Advertisement

ಕ್ಷಯ ನಿರ್ಮೂಲನೆಗೆ ಜಾಗೃತಿ ಅಗತ್ಯ: ಡಾ|ಜವಳಿ

12:25 PM Mar 25, 2022 | Team Udayavani |

ಬಾಗಲಕೋಟೆ: ಸಾವಿರಾರು ವರ್ಷಗಳಿಂದ ಮಾನವ ಕುಲಕ್ಕೆ ಕಂಟಕವಾಗಿರುವ ಕ್ಷಯರೋಗದ ನಿರ್ಮೂಲನೆಗೆ ಜನಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯ ಡಾ|ಚಂದ್ರಕಾಂತ ಜವಳಿ ಹೇಳಿದರು.

Advertisement

ನವನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಎಎನ್‌ಎಂ ತರಬೇತಿ ಕೇಂದ್ರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕಾರ್ಯಾಲಯ, ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಕ್ಷಯರೋಗ ವಾಸಿಯಾಗಲಾರದ ಕಾಯಿಲೆಯಾಗಿ ಪರಿಣಮಿಸಿತ್ತು. ಕ್ಷಯರೋಗಕ್ಕೆ ಒಳಗಾದವರನ್ನು ಪ್ರಾಣಿಗಿಂತಲೂ ಕೀಳಾಗಿ ಕಾಣುತ್ತಿದ್ದರು. ಅವರನ್ನು ಸಂಪರ್ಕಿಸದಂತೆ ಹೀನಾಯಸ್ಥಿತಿಯಲ್ಲಿ ಕಾಣುವಂತಾಗಿತ್ತು. ಆದರೆ ಇಂದು ಕ್ಷಯರೋಗಕ್ಕೆ ಸೂಕ್ತ ಚಿಕಿತ್ಸೆ ದೊರೆತಿದ್ದು, ಗುಣಪಡಿಸುವಂತಹ ಕಾಯಿಲೆಯಾಗಿದೆ. ಜನರಲ್ಲಿ ಇನ್ನು ಇದರ ಬಗ್ಗೆ ತಪ್ಪು ತಿಳುವಳಿಕೆ ಇದ್ದು, ಕ್ಷಯ ಬಂದಿದೆ ಎಂದರೆ ಮನೆಯವರಿಂದ, ಸ್ನೇಹಿತರಿಂದ, ಸಮಾಜದಿಂದಲೇ ದೂರವಿರಬೇಕಾಗುತ್ತದೆ ಎಂಬ ಕೀಳರಿಮೆಯಿಂದ ರೋಗಿ ತಾನು ಬಳಲುವುದಲ್ಲದೇ ತನಗಿದ್ದ ಕಾಯಿಲೆ ಸೋಂಕನ್ನು ಪರರಿಗೂ ತಗುಲಿಸುತ್ತಿದ್ದಾನೆ. ಇದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಪಿ.ಎ.ಹಿಟ್ನಳ್ಳಿ ಮಾತನಾಡಿ, 2025ರೊಳಗಾಗಿ ಕ್ಷಯರೋಗ ಮುಕ್ತ ಭಾರತವನ್ನಾಗಿಸುವ ಗುರಿ ಹೊಂದಲಾಗಿದ್ದು, ರೋಗ ಮುಕ್ತ ಘೋಷಣೆಗಳೊಂದಿಗೆ ಕಾರ್ಯಪ್ರವೃತ್ತರಾಗಬೇಕಾಗಿದೆ. ಈಗಾಗಲೇ ಜಿಲ್ಲೆಯ 27 ಗ್ರಾಮ ಪಂಚಾಯಿತಿಯ ಪಿಡಿಒ ಹಾಗೂ ಸದಸ್ಯರಿಗೆ, ಜಿಲ್ಲಾ, ತಾಲೂಕು ಪಂಚಾಯಿತಿ ಆಡಳಿತ ಮಂಡಳಿಗಳಿಗೆ ಜಾಗೃತಿಯ ಬಗ್ಗೆ ತಿಳಿಸಲಾಗಿದ್ದು, ಪ್ರತಿ ತಾಲೂಕಿನ ಎರಡು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕ್ಷಯರೋಗ ಜಾಗೃತಿ ಕುರಿತಾದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಬಾಗಲಕೋಟೆಯ ಓರ್ವ ವೃದ್ದೆಗೆ ಟಿಬಿ ರೋಗದ ಕೊನೆಯ ಹಂತದ ಚಿಕಿತ್ಸೆಯಾದ ಎಂಡಿಆರ್‌ ಟಿಬಿ ಔಷಧ ಕಿಟ್‌ನ್ನು ವಿತರಿಸಲಾಯಿತು. ಇದು ರಾಜ್ಯದಲಿಯೇ ಬಾಗಲಕೋಟೆ ಜಿಲ್ಲೆಯಲ್ಲಿ ವಿತರಿಸಲಾದ ಪ್ರಥಮ ಔಷಧಿ ಕಿಟ್‌ ಇದಾಗಿದೆ.

Advertisement

ಎ.ಎನ್‌.ಎಂ ಕೇಂದ್ರದ ಪ್ರಾಚಾರ್ಯ ಸುಮಾ ರಂಜನಗಿ, ಡಾ| ಕೋರಿ, ಡಾ| ಗಾಣಿಗೇರ, ಡಾ| ಪ್ರಿಯದರ್ಶಿನಿ, ಡಾ| ರಾಘವೇಂದ್ರ ಸವದತ್ತಿ ಉಪಸ್ಥಿತರಿದ್ದರು.

 

ಕ್ಷಯರೋಗ ಮನುಷ್ಯನ ಕೂದಲು ಮತ್ತು ಉಗುರು ಹೊರತುಪಡಿಸಿ ದೇಹದ ಯಾವುದೇ ಭಾಗಕ್ಕೆ ಬರಬಹುದಾದ ಕಾಯಿಲೆಯಾಗಿದ್ದು, ಇದಕ್ಕೆಲ್ಲ ಚಿಕಿತ್ಸೆ ಇದೆ. ಸರಕಾರ ಕ್ಷಯ ರೋಗ ನಿರ್ಮೂಲನೆಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಮತ್ತು ಆರೈಕೆ ದೊರೆಯಲಿದ್ದು, ರೋಗಿಗಳು ಭಯಪಡದೇ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವಂತರಾಗಬೇಕು.

ಡಾ| ಚಂದ್ರಕಾಂತ ಜವಳಿ, ತಜ್ಞ ವೈದ್ಯ

Advertisement

Udayavani is now on Telegram. Click here to join our channel and stay updated with the latest news.

Next