Advertisement

ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ಸಿಗುವಂತೆ ಮಾಡುವೆ

12:18 AM Jun 01, 2019 | Lakshmi GovindaRaj |

ಕೇಂದ್ರದಲ್ಲಿ ನೂತನ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಡಿ.ವಿ.ಸದಾನಂದ ಗೌಡ ಅವರು “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದು ಅದರ ವಿವರ ಇಲ್ಲಿದೆ.

Advertisement

* ಯಾವ ಕಾರಣಕ್ಕೆ ನಿಮಗೆ 2ನೇ ಬಾರಿಗೆ ಸಚಿವ ಸ್ಥಾನದ ಜವಾಬ್ದಾರಿ ಸಿಕ್ಕಿರಬಹುದು?
ಕಳೆದ 5 ವರ್ಷದಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಿದ್ದೇನೆ. ಮೋದಿ ವಿಚಾರಧಾರೆಗಳಿಗೆ ಬದ್ಧನಾಗಿ ಅವರ ಆದೇಶಗಳನ್ನು ಅಕ್ಷರಶ: ಪಾಲನೆ ಮಾಡಿದ್ದೇನೆ. ದೇಶ, ರಾಜ್ಯ, ಕ್ಷೇತ್ರದ ಹಿತಾಸಕ್ತಿಯಿಂದ ಕೆಲಸ ಮಾಡಿದ್ದೇನೆ. ಹಾಗಾಗಿ, ಮೋದಿಯವರ ತಂಡದಲ್ಲಿ ಉಳಿಯಲು ನನಗೆ ಅರ್ಹತೆ ಇದೆ ಎಂದು ಪರಿಗಣಿಸಿ ನನ್ನನ್ನು ಉಳಿಸಿಕೊಂಡು 2ನೇ ಬಾರಿಗೆ ಜವಾಬ್ದಾರಿ ನೀಡಿದ್ದಾರೆ.

* ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನಿರ್ವಹಿಸಲಿದ್ದೀರಿ. ಈ ಸೌಲಭ್ಯಗಳು ಜನರಿಗೆ ಮಿತ ದರದಲ್ಲಿ ದೊರೆಯಲು ಏನು ಕ್ರಮ ಕೈಗೊಳ್ಳುತ್ತಿರಿ?
ರಸಗೊಬ್ಬರ ಉತ್ಪಾದನೆಗೆ ಬೇಕಾದ ಮೂಲವಸ್ತುಗಳು ನಮ್ಮ ದೇಶದಲ್ಲಿ ಸಿಗದ ಕಾರಣ ಹೊರ ದೇಶದಿಂದ ಆಮದು ಮಾಡಿಕೊಳ್ಳಬೇಕು. ಇದರಿಂದ ಉತ್ಪಾದನೆಯ ವೆಚ್ಚ ಹೆಚ್ಚಳಗೊಂಡು ಧಾರಣೆ ಏರಿಕೆ ಆಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಆಮದಿಗೆ ನಿಯಂತ್ರಣ ಹೇರಿ, ಭಾರತದಲ್ಲೇ ಉತ್ಪಾದಿಸಲು ಯೋಜನೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರಗಳು ಸಿಗಲಿವೆ.

* ಮಹದಾಯಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಯಾವ ರೀತಿ ನ್ಯಾಯ ಒದಗಿಸುತ್ತಿರಿ?
ರಾಜ್ಯದ ಈ ಎಲ್ಲ ವಿಷಯಗಳನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಅದಕ್ಕೆ ಪರಿಹಾರ ಸೂತ್ರ ಕೊಟ್ಟವನೇ ನಾನು. ಕೇಂದ್ರದ ಕಾನೂನು ಸಚಿವನಾಗಿದ್ದ ಸಂದರ್ಭ ಕಾವೇರಿ ಬಗ್ಗೆ ಕೇಂದ್ರದ ಅಫಿಡವಿಟ್‌ನಲ್ಲಿ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಮತ್ತು ಗ್ರೌಂಡ್‌ ವಾಟರ್‌ ಬಗ್ಗೆ ದಾಖಲಿಸಿದ ಪರಿಣಾಮ ಬೆಂಗಳೂರಿನ ಜನರಿಗೆ 4 ಟಿಎಂಸಿ ಕುಡಿಯುವ ನೀರು ಸಿಕ್ಕಿದೆ. ಕೃಷ್ಣಾ ವಿಚಾರವಾಗಿ ತೆಲಂಗಾಣ ಕರ್ನಾಟಕದ ವಿರುದ್ಧ ಫಿಟಿಶನ್‌ ಹಾಕಿತ್ತು. ಆ ವೇಳೆ, ಕಾಂಗ್ರೆಸ್‌ನ ಎಂ.ಬಿ.ಪಾಟೀಲ್‌ ಅವರು ನನ್ನನ್ನು ಸಂಪರ್ಕಿಸಿದಾಗ, ನಾನು ಅಪಿಡವಿಟ್‌ ಹಾಕಿ ಸಹಕಾರ ನೀಡಿದ್ದೆ. ಕಳಸ-ಬಂಡೂರಿ ವಿಚಾರದಲ್ಲಿಯೂ ನಾನು ಕಾನೂನು ಸಚಿವನಾಗಿದ್ದ ಸಂದರ್ಭ ಕೆಲಸ ಮಾಡಿದ್ದೇನೆ. ಈ ಎಲ್ಲ ಕಾರಣಕ್ಕಾಗಿಯೇ ಬೆಂಗಳೂರಿನ ಜನರು ನನಗೆ ಓಟು ಕೊಟ್ಟಿದ್ದಾರೆ.

