Advertisement

ಆರ್‌ಟಿಇ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ

10:28 AM Mar 13, 2022 | Team Udayavani |

ಚಿತ್ರದುರ್ಗ: ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿಯಿಂದ ಬಡ ಮಕ್ಕಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಕೇಂದ್ರದ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸುತ್ತೇನೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಭರವಸೆ ನೀಡಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಡಾ| ಬಿ.ಆರ್‌. ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌ ವತಿಯಿಂದ ಹಳೆಯ ಆರ್‌ಟಿಇ ಕಾಯ್ದೆ ಮರು ಜಾರಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಜಿಎನ್‌ಎಂ ಮತ್ತು ಬಿಎಸ್‌ಸಿ ನರ್ಸಿಂಗ್‌, ಪ್ಯಾರಾ ಮೆಡಿಕಲ್‌ ಹಾಗೂ ಗಗನಸಖೀ ತರಬೇತಿ ಪುನರಾರಂಭ ಸಂಬಂಧ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಪಂಜಾಬ್‌, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿಲ್ಲ. ಸರ್ಕಾರ ನೀಡುವ ಅನುದಾನವನ್ನು ಕೆಲವರು ಕಬಳಿಸುತ್ತಿದ್ದಾರೆ. ಆದರೆ ದೇಶದ ಯಾವುದೇ ರಾಜ್ಯ ಸರ್ಕಾರ ನೀಡದಷ್ಟು ವಿದ್ಯಾರ್ಥಿ ವೇತನವನ್ನು ನಾನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರ ನೀಡಿದೆ. ವಿದ್ಯಾರ್ಥಿ ವೇತನ ಕುರಿತು ಸಾಕಷ್ಟು ಸಮಸ್ಯೆಗಳಿದ್ದರೂ ಈವರೆಗೆ ಪರಿಶಿಷ್ಟ ವರ್ಗದ ಯಾವುದೇ ಶಾಸಕರು ಸದನದಲ್ಲಿ ಚರ್ಚೆ ನಡೆಸಿಲ್ಲ. ಧರಣಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಮ್‌ ಮಾತನಾಡಿ, ಸಂವಿಧಾನವನ್ನು ಸರಿಯಾಗಿ ಜಾರಿ ಮಾಡದಿದ್ದಲ್ಲಿ ಅದು ನಿರರ್ಥಕವಾಗುತ್ತದೆ. ಅದರಂತೆ ಇಂದು ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾರ್ಥಿ ವೇತನ ದೊರೆಯುತ್ತಿಲ್ಲ. ಎಸ್‌ಸಿ-ಎಸ್‌ಟಿ ವರ್ಗದ ಮಕ್ಕಳಿಗೆ ಈ ಹಿಂದೆ ನೀಡುತ್ತಿದ್ದ ತರಬೇತಿಗಳನ್ನು ನಿಲ್ಲಿಸಲಾಗಿದೆ. ಐಎಎಸ್‌, ಕೆಎಎಸ್‌ ತರಬೇತಿಗೆ ಆದ್ಯತೆ ನೀಡಬೇಕು. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಹಕ್ಕು ಕಾಯ್ದೆ ಬದಲಾವಣೆಯಿಂದ ಬಡವರ ಮಕ್ಕಳಿಗೆ ಸೀಟು ಸಿಗದಂತಾಗಿದೆ. ಈ ಕಾಯಿದೆ ತಿದ್ದುಪಡಿ ಮಾಡಿ ಪ್ರವೇಶ ನೀಡುವ ಹೊತ್ತಿಗೆ ಸಾಕಷ್ಟು ಸಮಯವಾಗುತ್ತದೆ. ಕಾಯ್ದೆ ಸರಿಪಡಿಸುವ ಮೊದಲು ಪ್ರತಿ ಸರ್ಕಾರಿ ಶಾಲೆಗೂ ಇಂಗ್ಲಿಷ್‌ ಶಿಕ್ಷಕರನ್ನು ನೇಮಕ ಮಾಡಬೇಕು. ಇದರಿಂದ ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ ಎಂದು ಸಲಹೆ ಮಾಡಿದರು.

Advertisement

ಎಲ್ಲರೂ ಎಸ್‌ಸಿ-ಎಸ್‌ಟಿಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಸಮಸ್ಯೆಗಳ ನಿವಾರಣೆಗೆ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಕಳೆದ 40-50 ವರ್ಷಗಳಿಂದ ಅನೇಕ ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ದೊರೆತಿಲ್ಲ. ಭೂಮಿ ಇಲ್ಲದ ಬಡವರಿಗೆ ಭೂಮಿ ಮುಂಜೂರು ಮಾಡಿ ಅನೇಕ ವರ್ಷಗಳೇ ಕಳೆದಿದ್ದರೂ ಆ ಭೂಮಿಯನ್ನು ಅವರಿಗೆ ಪಡೆದುಕೊಳ್ಳಲು ಆಗಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ನಡೆಸಬೇಕು. ಸಮಸ್ಯೆಗಳ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ನಿವೃತ್ತ ಐಎಎಸ್‌ ಅ ಧಿಕಾರಿ ಡಾ| ಬಾಬುರಾವ್‌ ಮುಡಬಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿ. ಮಹಾಲಿಂಗಪ್ಪ, ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ, ಬಿ.ಪಿ. ಪ್ರೇಮನಾಥ್‌ ಮತ್ತಿತರರು ಭಾಗವಹಿಸಿದ್ದರು.

 

ಏಪ್ರಿಲ್‌ನಿಂದ ಯುಪಿಎಸ್‌ಸಿ ತರಬೇತಿಗೆ ಚಾಲನೆ ನೀಡಲಾಗುವುದು. ಆಂಧ್ರ ಮಾದರಿಯಲ್ಲಿ ಪ್ಯಾರಾಮೆಡಿಕಲ್‌ ತರಬೇರತಿ ಆರಂಭಿಸಲಾಗುವುದು. ಎನ್‌ಜಿಓಗಳಿಗೆ ಯಾವುದೇ ಲೆಕ್ಕಪತ್ರವಿಲ್ಲ. ಎನ್‌ಜಿಒಗಳಿಗೆ ಬರುವ ಹಣ ಎಲ್ಲಿ, ಯಾವುದಕ್ಕೆ, ಎಷ್ಟು ಖರ್ಚಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ. ಈ ಕುರಿತು ಸೂಕ್ತ ಪರಿಹಾರ ಕಂಡುಕೊಳ್ಳಬೇಕು.

ಎ. ನಾರಾಯಣಸ್ವಾಮಿ, ಕೇಂದ್ರ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next