Advertisement

ವಿದೇಶಿ ಮಹಿಳೆಗೆ ಸಹಾಯ: ಡಿಐಜಿ ಪ್ರಶಂಸನಾ ಪತ್ರ

03:50 PM Mar 22, 2017 | Team Udayavani |

ಹುಬ್ಬಳ್ಳಿ: ತೀರ್ಥಯಾತ್ರೆಗೆಂದು ಆಗಮಿಸಿ ನಗರದಲ್ಲಿ ಹಣಕಾಸಿನ ಸಮಸ್ಯೆಯಿಂದ ಪರದಾಡುತ್ತಿದ್ದ ವಿದೇಶಿ ಮಹಿಳೆಗೆ ನೆರವಾಗಿದ್ದ ಉಪನಗರ ಠಾಣೆ ಸಿಬ್ಬಂದಿಗೆ ಪೊಲೀಸ್‌ ಮಹಾನಿರ್ದೇಶಕ ರೂಪಕುಮಾರ ದತ್ತಾ ಪ್ರಶಂಸನಾ ಪತ್ರ ಕಳುಹಿಸಿದ್ದಾರೆ. 

Advertisement

ಜರ್ಮನಿಯ ಗಾಬಿ ವಾರ್ನರ್‌ ಜ. 31ರಂದು ಖಾಸಗಿ ಬಸ್‌ನಲ್ಲಿ ದಾವಣಗೆರೆಯಿಂದ ಹುಬ್ಬಳ್ಳಿಗೆ ಆಗಮಿಸಿ, ಇಲ್ಲಿಂದ ಮಥುರಾಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸುವವರಿದ್ದರು. ಆದರೆ, ಬಸ್‌ ಹುಬ್ಬಳ್ಳಿಗೆ ತಡವಾಗಿ ತಲುಪಿದ್ದರಿಂದ ಗಾಬಿ ಪ್ರಯಾಣಿಸಬೇಕಾಗಿದ್ದ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲನ್ನು ತಪ್ಪಿಸಿಕೊಂಡಿದ್ದರು.

ಈ ಮಧ್ಯೆ ತಮ್ಮ ಕೈಯಲ್ಲಿದ್ದ ಹಣವನ್ನೆಲ್ಲ ಖರ್ಚು ಮಾಡಿಕೊಂಡು ಏನು ಮಾಡಬೇಕೆಂದು ತೋಚದೆ ಗಾಬಿ ವಾರ್ನರ್‌ ಕಂಗಾಲಾಗಿ ಪರದಾಡುತ್ತಿದ್ದರು. ಈ ವಿಷಯ ಉಪನಗರ ಠಾಣೆ ಪೊಲೀಸರ ಗಮನಕ್ಕೆ ಬಂದಿತ್ತು. 

ಕೂಡಲೇ ಸ್ಥಳಕ್ಕಾಗಮಿಸಿದ ಠಾಣೆಯ ಇನ್‌ಸ್ಪೆಕ್ಟರ್‌ ಮುತ್ತಣ್ಣ ಸರವಗೋಳ ತಮ್ಮ ಕೈಯಿಂದ ಒಂದಿಷ್ಟು ಹಣ ಹಾಕಿ ಹಾಗೂ ತಮ್ಮ ಸಿಬ್ಬಂದಿಯಿಂದ ಹಣ ಸಂಗ್ರಹಿಸಿ ಗಾಬಿ ವಾರ್ನರ್‌ ಅವರಿಗೆ ಊಟ ಮಾಡಿಸಿ, ಅವರ ಖರ್ಚಿಗೆ ಒಂದಿಷ್ಟು ಹಣಕೊಟ್ಟು, ಮಥುರಾ ತಲುಪಲು ಬೇರೊಂದು ರೈಲಿನ ಟಿಕೆಟ್‌ ಬುಕ್‌ ಮಾಡಿಸಿ ದೆಹಲಿಗೆ ಕಳುಹಿಸಿಕೊಟ್ಟಿದ್ದರು.

ಆ ಮೂಲಕ ಹು-ಧಾ ಪೊಲೀಸರು ಮಾನವೀಯತೆ ಮೆರೆದಿದ್ದರು.  ವಿಷಯ ಗಮನಿಸಿದ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ. ದತ್ತಾ ಅವರು ಉಪನಗರ ಠಾಣೆಯ ಇನ್‌ಸ್ಪೆಕ್ಟರ್‌ ಮುತ್ತಣ್ಣ ಸರವಗೋಳ, ಮಹಿಳಾ ಎಎಸ್‌ಐಗಳಾದ ಕಲಾವತಿ ಚಂದಾವರಕರ, ವಿರೂಪಾಕ್ಷಪ್ಪ ರಾಯಪುರ ಅವರಿಗೆ ಪ್ರಶಂಸನಾ ಪತ್ರ ಕಳುಹಿಸಿ ಕೊಟ್ಟಿದ್ದಾರೆ.

Advertisement

ಜೊತೆಗೆ ಕರ್ನಾಟಕ ಪೊಲೀಸ್‌ ಜನಸ್ನೇಹಿ ಪೊಲೀಸ್‌ ಹಾಗೂ ಮಹಿಳೆಯರಿಗೆ ಸುರಕ್ಷಿತ ದೇಶ ಎಂಬುದನ್ನು ಸಾಬೀತು ಮಾಡಿದ್ದಾರೆ. ಇದು ಪೊಲೀಸ್‌ ಇಲಾಖೆಯ ಗೌರವ ಹೆಚ್ಚಿಸಿದ್ದು, ಸಂತಸದ ವಿಷಯವೆಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ಮುತ್ತಣ್ಣ ಸರವಗೋಳ “ಉದಯವಾಣಿ’ಯೊಂದಿಗೆ ಮಾತನಾಡಿ, ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು  ಪ್ರತಿಯೊಬ್ಬರ ಕರ್ತವ್ಯ. ನಮ್ಮ ಕಾರ್ಯಕ್ಕೆ ಮಹಾನಿರ್ದೇಶಕರು ಪ್ರಶಂಸನಾ ಪತ್ರ ಕೊಟ್ಟಿರುವುದು ಸಂತಸ ಮೂಡಿಸಿದ್ದಲ್ಲದೆ, ಮತ್ತಷ್ಟು ಕೆಲಸ ಮಾಡಲು ಚೈತನ್ಯ ನೀಡಿದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next