Advertisement

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

12:19 AM Apr 26, 2024 | Team Udayavani |

ಮಂಗಳೂರು: ದೇಶಕ್ಕೆ ಸುಭದ್ರ ಆಡಳಿತ ನೀಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಮತ್ತೆ ಬಲಪಡಿಸುವ ಉದ್ದೇಶದಿಂದ ಬಿಜೆಪಿಯನ್ನು ದಕ್ಷಿಣ ಕನ್ನಡದಲ್ಲೂ ಗೆಲ್ಲಿಸಬೇಕು ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಮನವಿ ಮಾಡಿದರು.

Advertisement

ಬಹಿರಂಗ ಪ್ರಚಾರ ಅಂತ್ಯ ಗೊಂಡಿದ್ದು, ಚುನಾವಣೆ ಕೊನೆಯ ದಿನವಾದ ಗುರುವಾರ ಅವರು ನಗರದ ಹಲವೆಡೆಗಳಲ್ಲಿ ಮತದಾರರ ಮನೆ ಮನೆ ಭೇಟಿ ಕಾರ್ಯಕ್ರಮದ ವೇಳೆ ಮಾತನಾಡಿದರು.

ದೇಶದಲ್ಲಿ ಮೋದಿ 3.0 ಸರಕಾರ ಬಂದರೆ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸಾಂಗವಾಗಿ ಮುಂದುವರಿಯಲಿವೆ. ಇನ್ನೊಂದೆಡೆ ಕಳೆದ ಮೂರು ಅವಧಿಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಕೈಗೊಂಡ ಕಾರ್ಯಗಳನ್ನು ಮುನ್ನಡೆಸಬೇಕಾಗಿದೆ. ಅದಕ್ಕಾಗಿ ನವಯುಗ ನವಪಥವೆಂಬ 9 ಅಂಶಗಳ ಅಭಿವೃದ್ಧಿ ಕಾರ್ಯಸೂಚಿಯನ್ನು ಈಗಾಗಲೇ ನಿಮ್ಮ ಮುಂದೆ ಇರಿಸಿದ್ದೇನೆ ಎಂದು ಅವರು ವಿವರಿಸಿದರು.

ಸತ್ಯಧರ್ಮದ ನೆಲ, ಸಂಸ್ಕೃತಿಯ ನೆಲೆಯಾದ ನಮ್ಮ ತುಳುನಾಡು ಸಾಧ್ಯತೆಗಳ ಸಾಗರ. ಇಲ್ಲಿ ಪ್ರಗತಿ ಹಾಗೂ ಪರಂಪರೆ ಎರಡಕ್ಕೂ ಸಮಾನ ಆದ್ಯತೆ ನೀಡುವೆ, ಭಾರತವು ಅಮೃತಕಾಲಕ್ಕೆ ಪಾದಾರ್ಪಣೆ ಮಾಡುವ ಈ ಸಮಯದಲ್ಲಿ ನಮ್ಮ ದಕ್ಷಿಣ ಕನ್ನಡವನ್ನು ಮೋದಿಯವರ ಅಭಿವೃದ್ಧಿಯ ನೀಲಿನಕ್ಷೆಯ ಅಂಗವಾಗಿಸಬೇಕು ಎನ್ನುವ ಮಹಾತ್ವಾಕಾಂಕ್ಷೆ ಹೊಂದಿದ್ದೇನೆ ಎಂದರು.

