Advertisement

ಟಿಕ್‌ ಟಾಕ್‌ನಿಂದ ಹೊರ ಬರಲು…. 

12:30 AM Mar 19, 2019 | |

ಟಿಕ್‌ ಟಾಕ್‌ ಆ್ಯಪ್‌ ನಮ್ಮ ಸಮಯವನ್ನಷ್ಟೇ ಅಲ್ಲ, ಮನಸ್ಸಿನ ಶಾಂತಿಯನ್ನೂ ಹಾಳು ಮಾಡುತ್ತಿದೆ. ಮಕ್ಕಳು ಹಾಗೂ ಹದಿ ಹರೆಯದವರಲ್ಲಿಯೇ ಟಿಕ್‌ ಟಾಕ್‌ ಕ್ರೇಝ್ ಹೆಚ್ಚಿದ್ದು, ದಿನದ ಬಹುಪಾಲು ಸಮಯವನ್ನು ಮೊಬೈಲ್‌ನಲ್ಲೇ ಕಳೆಯುತ್ತಿದ್ದಾರೆ. ಈ ಆ್ಯಪ್‌ನಲ್ಲಿ ಯಾರು ಬೇಕಾದರೂ, ಯಾವ ರೀತಿಯ ವಿಡಿಯೊವನ್ನು ಬೇಕಾದರೂ ಅಪ್‌ಲೋಡ್‌ ಮಾಡುವ ಅವಕಾಶ ಇದೆ. ವಯಸ್ಸಿಗೆ ಮೀರಿದ ಕೆಲವು ಕಂಟೆಂಟ್‌ಗಳು ಮಕ್ಕಳ ಮನಸ್ಸಿನ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಟಿಕ್‌ ಟಾಕ್‌ ವಿಡಿಯೊಗಳನ್ನು ನೋಡಿ, ನಕ್ಕು ಸುಮ್ಮನಾಗುವವರು ಕೆಲವರಾದರೆ, ಬೇರೆಯವರ ವಿಡಿಯೊಗಳನ್ನು ನೋಡಿ ಪ್ರಚೋದನೆಗೆ ಒಳಗಾಗಿ, ವಿಡಿಯೊ ಅಪ್‌ಲೋಡ್‌ ಮಾಡುವವರೂ ಇದ್ದಾರೆ. ತಮ್ಮ ವಿಡಿಯೋವನ್ನು ಎಲ್ಲರೂ ನೋಡಿ, ಶೇರ್‌ ಮಾಡಬೇಕು. ಆ ಮೂಲಕ ತಮ್ಮ ಫಾಲೋವರ್ಗಳ ಸಂಖ್ಯೆ ಹೆಚ್ಚಬೇಕೆಂದು ತಲೆ ಕೆಡಿಸಿಕೊಳ್ಳುತ್ತಿರುವವರೆಷ್ಟೋ. ಒಳ್ಳೆಯ ಕಮೆಂಟ್ಸ್‌ಗಳು ಸಿಕ್ಕಾಗ ಹಿರಿಹಿರಿ ಹಿಗ್ಗಿ, ಕೆಟ್ಟ ಕಮೆಂಟ್‌ಗಳಿಗೆ ಖನ್ನರಾಗಿ, ಲೈಕ್ಸ್‌, ಕಮೆಂಟ್‌, ಶೇರ್ಗಳ ಲೆಕ್ಕಾಚಾರ ಹಾಕುತ್ತಾ ತಮ್ಮದೇ ಆದ ಫ್ಯಾಂಟಸಿ ಜಗತ್ತನ್ನು ಸೃಷ್ಟಿಸಿಕೊಂಡಿದ್ದಾರೆ. ಆ ಜಗತ್ತಿನಲ್ಲಿ ಅವರೇ ಸೆಲಬ್ರಿಟಿಗಳು. ಅವರಿಗೊಂದಷ್ಟು ಅಭಿಮಾನಿಗಳು. ಆ ಭ್ರಮೆಯ ಬಲೂನಿಗೆ ಕೆಟ್ಟ ಕಮೆಂಟ್‌ನ ಸೂಜಿ ಚುಚ್ಚಿದರೆ ಖನ್ನತೆ. 

