ಬೆಂಗಳೂರು: ರಾಜ್ಯದ ಆನೆ ಶಿಬಿರಗಳಲ್ಲಿ ಚಿಕಿತ್ಸೆ ಸೇರಿ ಒದಗಿಸಲಾಗುತ್ತಿರುವ ಮೂಲ ಸೌಲಭ್ಯಗಳ ಬಗ್ಗೆ ನಾಲ್ಕು ವಾರಗಳಲ್ಲಿ ವಿವರವಾದ ಮಾಹಿತಿ ಸಲ್ಲಿಸುವಂತೆ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತಂತೆ ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಾದ ಆಲಿಸಿದ ನ್ಯಾಯಪೀಠ, ರಾಜ್ಯದಲ್ಲಿ ಸರ್ಕಾರ ಎಷ್ಟು ಆನೆ ಶಿಬಿರಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ ಎಷ್ಟು ಆನೆಗಳು ವಾಸ ಮಾಡುತ್ತಿವೆ. ಯಾವ ರೀತಿಯ ಸೌಲಭ್ಯಗಳನ್ನು ಕೊಡಲಾಗುತ್ತಿದೆ.
ಅಲ್ಲಿ ಕೆಲಸ ಮಾಡುತ್ತಿರುವ ಕಾಯಂ ಸಿಬ್ಬಂದಿ ಸಂಖ್ಯೆ ಎಷ್ಟು ಎಂಬ ಕುರಿತು ವಿವರವಾದ ಮಾಹಿತಿ ಸಲ್ಲಿಸುವುದರ ಜತೆಗೆ ಆನೆ ಶಿಬಿರಗಳಲ್ಲಿ ತುರ್ತಾಗಿ ಪಶುವೈದ್ಯರನ್ನು ನೇಮಕ ಮಾಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಸೇರಿ ಅರ್ಜಿಯಲ್ಲಿ ಎತ್ತಲಾಗಿರುವ ಉಳಿದ ಅಂಶಗಳ ಬಗ್ಗೆ ವಿವರವಾದ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಇದಕ್ಕೂ ಮೊದಲು ವಾದ ಮಂಡಿಸಿದ ಅರ್ಜಿದಾರರೂ ಆದ ವಕೀಲ ಅಮೃತೇಶ್, ರಾಜ್ಯದಲ್ಲಿ ನಾಲ್ಕು ಆನೆ ಶಿಬಿರಗಳಿವೆ. ಎರಡು ಮಡಿಕೇರಿಯಲ್ಲಿದ್ದರೆ ಒಂದು ಶಿವಮೊಗ್ಗ ಹಾಗೂ ಮತ್ತೂಂದು ಮೈಸೂರಲ್ಲಿದೆ. ಇಲ್ಲಿ ಪಶು ವೈದ್ಯರಿಲ್ಲ.
ಏನಾದರೂ ಸಮಸ್ಯೆ ಉಂಟಾದರೆ ಸುಮಾರು 60ರಿಂದ 70 ಕಿ.ಮೀ ದೂರದಿಂದ ಪಶುವೈದ್ಯರು ಬರಬೇಕು. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದಿರುವುದರಿಂದ ಆನೆಗಳು ಸಾವನ್ನಪ್ಪುತ್ತಿವೆ. ಆದ್ದರಿಂದ ಆನೆ ಶಿಬಿರಗಳಲ್ಲಿ ತುರ್ತಾಗಿ ಪಶು ವೈದ್ಯರನ್ನು ನೇಮಕ ಮಾಡಬೇಕೆಂದು ಕೋರಿದರು. ಈ ವಾದ ಮಾನ್ಯ ಮಾಡಿದ ನ್ಯಾಯಪೀಠ, ಜುಲೈ 5ಕ್ಕೆ ವಿಚಾರಣೆ ಮುಂದೂಡಿತು.