ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಭಾರೀ ಸದ್ದು ಮಾಡುತ್ತಿರುವ ಕ್ರಿಪ್ಟೋ ಕರೆನ್ಸಿ ಈಗ ತೀವ್ರ ವಿವಾದಕ್ಕೆ ಸಿಲುಕಿದೆ. ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವಂತೆಯೇ ಅದರ ಒಂದೊಂದೇ ಹುಳುಕುಗಳು ಹೊರಬರತೊಡಗಿದ್ದು ಆಡಳಿತ ವ್ಯವಸ್ಥೆಗೆ ಬಲು ದೊಡ್ಡ ಸವಾಲಾಗಿ ಪರಿಣಮಿಸಿವೆ. ಸದ್ಯ ಭಾರತದಲ್ಲಿ ಲಕ್ಷಾಂತರ ಮಂದಿ ಡಿಜಿಟಲ್ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾರೆ. ಕ್ರಿಪ್ಟೋ ಕರೆನ್ಸಿಯಾಗಿರುವ ಬಿಟ್ ಕಾಯಿನ್ ವ್ಯವಹಾರ ವರ್ಷದ ಅವಧಿಯಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಪ್ರಗತಿ ಕಂಡ ಪರಿಣಾಮ ದೇಶ-ವಿದೇಶಗಳ ಹೂಡಿಕೆ ದಾರರು ಇದರಲ್ಲಿ ಹಣ ಹೂಡಿರುವರು. ಆದರೆ ಈ ವಹಿವಾಟಿನಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿರುವಂತೆಯೇ ವಹಿವಾಟಿನ ಸುರಕ್ಷೆಯ ಬಗೆಗೆ ಇದೀಗ ಭಾರೀ ಆತಂಕ ವ್ಯಕ್ತವಾಗತೊಡಗಿದೆ. ಅಷ್ಟು ಮಾತ್ರವಲ್ಲದೆ ಕ್ರಿಪ್ಟೋ ಕರೆನ್ಸಿಯನ್ನು ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ನೆರವು, ಮಾದಕ ವಸ್ತು ಸರಬರಾಜು ಮತ್ತಿತರ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವುದು ಈಗ ಬಯಲಾಗಿದೆ.
ತನ್ನದೇ ಆದ ಕ್ರಿಪ್ಟೋ ಕರೆನ್ಸಿಯನ್ನು ಜಾರಿಗೆ ತರಲು ಕೇಂದ್ರ ನಿರ್ಧ ರಿಸಿತ್ತು. ಅನಂತರ ಆ ಪ್ರಸ್ತಾವ ಹಿನ್ನೆಲೆಗೆ ಸರಿದಿತ್ತು. ತಿಂಗಳಿಂದೀಚೆಗೆ ದೇಶ ದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡಲಾರಂಭಿಸಿದ ಬಳಿಕ ಮತ್ತೆ ಕ್ರಿಪ್ಟೋ ವಹಿವಾಟು ಬಗ್ಗೆ ಚರ್ಚೆಗಳು ಪುನರಾರಂಭಗೊಂಡಿವೆ.
