Advertisement
ಮನೆ ಕಟ್ಟಲು ನಿರ್ಧರಿಸಿದಾಗ “ನಮ್ಮ ಮನೆ ಹಾಗಿರಬೇಕು, ಹೀಗಿರಬೇಕು’ ಎಂದೆಲ್ಲ ಏನೇನೋ ಕನಸು ಕಂಡಿರುತ್ತೇವೆ. ಆದರೆ ಶುರುಮಾಡುವ ವೇಳೆಗೆ ನಮ್ಮ ಹಾಗೂ ನಿವೇಶನದ ಮಿತಿಗಳು ಅರಿವಾಗಿ, ಹೆಚ್ಚು ವ್ಯಾವಹಾರಿಕವಾಗಿ ಮುಂದುವರಿಯುವ ಅನಿವಾರ್ಯತೆ ಎದುರಾಗುತ್ತದೆ. ಆಮೇಲೆ ಎಲ್ಲವನ್ನೂ ಒಪ್ಪಿಕೊಳ್ಳಲು ಶುರುಮಾಡಿರುತ್ತೇವೆ. ಸ್ಥಳದ ಮಿತಿಗಳು ಮುಖ್ಯವಾದರೆ, ಅಷ್ಟೇ ಮಿತಿ ಹಣದ್ದೂ ಆಗಿರುತ್ತದೆ. ಜೊತೆಗೆ ಕುಶಲ ಕರ್ಮಿಗಳ ಮಿತಿ, ವೇಳೆ ವ್ಯಯವಾಗುವುದನ್ನು ತಡೆಯಲು, ಉತ್ತಮ ಗುಣಮಟ್ಟ ಪಡೆಯಲು ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಬಿಡಬೇಕಾಗುತ್ತದೆ. ಹಾಗಾದರೆ, ನಮ್ಮ ಕನಸಿನ ಮನೆಯಲ್ಲಿ ಯಾವುದು ಹೆಚ್ಚು ಶ್ರಮಪಡದೆ ಸಾಕಾರವಾಗುತ್ತದೆ ಎಂಬುದನ್ನು ನಿರ್ಧರಿಸುವುದು ಬಹು ಮುಖ್ಯ.
ದೊಡ್ಡದಾದ ಹಾಲ್ ಹಾಗೂ ಕೋಣೆಗಳ ಅಳತೆಯನ್ನು ನಮಗಿಷ್ಟಬಂದಷ್ಟು ಇಟ್ಟುಕೊಂಡು ಮನೆಯ ಪ್ಲಾನ್ ಮಾಡಲು ತೊಡಗಿದಾಗ ಎದುರಾಗುವ ಮೊದಲ ತೊಡಕು- ಒಟ್ಟಾರೆ ವಿಸ್ತಾರ ಸೈಟಿನ ಒಳಗೆ ಇರುವಂತೆ ಮಾಡಲು ಸಾಧ್ಯವಾಗದೇ ಇರುವುದು. ನಿವೇಶನದ ಉದ್ದ ಹಾಗೂ ಅಗಲ ಪರಿಗಣಿಸಿ, ಬಿಡಲೇ ಬೇಕಾದ ತೆರೆದ ಸ್ಥಳ – ಓಪನ್ ಸ್ಪೇಸ್ ಬಿಟ್ಟು, ಮಿಕ್ಕ ಜಾಗದಲ್ಲಿ ವಿವಿಧ ಕೊಠಡಿಗಳನ್ನು ಹೊಂದಿಸಬೇಕಾಗುತ್ತದೆ. ಆಗ ಅನಿವಾರ್ಯವಾಗಿ, ಹಾಲ್ ಸ್ವಲ್ಪ ದೊಡ್ಡದು ಬೇಕೆನಿಸಿದರೆ, ಕೋಣೆಯನ್ನು ಸ್ವಲ್ಪ ಚಿಕ್ಕದು ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಟಾಯ್ಲೆಟ್ ಅಟ್ಯಾಚ್ ಬೇಕೆಬೇಕೆನಿಸಿದರೆ, ಬೆಡ್ ರೂಮ್ ಸ್ವಲ್ಪ ಸಣ್ಣದಾಗುತ್ತದೆ. ಕನಸಿನ ಮನೆಗೆ ನಗರ ಪ್ರದೇಶಗಳಲ್ಲಿ ಮುಖ್ಯವಾಗಿ ತೊಡಕಾಗುವುದು, ನಿವೇಶನದ ಮಿತಿಯೇ ಆಗಿರುತ್ತದೆ. ನಿವೇಶನ ದೊಡ್ಡದಿದ್ದರೂ, ಅದಕ್ಕೆ ತಕ್ಕಂಥ ವಿಸ್ತಾರವಾದ ವಿನ್ಯಾಸ ಮಾಡಲು ತೊಡಗುವುದರಿಂದ, ಅಲ್ಲಿಯೂ ಕೂಡ ಸರಿದೂಗಿಸಿಕೊಂಡು ಹೋಗುವುದು ತಪ್ಪುವುದಿಲ್ಲ. ನಮ್ಮ ಕನಸಿಗೆ ಹತ್ತಿರವಾಗಿ, ಯಾವುದೂ ತೀರ ಚಿಕ್ಕದಾಗದಂತೆ, ಹಾಗೆಯೇ ಸಾಕಷ್ಟು ತೆರೆದ ಸ್ಥಳಗಳನ್ನೂ ಬಿಟ್ಟು ಮನೆಯನ್ನು ಸಾಕಾರಗೊಳಿಸಬೇಕಾಗುತ್ತದೆ. ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಿ
