯ ವ್ಯಕ್ತಪಡಿಸಿದರು. ವಸಂತ ನಗರದ ಸಂಯುಕ್ತ ಗುಜರಾತಿ ಭವನದಲ್ಲಿ ಭಾನುವಾರ ನಡೆದ ಬಿಎಸ್‌ಎನ್‌ಎಲ್ ನೌಕರರ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಶ್ರಮವಹಿಸಿ ದುಡಿದು ನಿವೇಶನ, ಫ್ಲ್ಯಾಟ್‌ಗಳನ್ನು ಖರೀದಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ತಿಂಗಳಿಗೆ ಲಕ್ಷ ರು. ವೇತನ ಪಡೆದರೂ ಒಂದು ನಿವೇಶನ ಕೊಳ್ಳುವುದು ಕಷ್ಟವಾಗಿದೆ. ಹೀಗಾಗಿ ಪೋಷಕರು ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳೇ ಕುಟುಂಬದ ಆಸ್ತಿಯಾಗುವಂತೆ ಬೆಳೆಸಬೇಕು ಎಂದು ಸಲಹೆ ನೀಡಿದರು.
ಈ ಸಂಘ ಯಶಸ್ವಿಯಾಗಿ 50 ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ಆರಂಭದಿಂದ ಉತ್ತಮವಾಗಿ ಮುನ್ನಡೆಸಿಕೊಂಡು ಬಂದಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಅಸಂಘಟಿತರನ್ನು ಸಂಘಟಿತರನ್ನಾಗಿ ಮಾಡುವ ಸಹಕಾರಿ ಕ್ಷೇತ್ರ ಬೆಳೆದಷ್ಟೂ ಸಮಾಜಕ್ಕೆ ಒಳಿತಾಗುತ್ತದೆ ಎಂದರು.
ರಾಜ್ಯದ ಪ್ರತಿಭಾನ್ವಿತರು ರಾಜ್ಯ ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾರೆ. ಕೆಎಎಸ್ ಅಧಿಕಾರಿ ಶಾಸಕನಿಗೆ ಸಮನಾದರೆ, ಐಎಎಸ್ ಅಧಿಕಾರಿ ಸಚಿವರಿಗೆ ಸಮಾನವೆಂದರೆ ತಪ್ಪಾಗಲಾರದು. ಶಾಸಕ, ಮಂತ್ರಿ ಪದವಿಗಳು ಐದು ವರ್ಷಕ್ಕೆ ಸೀಮಿತವಾದರೆ, ಸರ್ಕಾರಿ ಅಧಿಕಾರಿಯಾಗಿ 60 ವರ್ಷದವರೆಗೆ ಸೇವೆ ಸಲ್ಲಿಸಬಹುದು. ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆಯುವ ಗುರಿಯೊಂದಿಗೆ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಘದಿಂದ 25 ಸಾವಿರ ರೂ. ದೇಣಿಗೆ ನೀಡುವುದಾಗಿ ಸಂಘದ ಅಧ್ಯಕ್ಷ ಚಂದ್ರಪ್ಪ ಘೋಷಿಸಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದ ನಂತರ ಸಂಘದ ವೆಬ್‌ಸೈಟ್ ಲೋಕಾರ್ಪಣೆ ಮಾಡಿದರು. ರಾಜ್ಯ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕ ಪ್ರಕಾಶ್ ಸಿ.ಮಜಿಗಿ, ಸಂಘದ ಉಪಾಧ್ಯಕ್ಷ ಕೆ.ದೊರೆಸ್ವಾಮಿ ಮೊದಲಾದವರು ಇದ್ದರು.