ವಿಕಸಿತ ಭಾರತಕ್ಕೆ ವಿಕಸಿತ ದಕ್ಷಿಣ ಕನ್ನಡ ಪರಿಕಲ್ಪನೆಗೆ ಪೂರಕವಾಗಿ 9 ಅಂಶಗಳಲ್ಲಿ ನನ್ನ ಮನದಾಳದ ಮಾತುಗಳನ್ನು ಕಾರ್ಯಸೂಚಿ ರೂಪದಲ್ಲಿ ನಿಮ್ಮ ಮುಂದಿರಿಸಿದ್ದೇನೆ. ಅದರಲ್ಲಿ ಮಂಗಳೂರು-ಬೆಂಗಳೂರು ಸಂಪರ್ಕದ ಅಡೆ ತಡೆ ನಿವಾರಣೆ, ಜಿಲ್ಲೆಗೆ ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ, ಉದ್ಯಮ ಶೀಲತೆಗೆ ಪ್ರೋತ್ಸಾಹ, ಪ್ರವಾಸೋದ್ಯಮ ಚಟುವಟಿಕೆಗೆ ಹೊಸ ದಿಶೆ ನೀಡುವುದು, ನಾರಿಶಕ್ತಿಗೆ ಹೊಸತನ ನೀಡುವುದು, ಉದ್ಯಮದಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವುದು, ತುಳುನಾಡು ಹೆರಿಟೇಜ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಸ್ಥಾಪನೆ, ಕೃಷಿ-ಹೈನೋದ್ಯಮ-ಸಾವಯವ ಕೃಷಿಗೆ ಪ್ರೋತ್ಸಾಹ, ನೀಡಲಾಗುವುದು ಎಂದು ವಿವರಿಸಿದ್ದಾರೆ.

Advertisement

ಕ್ಷೇತ್ರದ ಜನರೊಂದಿಗೆ ಸದಾ ಮುಕ್ತ ಮಾತುಕತೆಗೆ ಅವಕಾಶ ನೀಡುತ್ತೇನೆ, ಅದಕ್ಕಾಗಿಯೇ ಕ್ಯಾಚಪ್‌ ವಿತ್‌ ಕ್ಯಾಪ್ಟನ್‌ ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದೇನೆ ಎಂದರು.

ಸೈನಿಕನಾಗಿ ಸಿಕ್ಕಿದ ಸೌಭಾಗ್ಯ
ಜಗತ್ತಿನ ಅತಿ ದೊಡ್ಡ ಪಕ್ಷವಾದ ಭಾರತೀಯ ಜನತಾ ಪಾರ್ಟಿಯಿಂದ ಯಾವುದೇ ರಾಜಕೀಯ ಗಾಡ್‌ಫಾದರ್‌ಗಳಿಲ್ಲದ ಓರ್ವ ಸಾಮಾನ್ಯ ಯುವಕನಿಗೆ, ದೇಶಕ್ಕೆ ಸೇವೆ ಸಲ್ಲಿಸಿದ ಸೈನಿಕನಿಗೆ ದಕ್ಷಿಣ ಕನ್ನಡದಂತಹ ಮಹತ್ವದ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದೇ ನನ್ನ ಸೌಭಾಗ್ಯ. ಸೈನಿಕನನ್ನು ಚುನಾವಣೆಯಲ್ಲೂ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿದರೆ ಅದೇರೀತಿಯಲ್ಲಿ ನನ್ನ ಕರ್ತವ್ಯವನ್ನು ನಿರ್ವಹಿಸಿ ಕ್ಷೇತ್ರದ ಸಮಗ್ರ ಸುಧಾರಣೆ ಹಾಗೂ ಮೋದಿಯವರ ಕೈ ಬಲಪಡಿಸುವ ಕೆಲಸ ಮಾಡುವೆ ಎಂದು ಮತದಾರರೊಂದಿಗೆ ಮಾತನಾಡುವ ವೇಳೆ ಕ್ಯಾ| ಚೌಟ ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.

ಜಾತಿ ಧರ್ಮಕ್ಕಿಂತ ದೇಶದ ಹಿತ ಮುಖ್ಯ
ಯಾವುದೇ ಜಾತಿ ಧರ್ಮದ ತಾರತಮ್ಯವನ್ನು ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಯಾರೂ ಮಾಡಿಲ್ಲ, ನಮಗೆ ಸಮಷ್ಟಿ ಹಿತ, ಸುಭದ್ರ ದೇಶದ ನಿರ್ಮಾಣವೇ ಮುಖ್ಯ. ಸಂಸದನಾದ ಬಳಿಕವೂ ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿಯ ಮೂಲಮಂತ್ರವನ್ನೇ ಹಿಡಿದು ಮುನ್ನಡೆಯುವೆ ಎಂದು ಕ್ಯಾ| ಚೌಟ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next