* ರಾಜ್ಯಕ್ಕೆ ನಿಮ್ಮಿಂದ ಏನನ್ನು ನಿರೀಕ್ಷೆ ಮಾಡಬಹುದು?
ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ನೀಡಬಹುದಾದ ಎಲ್ಲ ಸಹಕಾರವನ್ನು ಒದಗಿಸಲು ಸಿದ್ಧನಿದ್ದೇನೆ. ನಾನು ಕಳೆದ ಬಾರಿ ಕೇಂದ್ರದ ಸಚಿವನಾಗಿದ್ದಾಗ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಕೊಡಿಸಿದ್ದೇನೆ. ಯುಪಿಎ ಸರಕಾರದ ಐದು ವರ್ಷದ ಅವಧಿಯಲ್ಲಿ ಕರ್ನಾಟಕಕ್ಕೆ 75 ಸಾವಿರ ಕೋ.ರೂ.ಬಂದಿತ್ತು. ಮೋದಿ ಸರಕಾರದ ಐದು ವರ್ಷದ ಅವಧಿಯಲ್ಲಿ 2.42 ಲಕ್ಷ ರೂ.ಕೋಟಿ ಅನುದಾನ ಕೊಡಿಸಿದ್ದೇವೆ.

Advertisement

* ಮೋದಿ ಮಂತ್ರಿಮಂಡಲದ ಕುರಿತು ನಿಮ್ಮ ಅಭಿಪ್ರಾಯ ಏನು?
ಯಾರು ಉತ್ತಮವಾಗಿ ಕೆಲಸ ಮಾಡುತ್ತಾರೋ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾರೋ, ದೇಶದ ಪ್ರಗತಿಗೆ ತನ್ನನ್ನು ತಾನು ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳುತ್ತಾರೋ ಅಂತವರಿಗೆ ಮೋದಿ ಅವಕಾಶ ನೀಡಿದ್ದಾರೆ. ಇದೊಂದು ಅತ್ಯುತ್ತಮ ತಂಡ.

* ಅಡಿಕೆ ಬೆಳೆಗಾರರ ಪರ ನೀವು ಯಾವ ರೀತಿ ನೆರವಾಗುತ್ತಿರಾ?
ಈ ಹಿಂದೆ ಅಡಿಕೆ ಧಾರಣೆ 30ರೂ.ಗೆ ಇಳಿಕೆ ಆದಾಗ ನಾನು ಹೋರಾಟ ಕೈಗೆತ್ತಿಕೊಂಡು ಬೆಂಬಲ ಬೆಲೆ ಕೊಡಿಸಲು ನೆರವಾಗಿದ್ದೇನೆ. ಅಡಿಕೆ ಆಮದು ಸುಂಕವನ್ನು ಶೇ.120ರಷ್ಟು ಹೆಚ್ಚಿಸಿ ಧಾರಣೆ ಹೆಚ್ಚಳವಾಗುವಲ್ಲಿ ಸಹಕಾರ ನೀಡಿದ್ದೇನೆ. ಅಡಿಕೆಯ ಈಗಿನ ಧಾರಣೆ ಸುಧಾರಣೆಗೆ ಹದಿನೈದು ವರ್ಷಗಳ ಹಿಂದೆ ನಾನು ಮಾಡಿದ ನಿರಂತರ ಕೆಲಸಗಳೇ ಪೂರಕ. ಮುಂದೆಯೂ ಬೆಳೆಗಾರರ ಪರ ನಿಂತು ನನ್ನಿಂದಾದ ಗರಿಷ್ಠ ಸ್ಪಂದನೆ ನೀಡುತ್ತೇನೆ.

* ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next