ಕ್ರಿಪ್ಟೋ ವಹಿವಾಟಿಗೆ ಸಂಪೂರ್ಣ ನಿಷೇಧ ಹೇರಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆಯಾದರೂ ಈಗಾಗಲೇ ಹೂಡಿಕೆ ಮಾಡಿರುವವರು ಆಕ್ಷೇಪ ವ್ಯಕ್ತಪಡಿಸಿ ಸರಕಾರದ ಮೇಲೆ ಒತ್ತಡ ಹೇರತೊಡಗಿದ್ದಾರೆ. ಇದರಿಂದ ತೀವ್ರ ಒತ್ತಡದಲ್ಲಿ ಸಿಲುಕಿರುವ ಕೇಂದ್ರ ಸದ್ಯ 2 ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಖಾಸಗಿ ಕ್ರಿಪ್ಟೋಗೆ ಸಂಪೂರ್ಣ ನಿಷೇಧ ಹೇರಿ ತನ್ನದೇ ಆದ ಕರೆನ್ಸಿಯನ್ನು ಚಾಲ್ತಿಗೆ ತರುವುದು ಅಥವಾ ಕ್ರಿಪ್ಟೋ ಕರೆನ್ಸಿಯನ್ನು ಸಂಪೂರ್ಣವಾಗಿ ಸರಕಾರದ ಅಧೀನ ಸಂಸ್ಥೆಯ ನಿಯಂತ್ರಣಕ್ಕೆ ತಂದು ಅದನ್ನು ಪಾವತಿ ವ್ಯವಹಾರಗಳಿಗೆ ಬಳಸಲು ಅನುಮತಿ ನೀಡದೇ ಕೇವಲ ವಿಮೆ ಪಾಲಿಸಿಗಳು, ಚಿನ್ನ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿಕೊಡಲು ಚಿಂತನೆ ನಡೆಸಿದೆ. ಈ ಮೂಲಕ ಕ್ರಿಪ್ಟೋ ಕರೆನ್ಸಿಯನ್ನು ಬಂಡವಾಳ ಮಾದರಿ ಆಸ್ತಿಯನ್ನಾಗಿ ಪರಿಗಣಿಸಲು ಮುಂದಾಗಿದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಕ್ರಿಪ್ಟೋ ಕರೆನ್ಸಿ ವಹಿವಾಟು ನಿಯಂತ್ರಣ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದ್ದು, ಆ ಬಳಿಕವಷ್ಟೇ ಸರಕಾರದ ನಿಲುವು ಸ್ಪಷ್ಟವಾಗಲಿದೆ.
ಕ್ರಿಪ್ಟೋ ವಹಿವಾಟುಗಳು ಜಾಗತಿಕ ಮಟ್ಟದಲ್ಲಿ ನಡೆಯುವುದರಿಂದ ಅದರಲ್ಲಿನ ಅಕ್ರಮ, ಹಗರಣಗಳಿಗೆ ಅಂತ್ಯ ಹಾಡಲು ಎಲ್ಲರೂ ಕೈಜೋಡಿಸಲೇಬೇಕಿದೆ. ದೇಶಕ್ಕೆ ಪ್ರತ್ಯೇಕ ಕಾನೂನು ಜಾರಿಗೊಳಿಸಿದರೂ ವಿದೇಶಗಳಲ್ಲಿ ಕ್ರಿಪ್ಟೋ ವ್ಯವಹಾರಕ್ಕೆ ಮಾನ್ಯತೆ ಇರುವುದರಿಂದ ಅಕ್ರಮ, ಹಗರಣಗಳಿಗೆ ಕಡಿವಾಣ ಕಷ್ಟಸಾಧ್ಯವಾಗಲಿದೆ. ಆದುದರಿಂದ ಜಾಗತಿಕ ಸಮುದಾಯ ಈ ವಿಚಾರದಲ್ಲಿ ಒಗ್ಗೂಡಿ ಅಂತಾರಾಷ್ಟ್ರೀಯ ಕಾನೂನು ಜಾರಿಗೊಳಿಸಬೇಕಿದೆ. ಪ್ರಧಾನಿ ಮೋದಿ ಅವರೂ ಇದೇ ಮಾತನ್ನು ಪ್ರತಿಪಾದಿಸಿದ್ದು ಪ್ರಜಾಪ್ರಭುತ್ವ ರಾಷ್ಟ್ರಗಳು ಈ ವಿಚಾರದಲ್ಲಿ ಒಟ್ಟಾಗಿ ಕೆಲಸ ಮಾಡಬೇಕಿದೆ ಎನ್ನುವ ಮೂಲಕ ಸಮಸ್ಯೆಯ ಗಂಭೀರತೆಯ ಬಗೆಗೆ ವಿಶ್ವ ನಾಯಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.