Advertisement

ಅಂಗವಿಕಲರು ಮತಗಟ್ಟೆಗೆ ತೆರಳಲು ವಾಹನ ವ್ಯವಸ್ಥೆ

09:11 PM Apr 12, 2019 | Team Udayavani |

ಮೈಸೂರು: ಸದೃಢ ಭಾರತಕ್ಕಾಗಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಎಂದು ವಿಶೇಷಚೇತನರು ಜಾಗೃತಿ ಜಾಥಾ ನಡೆಸುವ ಮೂಲಕ ಮತದಾನ ಜಾಗೃತಿ ಮಾಡಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾ ನಗರಪಾಲಿಕೆ ಮತ್ತು ಜೆಎಸ್‌ಎಸ್‌ ಮಹಾ ವಿದ್ಯಾಪೀಠ, ಜೆಎಸ್‌ಎಸ್‌ ವಿಶೇಷಚೇತನರ ಪಾಲಿಟೆಕ್ನಿಕ್‌ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಚಾಲನೆ ನೀಡಿದರು.

ನಗರದ ಟಿ.ಕೆ.ಲೇಔಟ್‌ನ ಬಿಸಲು ಮಾರಮ್ಮ ದೇವಸ್ಥಾನ ಬಳಿಯಿಂದ 500ಕ್ಕೂ ಹೆಚ್ಚು ವಿಶೇಷಚೇತನರು ಎಸ್‌ಜೆಸಿಇ ಕ್ಯಾಂಪಸ್‌ನಲ್ಲಿರುವ 500ಕ್ಕೂ ಹೆಚ್ಚು ಎಲ್ಲಾ ವರ್ಗದ ವಿಶೇಷಚೇತನರು ಜಾಥಾ ನಡೆಸಿದರು.

ದೈಹಿಕ ವಿಶೇಷಚೇತನರು ತ್ರಿಚಕ್ರ ವಾಹನಗಳಲ್ಲಿ ರ್ಯಾಲಿ ನಡೆಸಿದರೆ, ದೃಷ್ಟಿ ವಿಶೇಷಚೇತನರು ವಾಕಥಾನ್‌ ನಡೆಸಿದರು. ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ, ದೃಷ್ಟಿ ವಿಶೇಷಚೇತನ ಡಾ.ಕೃಷ್ಣ ಹೊಂಬಾಳ್‌ ಮಾತನಾಡಿ, ಮತದಾನ ಎಲ್ಲರ ಹಕ್ಕು, ಆದ್ದರಿಂದ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು.

ಕಳೆದ ಚುನಾವಣೆಗಳಲ್ಲಿ ವಿಶೇಷ ಚೇತನರು ಮತದಾನ ಮಾಡುವುದು ಸ್ವಲ್ಪ ಕಷ್ಟವಿತ್ತು. ವಿಶೇಷಚೇತನರಿಗೆ ಮತದಾನಕ್ಕೆ ಅನುಕೂಲ ಕಲ್ಪಿಸುವ ಮೂಲಕ ಚುನಾವಣೆ ಆಯೋಗ ಸುಧಾರಣೆ ತಂದಿದೆ. ಈಗ ವಿಶೇಷಚೇತನರು ಸುಲಭವಾಗಿ ಮತದಾನ ಮಾಡಬಹುದಾಗಿದೆ ಎಂದರು.

Advertisement

ನ್ಯಾಷನಲ್‌ ಫೆಡರೇಷನ್‌ ಆಫ್ ಬ್ಲೆ„ಂಡ್‌ (ಎನ್‌ಎಬಿ), ಜಿಲ್ಲಾ ವಿಶೇಷಚೇತನರ ಒಕ್ಕೂಟ ಸೇರಿದಂತೆ ನಾನಾ ವಿಶೇಷಚೇತನ ಸಂಘ ಸಂಸ್ಥೆಗಳು ಜಾಥಾದಲ್ಲಿ ಭಾಗವಹಿಸಿ ಗಮನಸೆಳೆದರು.

ಜಾಥಾ ನಂತರ ಜೆಎಸ್‌ಎಸ್‌ ವಿಶೇಷಚೇತನರ ಪಾಲಿಟೆಕ್ನಿಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್‌ಎಬಿಯ ಉಪನ್ಯಾಸಕ ಕೆ.ಎಂ.ಪುಟ್ಟರಾಜು ಮಾತನಾಡಿ, ಹಿಂದಿನ ಚುನಾವಣೆಗಳಿಗಿಂತ ಈಗ ಮತ ಚಲಾವಣೆ ಸುಲಭ. ಚುನಾವಣೆ ಆಯೋಗ ಹೆಚ್ಚಿನ ಸೌಲಭ್ಯ ಕಲ್ಪಿಸಿದೆ ಎಂದರು.

ದೈಹಿಕ ವಿಶೇಷಚೇತನರಿಗೆ ಗಾಲಿಕುರ್ಚಿ ವ್ಯವಸ್ಥೆ ಕಲ್ಪಿಸಿದೆ. 1950 ಸಂಖ್ಯೆಗೆ ಕರೆ ಮಾಡಿದರೆ ಮತಗಟ್ಟೆಯಿಂದ ಆಟೋ ವ್ಯವಸ್ಥೆ ಒದಗಿಲಾಗುತ್ತದೆ. ಈ ಮೊದಲು ದೃಷ್ಟಿ ವಿಶೇಷಚೇತನರು ಮತ ಹಾಕುವಾಗ ನಮ್ಮ ಸಹಾಯಕರು ನಾವು ಹೇಳಿದ ಪಕ್ಷದ ಬದಲು ಅವರಿಗಿಷ್ಟವಾದ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಿದ್ದರು.

ಇದರಿಂದಾಗಿ ನಮಗೆ ವಿಶ್ವಾಸವಿರುತ್ತಿರಲಿಲ್ಲ. ಆದರೆ, ಈ ಬಾರಿ ಮತಯಂತ್ರಗಳಲ್ಲಿ ಬ್ರೈಲ್‌ಲಿಪಿ ಅಳವಡಿಸಿರುವುದರಿಂದ ವಿಶ್ವಾಸದಿಂದ ಮತ ಚಲಾಯಿಸಬಹುದು ಎಂದು ವಿವರಿಸಿದರು.

ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್‌ ಮಠ ಮಾತನಾಡಿ, ವಿಶೇಷಚೇತನರಿಗೆ ಮತದಾನದ ಮಹತ್ವ ತಿಳಿಸಬೇಕಿದ್ದು, ಈ ನಿಟ್ಟಿನಲ್ಲಿ ವಿಶೇಷಚೇತನರ ಮತ ಜಾಗೃತಿ ಜಾಥಾ ಸಹಕಾರಿಯಾಗಲಿದೆ ಎಂದು ಹೇಳಿದರು. ಪ್ರಾಂಶುಪಾಲ ಇಳಂಗೋವನ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next