Advertisement

ಕಾನೂನು ಬಲಪಡಿಸಲು ಸಲಹೆ ಸಂಗ್ರಹ

12:39 PM Mar 19, 2017 | Team Udayavani |

ದಾವಣಗೆರೆ: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾನೂನು ಬಲಪಡಿಸಲು, ಅಪ್ರಸ್ತುತ ಕಾನೂನು ತೆರವಿಗೆ ನ್ಯಾಯಾಂಗ ವ್ಯವಸ್ಥೆಯ ನ್ಯಾಯಾಧೀಶರು, ವಕೀಲರು ತಮ್ಮ ಸಲಹೆ ನೀಡಬೇಕು ಎಂದು ಕಾನೂನು ಆಯೋಗದ ಅಧ್ಯಕ್ಷ, ನಾಡೋಜ ಎಸ್‌.ಆರ್‌. ನಾಯಕ್‌ ಮನವಿ ಮಾಡಿದ್ದಾರೆ.

Advertisement

ಶನಿವಾರ ಜಿಲ್ಲಾ ವಕೀಲರ ಭವನದಲ್ಲಿ ವಕೀಲರ ಸಂಘದಿಂದ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ರಚನೆಗೆ ಕೋಣೆಯಲ್ಲಿ ಕುಳಿತುಕೊಂಡರೆ ಸಾಲದು, ಆ ಕಾರ್ಯಕ್ಕೆ ಸಂಬಂಧಪಟ್ಟವರ ಅಭಿಪ್ರಾಯ ಸಂಗ್ರಹಿಸಬೇಕು ಎಂದ ಉದ್ದೇಶದಿಂದ ನಾನು ಆಯೋಗದ ಅಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. 

ಪತ್ರಕರ್ತರು, ನ್ಯಾಯಾಧೀಶರು, ನ್ಯಾಯವಾದಿಗಳು, ಕಾನೂನು ವಿದ್ಯಾರ್ಥಿಗಳು, ಕಾನೂನು ಕುರಿತು ಆಸಕ್ತಿ ಹೊಂದಿರುವ ಎಲ್ಲರೂ ತಮ್ಮ ಸಲಹೆ ನೀಡಬೇಕು ಎಂದರು. ದೇಶಕ್ಕೆ ಸ್ವತಂತ್ರ ಬಂದ ನಂತರ ಸಂವಿಧಾನದ ಮೂಲಕ ನಾವು ನಮ್ಮದೇ ಆದ ಶಾಶ್ವತ ಶಾಸಕಾಂಗ ಹೊಂದಿದ್ದೇವೆ. ಅವರು ಶಾಸನ ರಚನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. 

ಹಾಗಿದ್ದರೂ ನಮ್ಮ ಸರ್ಕಾರ ಮತ್ತೆ ಕಾನೂನು ಆಯೋಗ ರಚಿಸಿದ್ದು, ಹಿರಿಯ ವಕೀಲರೂ ಸಹ ಇಂತಹ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. ಭಾರತ ಒಂದು ದೇಶವಾಗಿ ಇಲ್ಲ. ಇದೊಂದು ಖಂಡವಾಗಿದೆ. ಇಲ್ಲಿ ಪ್ರಪಂಚದ ಎಲ್ಲಾ ರೀತಿಯ ಆಚಾರ, ವಿಚಾರ, ಧರ್ಮ, ಸಂಸ್ಕೃತಿಗಳಿವೆ. ಹೀಗಾಗಿ ಕಾನೂನು ಸಹ ಭಿನ್ನ ಆಗಿದೆ.

ಇದೇ ಕಾರಣಕ್ಕೆ ದೇಶಕ್ಕೊಂದು ಆಯೋಗ ಅಸಾಧ್ಯ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ರಾಜ್ಯಮಟ್ಟದಲ್ಲಿ ಆಯೋಗ ರಚಿಸಿದೆ. 13 ವರ್ಷಗಳಿಂದ ಈ ಪರಿಪಾಠ ಬೆಳೆದುಕೊಂಡು ಬಂದಿದೆ ಎಂದು ಅವರು ಹೇಳಿದರು.  ರಾಜ್ಯದಲ್ಲಿ ಸದ್ಯ 500ಕ್ಕೂ ಹೆಚ್ಚು ಕಾನೂನುಗಳಿವೆ. ಇವುಗಳಲ್ಲಿ ತಿದ್ದುಪಡಿಯಾದ ಕಾನೂನು ಸಹ ಸೇರಿವೆ. ಆದರೆ, ಎಷ್ಟೋ ಕಾನೂನುಗಳು ಇಂದು ಅಪ್ರಸ್ತುತ ಆಗಿವೆ.

