ಧಾರವಾಡ: ಸತತ ಬರಗಾಲದಿಂದ ತತ್ತರಿಸಿ ಹೋಗಿರುವ ರೈತರ ಸಂಕಷ್ಟ ಪರಿಹಾರಕ್ಕಾಗಿ ರಾಜ್ಯ ಸರಕಾರ ಮೋಡ ಬಿತ್ತನೆಗೆ ಮುಂದಾಗಬೇಕು ಎಂದು ಹು-ಧಾ ಮಹಾನಗರ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅರವಿಂದ ಏಗನಗೌಡರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಸರ್ಕಾರ ಮೋಡ ಬಿತ್ತನೆಗಾಗಿ ಬಜೆಟ್‌ನಲ್ಲಿ 30 ಕೋಟಿ ಅನುದಾನ ಮೀಸಲಿಟ್ಟಿದೆ. ಮಳೆ ಇಲ್ಲದೆ ರೈತ ಕಂಗಾಲಾಗಿದ್ದರೂ ಮೋಡ ಬಿತ್ತನೆ ಮಾಡಿಲ್ಲ. ಮೋಡ ಬಿತ್ತನೆಗೆ ಇದು ಸರಿಯಾದ ಸಮಯವಾಗಿದ್ದು, ಸರ್ಕಾರ ಕೂಡಲೇ ಬಿತ್ತನೆ ಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ರೈತರು ಬಿತ್ತನೆ ಚಟುವಟಿಕೆ ಪ್ರಾರಂಭಿಸಿದ್ದು, ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ತುಂತುರು ಮಳೆ ಬರುವಂತಹ ಸಂದರ್ಭದಲ್ಲಿ ಮೋಡ ಬಿತ್ತನೆ ನಡೆಸಿದರೆ ಶೇ. 15ರಿಂದ 20ರಷ್ಟು ಹೆಚ್ಚಿನ ಮಳೆ ಬೀಳಲಿದೆ. ಮೋಡ ಬಿತ್ತನೆಗೆ ವಿವಿಧ ದೇಶಗಳ ಮೊರೆ ಹೋಗುವ ಸ್ಥಿತಿ ಮತ್ತು ವಿಶೇಷ ವಿಮಾನ ಉಪಯೋಗಿಸಿ ದುಬಾರಿ ವೆಚ್ಚ ಭರಿಸಬೇಕಾಗಿತ್ತು.
ಆದರೆ, ಉಡುಪಿಯ ಸ್ಕೈ ವೀವ್ ಸಿಸ್ಟಂನ ರತ್ನಾಕರ ನಾಯಕ ಎಂಬುವರು ಅಭಿವೃದ್ಧಿಪಡಿಸಿರುವ ಡ್ರೋಣ್ ಮೂಲಕ ಮೋಡ ಬಿತ್ತನೆ ಕಾರ್ಯಕ್ಕೆ ಪ್ರಾತ್ಯಕ್ಷಿತೆ ನಡೆಸಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಡ್ರೋಣ್ ಬಳಕೆ ಮೂಲಕ ಮೋಡ ಬಿತ್ತನೆ ಕಾರ್ಯ ನಡೆಸಿದರೆ ಸರ್ಕಾರಕ್ಕೆ ಹಣ ಉಳಿತಾಯವಾಗಲಿದೆ ಎಂದರು.
ರಾಜ್ಯ ಸರ್ಕಾರ 2017ರ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜು. 31 ಕೊನೆ ದಿನ ಎಂಬುದಾಗಿ ಜಿಲ್ಲಾಡಳಿತ ತಿಳಿಸಿದೆ. ಆದರೆ, ಈ ಕುರಿತು ಅನೇಕ ಜನರಿಗೆ ಮಾಹಿತಿ ಇಲ್ಲ.
ರೈತರಿಗೆ ಕಾರ್ಯಾಗಾರ ನಡೆಸುವ ಮೂಲಕ ವಿಮೆಯ ಮಾಹಿತಿ ನೀಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಗುರುಸಿದ್ಧನಗೌಡ ಪಾಟೀಲ, ಬಸವಣ್ಣೆಪ್ಪ ಬಾಳಗಿ, ಶಿವಾನಂದ ಹುಬ್ಬಳ್ಳಿ, ನಿಂಗನಗೌಡ ಪಾಟೀಲ, ಶಿವಯೋಗಿ ತಿಕ್ಕುಂಡಿ ಇದ್ದರು.