ಸಾಮಾನ್ಯವಾಗಿ ಹತ್ತು ಅಡಿಗೆ ಹನ್ನೆರಡು ಅಡಿ ಬೆಡ್ ರೂಮ್, ಎಂಟು ಅಡಿಗೆ ಹತ್ತು ಅಡಿ ಕಿಚನ್ ಇತ್ಯಾದಿಯಾಗಿ ಪ್ಲಾನ್‌ನಲ್ಲಿ ಇರುವ ಅಳತೆಗಳು ಬರಿ ಸಂಖ್ಯೆಗಳಾಗಿ ಮಾತ್ರ ಉಳಿಯದಂತೆ ನಾವು ಅವು ಎಷ್ಟು ದೊಡ್ಡದಾಗಿ ಇಲ್ಲ ಚಿಕ್ಕದಾಗಿರುತ್ತದೆ ಎಂಬುದನ್ನು ನೋಡಿಕೊಳ್ಳುವುದು ಅತ್ಯಗತ್ಯ. ಅನೇಕಬಾರಿ ಮನೆ ಕಟ್ಟಿ, ಬಣ್ಣ ಬಳಿಯುವವರೆಗೂ ಯಾವ ಕೋಣೆ ಊಹಿಸಿಕೊಂಡದ್ದಕ್ಕಿಂತ ದೊಡ್ಡದಾಯಿತು ಇಲ್ಲ ಸಣ್ಣದಾಯಿತು ಎಂಬುದು ತಿಳಿಯುವುದಿಲ್ಲ. ಮನೆಯ ವಿನ್ಯಾಸದಲ್ಲಿ ಗಮನಿಸ ಬೇಕಾದ ಮುಖ್ಯ ಅಂಶ – ಗೋಡೆಗಳ ದಪ್ಪ. ಇದನ್ನು ಪರಿಗಣಿಸದೆ ಹಾಗೆಯೇ ಅಂದಾಜಾಗಿ ಲೆಕ್ಕಾಚಾರ ಮಾಡಿ, ಮನೆ ಕಟ್ಟಲು ತೊಡಗಿದರೆ, ನಂತರ ನಮ್ಮ ಕನಸಿನ ಮನೆಯ ಸಾಕಾರ ಕಷ್ಟವಾಗಬಹುದು.
Related Articles
Advertisement
ಮನೆಯ ಒಟ್ಟಾರೆ ರೂಪರೇಶೆಯನ್ನು ಪರಿಶೀಲಿಸಲು ನಮಗೆ ಇರುವ ಸುಲಭೋಪಾಯ- ಪಾಯ ಅಗೆಯುವ ಮೊದಲೇ ಎಲ್ಲ ಕೋಣೆಗಳನ್ನೂ, ಗೋಡೆ ದಪ್ಪಗಳನ್ನು ಒಳಗೊಂಡಂತೆ ಖಾಲಿ ನಿವೇಶನದಲ್ಲಿ ರಂಗೋಲಿ ಹಾಕಿ ಮಾರ್ಕ್ ಮಾಡಬೇಕು. ಪ್ಲಾನ್ ನಂತೆ ಮಾಡುತ್ತೇವೆ ಬಿಡಿ, ಇದೆಲ್ಲ ಅಗತ್ಯ ಇಲ್ಲ ಎಂದೆಲ್ಲ ಹೇಳಿ ಮೇಸಿŒಗಳು ಸಾಗಹಾಕಲು ನೋಡಬಹುದು. ಆದರೆ ಒಮ್ಮೆ ಪಾಯ ಅಗೆದ ಮೇಲೆ, ನಮಗೆ ಮನೆಯ ಇಡೀ ಐಡಿಯಾ ಸಿಗುವುದಿಲ್ಲ. ಎಲ್ಲವೂ ಚಿಕ್ಕದಾಗಿ ಕಾಣಲು ತೊಡಗುತ್ತದೆ. ಜೊತೆಗೆ, ಹಳ್ಳ ದಿಣ್ಣೆಗಳಿದ್ದರೆ, ನಮಗೆ ಒಳ ಹೊಕ್ಕು ಎಲ್ಲವನ್ನೂ ನೋಡಲೂ ಕೂಡ ಆಗುವುದಿಲ್ಲ. ಆದುದರಿಂದ, ಪಾಯ ಅಗೆಯುವ ಮೊದಲು, ಮನೆಯನ್ನು ಇಡಿಯಾಗಿ ನೋಡಿ, ನಿವೇಶನದಲ್ಲಿ ಮಾರ್ಕ್ ಮಾಡಿ, ಯಾವುದಾದರೂ ಬದಲಾವಣೆ ಮಾಡಲು ಇಚ್ಛಿಸಿದರೆ, ಕೋಣೆಗಳನ್ನು ಸಣ್ಣದು ಇಲ್ಲವೇ ದೊಡ್ಡದು ಮಾಡಿಕೊಂಡು ಮುಂದುವರೆಯುವುದು ಅತ್ಯಗತ್ಯ. ಜೊತೆಗೆ ಕಿಟಕಿ ಬಾಗಿಲುಗಳನ್ನೂ ಮಾರ್ಕ್ ಮಾಡುವುದು ಒಳ್ಳೆಯದು.