Advertisement

ಕೆಲ ಕಾನೂನುಗಳು ಯಾವ ಸಂದರ್ಭದಲ್ಲೂ ಬಳಕೆಯಾಗಿಯೇ ಇಲ್ಲ. ಇಷ್ಟಿದ್ದರೂ ಕೆಲ ವಿಷಯಗಳು ಕಾನೂನು ವ್ಯಾಪ್ತಿಯಲ್ಲಿ ಇಲ್ಲವಾಗಿವೆ. ಇವುಗಳ ಪರಿಶೀಲನಾ ಕಾರ್ಯ ನಡೆಯಬೇಕು. ಅವಶ್ಯವಿಲ್ಲದ ಕಾನೂನು ತೆಗೆದುಹಾಕುವ ಕೆಲಸ ಮಾಡಬೇಕು. ಇದೇ ಕಾರಣಕ್ಕೆ ನಮ್ಮ ಆಯೋಗ ರಚನೆಯಾಗಿದೆ ಎಂದು ಅವರು ತಿಳಿಸಿದರು. ಕೇಂದ್ರ ಸರ್ಕಾರ ಇದೀಗ ಆ ಕೆಲಸ ಮಾಡಿದೆ.

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅನೇಕ ಅನಾವಶ್ಯಕ, ಅಪ್ರಸ್ತುತ, ಬಳಕೆ ಇಲ್ಲದ ಕಾನೂನು ತೆಗೆದು ಹಾಕಲಾಗಿದೆ. ಒಟ್ಟು 177 ಕಾನೂನು ತೆಗೆದುಹಾಕಲಾಗಿದೆ. ಇದೀಗ ಇನ್ನೂ 1500 ಕಾನೂನು ತೆಗೆದು ಹಾಕಲು ಕೇಂದ್ರ ಕ್ರಮ ವಹಿಸುತ್ತಿದೆ. ಇಂತಹುದ್ದೇ ಕ್ರಮವನ್ನು ನಮ್ಮ ರಾಜ್ಯದಲ್ಲಿ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು. ಕಾನೂನು ಹರಿಯುವ ನೀರಿನ ಹಾಗೆ.

ಪ್ರತೀ ಕ್ಷಣ ಬದಲಾಗುತ್ತಲೇ ಇರುತ್ತದೆ. ಅನೇಕ ಕಾನೂನು ಪಂಡಿತರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಲ, ಸ್ಥಳಕ್ಕೆ ತಕ್ಕ ಹಾಗೆ ಕಾನೂನು ಬದಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ನಮ್ಮಲ್ಲಿ ಸಾಕಷ್ಟಿವೆ. ನಮ್ಮ ಸಂವಿಧಾನ ಎಲ್ಲರೂ ಸಮಾನರು ಎಂದು ಪ್ರತಿಪಾದಿಸುತ್ತದೆ. ಆದರೆ, ಇದುವರೆಗೆ ಆ ಸಮಾನತೆ ಸಾಧ್ಯವಾಗಿಲ್ಲ. ಇಂದಿಗೂ ಜಾತಿ ಪದ್ಧತಿ, ಅನಿಷ್ಠ ಆಚರಣೆಗಳಿವೆ. ಇಡೀ ದೇಶದ ಸಂಪತ್ತು ಕೇವಲ ಶೇ.1ರಷ್ಟಿರುವ ಜನರಲ್ಲಿ ಉಳಿದುಕೊಂಡಿದೆ.

ಆರ್ಥಿಕ ಅಸಮಾನತೆ ಕಾಡುತ್ತಿದೆ. ನಮ್ಮ ಮಹಾನ್‌ ಚೇತನ ಡಾ| ಬಿ.ಆರ್‌. ಅಂಬೇಡ್ಕರ್‌ರ ಆಶಯ ಈಡೇರುವ ನಿಟ್ಟಿನಲ್ಲಿ ಕಾನೂನು ರಚನೆಯಾಗಿ, ಪರಿಪಾಲನೆಯಾಗಬೇಕಿದೆ ಎಂದು ಅವರು ಪ್ರತಿಪಾದಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಎಂ. ಶೀÅದೇವಿ, ನ್ಯಾಯಾಧೀಶೆ ಸುವರ್ಣ ಕೆ. ಮಿರ್ಜಿ, ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ಧಪ್ಪ, ನ್ಯಾಯಾಧೀಶರಾದ ಎ.ಎಸ್‌. ಸದಲಗಿ ಇತರರು ವೇದಿಕೆಯಲ್ಲಿದ್ದರು. ವಕೀಲರು ಕಾನೂನು ತಿದ್ದುಪಡಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.  

Advertisement

Udayavani is now on Telegram. Click here to join our channel and stay updated with the latest news.

Next