Advertisement

ಸರ್ಕಾರಿ ಯೋಜನೆಗಳ ಸದುಪಯೋಗಕ್ಕೆ ಕರ

09:52 AM Mar 18, 2019 | |

ಸೊರಬ: ಕೃಷಿ ಕ್ಷೇತ್ರ ಉತ್ತೇಜಿಸುವ ಸಲುವಾಗಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಕೃಷಿ ಅಧಿಕಾರಿ ಕಾಂತರಾಜ್‌ ಹೇಳಿದರು.

Advertisement

ತಾಲೂಕಿನ ದೇವತಿಕೊಪ್ಪ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಪರಿಷತ್‌ ಹಾಗೂ ದೇವತಿಕೊಪ್ಪ ಗ್ರಾಮ ಸಮಿತಿ ವತಿಯಿಂದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಸಾಹಿತ್ಯ ಬಗ್ಗೆ ಶುಕ್ರವಾರ ಸಂಜೆ ಏರ್ಪಡಿಸಿದ್ದ ದತ್ತಿನಿ  ಉಪನ್ಯಾಸ, ನಿವೃತ್ತ ಸೈನಿಕರಿಗೆ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಕೃಷಿ ಇಲಾಖೆಯ ಕಾರ್ಯಕ್ರಮಗಳು ಹಾಗೂ ಸವಲತ್ತುಗಳ ಬಗ್ಗೆ ಉಪನ್ಯಾಸ ನೀಡಿದರು. 

ಸರ್ಕಾರದ ಸವಲತ್ತುಗಳನ್ನು ಎಲ್ಲಾ ರೈತರು ಪಡೆಯಲು ಮುಂದಾಗಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಸೆಣಬು ಇತ್ಯಾದಿ ವಿತರಿಸಲಾಗುತ್ತಿದೆ. ಕೂಲಿಯಾಳುಗಳ ಕೊರತೆಯನ್ನು ಯಾಂತ್ರೀಕರಣ ಯೋಜನೆ ನಿಭಾಯಿಸಿದೆ. ಈ ಯೋಜನೆಯಿಂದ ದೇಶದಲ್ಲಿ 284 ಮಿಲಿಯನ್‌ ಟನ್‌ ಆಹಾರ ಸಂಗ್ರಹಿಸಲು ಸಾಧ್ಯವಾಗಿದೆ. ತಾಲೂಕಿನ ಕೃಷಿ ಭೂಮಿಯಲ್ಲಿ ಜಿಂಕ್‌ ಹಾಗೂ ಬೋರಾನ್‌ ಅಂಶ ಕಡಿಮೆಯಿದೆ. ಕೃಷಿ ಭಾಗ್ಯ ಯೋಜನೆಯಲ್ಲಿ 181 ಕೃಷಿಹೊಂಡ ನಿರ್ಮಿಸಲಾಗಿದೆ. ರೈತರು ಕೃಷಿ ಕ್ಷೇತ್ರವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದರು.

ಕನ್ನಡ ಜಾನಪದ ಪರಿಷತ್‌ ಅಧ್ಯಕ್ಷ ಹಾಗೂ ಕನ್ನಡ ಉಪನ್ಯಾಸಕ ಎಸ್‌.ಎಂ.ನೀಲೇಶ್‌ ಜನಪದ ಕೃಷಿಯ ಮೇಲೆ ಯಾಂತ್ರೀಕರಣದ ಪ್ರಭಾವದ ಬಗ್ಗೆ ಉಪನ್ಯಾಸ ನೀಡಿ, ಆಧುನೀಕರಣ, ಜಾಗತೀಕರಣ ಹಾಗೂ ಯಾಂತ್ರೀಕರಣ ಗ್ರಾಮೀಣ ಹಾಗೂ ರೈತ ಸಂಸ್ಕೃತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ಕೃಷಿ ಕ್ಷೇತ್ರದ ಮೇಲಾದ ಯಾಂತ್ರೀಕರಣದ ಪ್ರಭಾವದಿಂದ ರೈತ ಸಂಸ್ಕೃತಿ ಬುಡಮೇಲಾಗಿವೆ. ಬೆಳ್ಳುಂಬು, ಕಣಬ್ಬ, ಗುತ್ತಿಗೆಗದ್ದೆ ಹಬ್ಬಗಳ ಜತೆಗೆ ನೇಗಿಲು, ನೊಗ, ಕೊರಡು, ಕುಂಟೆಗಳು ಕಣ್ಮರೆಯಾಗಿವೆ. ಇಂದು ಸಣ್ಣ ಪ್ರಮಾಣದ ರೈತರಿಗೂ ಕೂಲಿಯಾಳುಗಳ ಕೊರತೆ ಎದುರಾಗಿ ಅನಿವಾರ್ಯವಾಗಿ ಯಾಂತ್ರೀಕರಣಕ್ಕೆ ಮಾರುಹೋಗಿ ಆರ್ಥಿಕ ಹೊರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಕೂಲಿಯಾಳುಗಳ ಮೇಲೆ ಯಾಂತ್ರೀಕರಣ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಉದ್ಯೋಗ ಅರಸಿ ಗುಳೇಹೋಗುವ ದುಸ್ಥಿತಿ ಎದುರಾಗಿದ್ದು ದುರಂತ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಹಾಲೇಶ್‌ ನವುಲೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯದ ಜತೆಗೆ ನೆಲ, ಜಲ, ರೈತರು ಹಾಗೂ ಸೈನಿಕರ ಬಗ್ಗೆ ಗೌರವ ಹಾಗೂ ಒತ್ತು ನೀಡುತ್ತಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ಯಶಸ್ಸು ಹೊಂದಲು ಮಾರ್ಗದರ್ಶನದ ಅಗತ್ಯವಿದೆ ಎಂದರು.
 
ಗ್ರಾಮ ಸಮಿತಿ ಅಧ್ಯಕ್ಷ ಜಲದಿ ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಸಾಪ ಕಾರ್ಯದರ್ಶಿ ದೀಪಕ್‌ ಧೋಂಗಡೇಕರ್‌, ರೋಟರಿ ಕ್ಲಬ್‌ ಸದಸ್ಯ ರಾಜು ಹಿರಿಯಾವಲಿ, ಸಂಜಯ್‌, ನಿಂಗಪ್ಪ, ಈರಪ್ಪ ಗಣತಿ, ಗಣಪತಿ ತಡಗಣಿ, ಗಣಪತಿ ಬಣಗಾರ್‌, ಅಣ್ಣಪ್ಪ, ರಾಜು ಇತರರಿದ್ದರು.

Advertisement

ಕಲಾವಿದರಾದ ಚಂದ್ರಪ್ಪ ಅತ್ತಿಕಟ್ಟಿ, ಅಶೋಕ್‌ ತತ್ತೂರು, ಸೋಮಶೇಖರ್‌ ಹಾಗೂ ಬಸವಂತಪ್ಪ ಜನಪದ ಗಾಯನ ನೆರವೇರಿಸಿದರು. ವೇದಿಕೆ ವತಿಯಿಂದ ನಿವೃತ್ತ ಸೈನಿಕ ಆನಂದಪ್ಪ, ಪ್ರಗತಿಪರ ರೈತರಾದ ಗಣತಿ ಈರಪ್ಪ, ಜಲದಿ
ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next