ಧಾರವಾಡ: ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಆಡಳಿತ ಮಂಡಳಿ-ನೌಕರರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಖಾಸಗಿ ಶಾಲಾ- ಕಾಲೇಜುಗಳಿಗೆ ಬಂದ್ ಕರೆ ನೀಡಿದ್ದರಿಂದ ಶಾಲಾ-ಕಾಲೇಜುಗಳಿಗೆ ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೌಕರರು ಹಾಗೂ ಆಡಳಿತ ಮಂಡಳಿ ಸದಸ್ಯರು, ಕಡಪಾ ಮೈದಾನದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಬಳಿಕ ಹೊರಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲಾ ನೌಕರರ ಬೇಡಿಕೆಗಳನ್ನು ಮುಖ್ಯಮಂತ್ರಿ ಪರಿಶೀಲಿಸಿದ್ದಾರೆ. ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸರ್ಕಾರದ ಗಮನಕ್ಕೆ ತಂದರೂ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.
ಕಾಲ್ಪನಿಕ ವೇತನ ಬಡ್ತಿ ವಿಷಯ ಅನೇಕ ವರ್ಷಗಳಿಂದ ಇತ್ಯರ್ಥವಾಗದೇ ನನೆಗುದಿಗೆ ಬಿದ್ದಿದೆ. ಇದರಿಂದ ನೌಕರರು ನಿವೃತ್ತಿ ಹೊಂದಿದ ಮೇಲೆ ಆರ್ಥಿಕ ನಷ್ಟವಾಗುತ್ತಿದೆ. ಹೀಗಾಗಿ ಅನುದಾನ ರಹಿತ ಮತ್ತು ಅನುದಾನಿತ ಅವಧಿಯ ನಡುವಿನ ಕಾಲ್ಪನಿಕ ವೇತನ ಬಡ್ತಿ ವಿಷಯವಾಗಿ ಬಸವರಾಜ ಹೊರಟ್ಟಿ ಅವರ ವರದಿಯನ್ನು ಯಥಾವತ್ತಾಗಿ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.
2012ರ ನಂತರ ಖಾಲಿಯಾಗಿರುವ ಹುದ್ದೆಗಳನ್ನು ತುಂಬಲು ಸರ್ಕಾರ ಪರವಾನಗಿ ನೀಡದ ಕಾರಣ ಆಡಳಿತ ಮಂಡಳಿಯವರು ತಾತ್ಕಾಲಿಕವಾಗಿ ನೇಮಿಸಿಕೊಳ್ಳುತ್ತಿರುವುದರಿಂದ ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ ತಕ್ಷಣ ಪರವಾನಗಿ ನೀಡಬೇಕು. ಸಿಬಿಎಸ್‌ಸಿ ನಿಯಮಾವಳಿ ಪ್ರಕಾರ ಅನುದಾನಿತ ಮತ್ತು ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಅನುಪಾತವನ್ನು ಕಡ್ಡಾಯವಾಗಿ 1:40ಗೆ ಕಡಿತಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ನಡುವಿನ ಮಲತಾಯಿ ಧೋರಣೆ, ಹೊಸ ಪಿಂಚಣಿ ಯೋಜನೆ, ನೌಕರರ ನಡುವಿನ ತಾರತಮ್ಯ ನಿವಾರಣೆ, ಮಾನ್ಯತೆ ನವೀಕರಣ, ವೇತನ ತಾರತಮ್ಯ ನಿವಾರಣೆ, ಸಮಗ್ರ ಶಿಕ್ಷಣ ಮಸೂದೆ, ಏಳನೇ ವೇತನ ಆಯೋಗ ಜಾರಿ ಸೇರಿದಂತೆ ಸುಮಾರು 25 ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.
ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಜಿ.ಎಂ. ಹೊಸಮನಿ, ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ಕಾರ್ಯದರ್ಶಿ ಎನ್.ಎನ್. ಸವಣೂರ, ಆಡಳಿತ ಮಂಡಳಿ ಮುಖ್ಯಸ್ಥ ಎಚ್.ವಿ. ಡಂಬಳ, ಶಂಕರ ಪಾಟೀಲ, ಕೆ.ಬಿ. ಕುಲಕರ್ಣಿ, ಎಂ.ಎಸ್. ಪಾಟೀಲ ಇದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಎಲ್ಲ ಶಾಲಾ ಕಾಲೇಜುಗಳನ್ನು ಮಂಗಳವಾರ ಬಂದ್ ಮಾಡಲಾಗಿತ್ತು.