ಬಜೆಟ್ ನಿರ್ವಹಣೆಸಣ್ಣಪುಟ್ಟ ಮನೆ ಕಟ್ಟಿಕೊಳ್ಳುವವರಿಗೆ ಅವರದೇ ಆದ ಮಿತಿಗಳಿದ್ದರೆ, ದೊಡ್ಡ ಮನೆ ಕಟ್ಟುವವರೂ ಕೂಡ ಹಣಕಾಸಿನ ಬಗ್ಗೆ ಯೋಚಿಸಬೇಕಾಗುತ್ತದೆ. ಹಣ ಎಲ್ಲೆಲ್ಲಿ ಉಳಿಸಬೇಕೋ ಅಲ್ಲೆಲ್ಲ ಉಳಿಸಿ, ಖರ್ಚು ಮಾಡಲೇ ಬೇಕಾದಾಗ, ಒಳ್ಳೆಯ ಹಾಗೂ ನಾಲ್ಕು ಕಾಲ ಬಾಳುವ ವಸ್ತುಗಳನ್ನು ಆಯ್ಕೆ ಮಾಡುವುದು ಜಾಣತನ. ಉಳಿತಾಯ ಲಕ್ಷದಲ್ಲಿರಲಿ, ಇಲ್ಲ ಸಾವಿರ ರೂ.ಗಳಲ್ಲೇ ಇರಲಿ, ಮನೆ ಕಟ್ಟುವಾಗ ಎಲ್ಲವನ್ನೂ ಲೆಕ್ಕಾಚಾರ ಮಾಡಿ ಖರ್ಚು ಮಾಡಬೇಕು. ಒಮ್ಮೆ ಬಿಗಿ ಸಡಲಿಸಿದರೆ, ನಾವು ಹಾಕಿದ ಬಜೆಟ್ ಹಿಂದೆಯೇ ನಿಂತು, ಖರ್ಚು ದುಬಾರಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ವಿವಿಧ ವಿನ್ಯಾಸಗಳ ಸಾಕಾರ
ಎಲ್ಲೋ ನೋಡಿದ ಡಿಸೈನ್, ವಿಶೇಷ ವಸ್ತುಗಳನ್ನು ಬಳಸುವ ತವಕ, ನಾವು ಅಂದು ಕೊಂಡಂತೆಯೇ ಇರಬೇಕು ವಿನ್ಯಾಸ ಎಂದೆಲ್ಲ ಕನಸುಗಳಿರುತ್ತದೆ. ಆದರೆ ಅದೇ ರೀತಿಯಲ್ಲಿ ಮಾಡಲು ನಮಗೆ ಕುಶಲ ಕರ್ಮಿಗಳ ಅಗತ್ಯವೂ ಇರುತ್ತದೆ ಎಂಬುದನ್ನು ಮರೆಯಬಾರದು. ಇತ್ತೀಚಿನ ದಿನಗಳಲ್ಲಿ ಕೈಕೆಲಸ ಹೆಚ್ಚಾ ಕಡಿಮೆ ಮಾಯವಾಗಿದ್ದು, ಎಲ್ಲವನ್ನೂ ಮಶಿನ್ ಬಳಸಿಯೇ ಮಾಡಲಾಗುತ್ತದೆ. ಆದುದರಿಂದ ಆದಷ್ಟೂ ಮೆಶಿನ್ ಬಳಸಿ ಮಾಡಬಹುದಾದ ವಿನ್ಯಾಸಗಳನ್ನು ಆಯ್ದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಸುಲಭದಲ್ಲಿ ಸಿಗದ ಇಲ್ಲವೇ ದುಬಾರಿ ರೇಟ್ ಹೇಳುವ ಬಡಗಿ ಕಬ್ಬಿಣದ ಕೆಲಸದವರ ಹಿಂದೆ ತಿರುಗಬೇಕಾಗುತ್ತದೆ.
ಹೆಚ್ಚಿನ ಮಾತಿಗೆ ಫೋನ್ 98441 32826 – ಆರ್ಕಿಟೆಕ್ಟ್ ಕೆ ಜಯರಾಮ್