Advertisement

ಹಾಗಾದ್ರೆ, ಈ ಗೀಳಿನಿಂದ ಹೊರ ಬರಲು ಸಾಧ್ಯವೇ ಇಲ್ವಾ? ಖಂಡಿತವಾಗಿಯೂ ಇದೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಎಲ್ಲವೂ ಸಾಧ್ಯ. 
1. ದಿನನಿತ್ಯ ಮಾಡಬೇಕಾದ ಕೆಲಸಗಳ ವೇಳಾಪಟ್ಟಿಯನ್ನು ರಚಿಸಿ, ಅದನ್ನು ಪಾಲಿಸುತ್ತಾ ಬನ್ನಿ. ಓದು- ಬರಹ, ಕಾಲೇಜು ಸಮಯ, ಊಟ, ಆಟ, ನಿದ್ದೆ, ಮನರಂಜನೆ… ಹೀಗೆ ಪ್ರತಿಯೊಂದಕ್ಕೂ ಇಂತಿಷ್ಟೇ ಸಮಯ ಅಂತ ನಿಗದಿಪಡಿಸಿಕೊಳ್ಳಿ.

2. ಸ್ಕ್ರೀನ್‌ಟೈಮ್‌ ಅಥವಾ ಗ್ಯಾಜೆಟ್‌ ಟೈಮ್‌ಗೆ ನಿಗದಿಯಾಗಿರುವ ಸಮಯದಲ್ಲಿ ಮಾತ್ರ ಮೊಬೈಲ್‌ ಬಳಸಿ. ಶುರುವಿನಲ್ಲಿ ಸ್ಕ್ರೀನ್‌ಟೈಮ್‌ಗೆ ಒಂದು ಗಂಟೆ ನಿಗದಿಸಿದ್ದರೆ, ಕ್ರಮೇಣ ಅದನ್ನು ಕಡಿಮೆ ಮಾಡುತ್ತಾ ಬನ್ನಿ. 

3. ಹಿರಿಯರು ತಮ್ಮ ಮೊಬೈಲ್‌ ಅನ್ನು ಲಾಕ್‌ ಮಾಡಿ ಇಟ್ಟುಕೊಳ್ಳಬೇಕು ಹಾಗೂ ಮಕ್ಕಳು ಮೊಬೈಲ್‌ ಬಳಸುವಾಗ ಅವರ ಮೇಲೆ ಗಮನ ಇಡಬೇಕು. 

4. ಸೋಶಿಯಲ್‌ ಮೀಡಿಯಾಗಳ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು 

Advertisement

5. ಮಕ್ಕಳಲ್ಲಿ ಮೊಬೈಲ್‌ ಗೀಳು ತಪ್ಪಿಸಲು, ಹೊರಾಂಗಣ ಆಟದಲ್ಲಿ ಅವರು ತೊಡಗಿಕೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಿ.    

6. ಯಾವುದೇ ಗೀಳು/ ಚಟದಿಂದ ಹೊರಕ್ಕೆ ಬರುವಾಗ, ಮನಸ್ಸಿನಲ್ಲಿ ಆಗುವ ಏರಿಳಿತಗಳು ತಾತ್ಕಾಲಿಕ. ಟಿಕ್‌ಟಾಕ್‌ ಗೀಳಿಗೆ ಒಳಗಾದವರು ಒಂದೇ ಕ್ಷಣದಲ್ಲಿ ಅದರಿಂದ ಹೊರ ಬರಲು ಸಾಧ್ಯವಿಲ್ಲ. ಹಂತಹಂತವಾಗಿ ಅದರಿಂದ ದೂರಾಗಬೇಕು.  

7. ಅಪ್ಪ-ಅಮ್ಮನ ಮೊಬೈಲ್‌ ಅನ್ನು ಅವರಿಗಿಂತ ಮಕ್ಕಳೇ ಹೆಚ್ಚು ಬಳಸುತ್ತಾರೆ. ಹಾಗಾಗಿ, ಹಿರಿಯರು ಕೂಡ ಈ ಆ್ಯಪ್‌ನಿಂದ ದೂರಾಗಬೇಕು.

 ಡಾ. ಶಿವದೇವ್‌

Advertisement

Udayavani is now on Telegram. Click here to join our channel and stay updated with the latest news.

Next