Advertisement

ಕೋವಿಡ್ ಗೆ ಧೈರ್ಯವೇ ಮದ್ದು ; ಕೋವಿಡ್ ಗೆದ್ದು ಬಂದ ಬುಡಾ ಅಧ್ಯಕ್ಷ ಬಿ. ದೇವದಾಸ್‌ ಶೆಟ್ಟಿ

09:50 AM Jul 31, 2020 | mahesh |

ಬಂಟ್ವಾಳ: ವ್ಯಕ್ತಿ ಕೋವಿಡ್ ಪೀಡಿತನಾದರೆ ಅದು ಆತನ ತಪ್ಪಲ್ಲ. ಇನ್ಯಾರಿಂದಲೋ ಆತನಿಗೆ ಸೋಂಕು ಬಾಧಿಸಿರಬಹುದು. ಕೊರೊನಾ ಬಂತೆಂದು ಭಯ, ಕೀಳರಿಮೆ ಹೊಂದದೆ ಧೈರ್ಯದಿಂದ ಎದುರಿಸಿ ಗೆದ್ದು ಬರಬೇಕು. ನಮ್ಮ ರಕ್ಷಣೆ, ನಮ್ಮ ಹೊಣೆ ಎಂಬ ಕಲ್ಪನೆ ಪ್ರತಿಯೊಬ್ಬರಲ್ಲೂ ಇದ್ದಾಗ ಶೀಘ್ರ ಕೊರೊನಾ ಮುಕ್ತರಾಗಲು ಸಾಧ್ಯ.

Advertisement

ಇದು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ (ಬುಡಾ)ದ ಅಧ್ಯಕ್ಷ ಬಿ. ದೇವದಾಸ್‌ ಶೆಟ್ಟಿ ಅವರ ಅನುಭವದ ಮಾತು. ಮೊದಲಿಗೆ ಜ್ವರ ಕಾಣಿಸಿಕೊಂಡಿದ್ದು, ಕಡಿಮೆಯಾಗದೇ ಇದ್ದಾಗ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಸಲಹೆಯಂತೆ ನಾನು ಕೋವಿಡ್‌ ಪರೀಕ್ಷೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದೆ. ವರದಿ ಪಾಸಿಟಿವ್‌ ಬಂದಾಗ ಯಾವ ಗೊಂದಲಕ್ಕೂ ಒಳಗಾಗದೆ ಮನೆಯವರಲ್ಲೂ ಧೈರ್ಯ ತುಂಬಿದೆ.

ಕೋವಿಡ್ ಕುರಿತು ಜನತೆಯಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ನಾನೇ ವೀಡಿಯೋ ಮಾಡಿ ಸಂದೇಶವನ್ನೂ ನೀಡಿದ್ದೇನೆ. ಕೋವಿಡ್ ಮಾರಣಾಂತಿಕ ಕಾಯಿಲೆಯೇ ಅಲ್ಲ. ಗಂಭೀರ ಸ್ವರೂಪದ ಇತರ ಕಾಯಿಲೆಗಳ ಜತೆ ಅದು ಸೇರದಂತೆ ನಾವು ಎಚ್ಚರ ವಹಿಸಬೇಕಿದೆ. ಗುಣಪಡಿಸಬಹುದಾದ ಈ ಕಾಯಿಲೆಯ ಕುರಿತು ಯಾರೂ ಭಯಪಡುವ ಅಗತ್ಯವಿಲ್ಲ ಎಂಬುದು ತನ್ನ ಅಭಿಪ್ರಾಯ.

ಜ್ವರ ಹೊರತು ಪಡಿಸಿ ಬೇರೆ ಯಾವುದೇ ಸಮಸ್ಯೆ ಕಾಣಿಸಲಿಲ್ಲ. 56ರ ಹರೆಯದ ನನಗೆ ಮಧುಮೇಹ ಇದ್ದರೂ ನಿಯಂತ್ರಣದಲ್ಲಿತ್ತು. ವಿಶೇಷ ಎಂದರೆ ನನ್ನ ಜ್ವರ ಒಂದೇ ದಿನದಲ್ಲಿ ಬಹುತೇಕ ಕಡಿಮೆಯಾಗಿತ್ತು. ಆದುದರಿಂದ ನಾನು ಆತಂಕಪಡಲಿಲ್ಲ. ಇನ್ನು ನಾನು ಆಸ್ಪತ್ರೆಯಲ್ಲಿದ್ದ ಐದು ದಿನವೂ ಪಾಸಿಟಿವ್‌ ವಿಚಾರಗಳನ್ನು ತಿಳಿಯುತ್ತಿದ್ದೆ. ಯಾವ ಸಂದರ್ಭವೂ ಮನಸ್ಸನ್ನು ಕೆಡಿಸಿಕೊಂಡಿರಲಿಲ್ಲ.

ಜಾಗೃತಿ ಮರೆಯದಿರಿ
ಕೊರೊನಾಕ್ಕೆ ಭಯಪಡಬಾರದು. ಹಾಗೆಂದು ಮುನ್ನೆಚ್ಚರಿಕೆಗಳನ್ನು ಮರೆಯುವುದೂ ಸಲ್ಲದು. ಪ್ರತಿನಿತ್ಯ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ನಮ್ಮ ಆದ್ಯ ಕರ್ತವ್ಯ. ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ಓಡಾಟ ನಡೆಸದೆ, ಅನಿವಾರ್ಯವಾದರೆ ಮಾತ್ರ ಹೊರಗೆ ಹೋಗಬೇಕು. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವುದನ್ನು ಎಂದಿಗೂ ಮರೆಯಬಾರದು. ಸಾಧ್ಯವಾದಷ್ಟು ಪೌಷ್ಟಿಕ ಆಹಾರ ಸೇವಿಸಿ ನಿಗದಿತ ವ್ಯಾಯಾಮಗಳನ್ನು ನಡೆಸುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹೀಗಿದ್ದರೆ ರೋಗದ ವಿರುದ್ಧ ಹೋರಾಡುವುದು ಎಂದೂ ಸಮಸ್ಯೆಯಾಗದು ಎನ್ನುತ್ತಾರೆ ದೇವದಾಸ್‌ ಶೆಟ್ಟಿ.

Advertisement

“ಉದಯವಾಣಿ’ಗೆ ಧನ್ಯವಾದ
ಪ್ರಸ್ತುತ ದಿನಗಳಲ್ಲಿ ಕೊರೊನಾ ಕುರಿತು ಜನರಲ್ಲಿ ಭಯ ಹುಟ್ಟಿಸುವ ಕೆಲಸವಾಗುತ್ತಿದೆ. ಅಂತಹ ಸಂದರ್ಭದಲ್ಲಿ ಉದಯವಾಣಿ ಪತ್ರಿಕೆ ಸಾಮಾಜಿಕ ಕಳಕಳಿಯೊಂದಿಗೆ “ಕೊರೊನಾ ಗೆದ್ದವರು’ ಅಂಕಣದ ಮೂಲಕ ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖರಾದವರ ಅನುಭವ ಹಾಗೂ ಸಂದೇಶವನ್ನು ಪ್ರಕಟಿಸಿ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ ಅವರ ಆತಂಕವನ್ನು ದೂರ ಮಾಡುತ್ತಿದೆ. ಇದಕ್ಕಾಗಿ “ಉದಯವಾಣಿ’ಗೆ ಧನ್ಯವಾದಗಳನ್ನು ತಿಳಿಸುತ್ತೇನೆ.
– ಬಿ. ದೇವದಾಸ್‌ ಶೆಟ್ಟಿ, ಬುಡಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next