ಚಿಕ್ಕೋಡಿ: ನೆರೆ ರಾಜ್ಯದಲ್ಲಿ ನಿಪ ಸೋಂಕು ಜ್ವರ ಮನುಷ್ಯರಲ್ಲಿ ಆತಂಕ ಮೂಡಿಸಿದೆ. ಅದೇ ರೀತಿ ರಾಜ್ಯದಲ್ಲಿಯೂ ಈ ಸೋಂಕು ಹರಡುವ ಭೀತಿ ಇದೆ. ಇದರಿಂದ ಸಾರ್ವಜನಿಕರು ಪ್ರಾಣಿ ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ಸೇವಿಸಬಾರದು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ವಿಠ್ಠಲ ಶಿಂಧೆ ಹೇಳಿದರು.
ಇಲ್ಲಿನ ಮಿನಿ ವಿಧಾನಸೌಧ ಸಭಾ ಭವನದಲ್ಲಿ ತಹಶೀಲ್ದಾರ ಸಿ.ಎಸ್. ಕುಲಕರ್ಣಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನಿಪ ಸೋಂಕು ಕುರಿತು ತಾಲೂಕು ಮಟ್ಟದ ಅ ಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸೋಂಕು ನಿವಾರಣೆಗೆ ನಿಪ್ಪಾಣಿ ಮತ್ತು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ವಿಭಾಗ ಪ್ರಾರಂಭ ಮಾಡಲಾಗುತ್ತದೆ. ವಿಪರೀತ ಜ್ವರ, ತಲೆ ನೋವು, ವಾಂತಿ, ಮೈಕೈ ನೋವು, ತೊದಲುವಿಕೆ, ಪ್ರಜ್ಞಾಹೀನತೆ, ನಡುಕ ಇವು ನಿಪ ರೋಗದ ಲಕ್ಷಣಗಳಿದ್ದು, ಇಂತಹ ರೋಗದ ಲಕ್ಷ ಕಂಡು ಬಂದರೆ ತಕ್ಷಣಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಸಿ.ಎಸ್. ಕುಲಕರ್ಣಿ ಮಾತನಾಡಿ, ಈ ರೋಗ ಬಗ್ಗೆ ಪ್ರತಿ ಗ್ರಾಮದಲ್ಲಿ ಡಂಗೂರ ಸಾರಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಬೀದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ರೋಗ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ| ಎಸ್.ಎಸ್. ಗಡೇದ, ಪಶು ಆಸ್ಪತ್ರೆ ಆರೋಗ್ಯಾಧಿಕಾರಿ ಡಾ| ಸದಾಶಿವ ಉಪ್ಪಾರ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಗಜ್ಜಿ, ಬಿಇಒ ಶ್ರೀಪತಿ ಭಟ್ ಸೇರಿದಂತೆ ಮುಂತಾದ ಅ ಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.