ಬೆಂಗಳೂರು: ಮನಸ್ಸು ಮಾಡಿದರೆ ಒಂಭತ್ತು ತಿಂಗಳಲ್ಲಿ ಮುಗಿಸಬಹುದಾಗಿದ್ದ ಜಕ್ಕೂರು ಬಳಿಯ ಕಾಮಗಾರಿಯೊಂದು ಬಿಬಿಎಂಪಿ ಮತ್ತು ರೈಲ್ವೆ ಅಧಿಕಾರಿಗಳ ಯಡವಟ್ಟಿನಿಂದ ಒಂಭತ್ತು ವರ್ಷ ಕಳೆದರೂ ನಿರಂತರವಾಗಿ ಸಾಗಿದೆ!
ಜಕ್ಕೂರು-ಯಲಹಂಕ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದಿಂದಾಗಿ ಕಳೆದ ಒಂಬತ್ತು ವರ್ಷಗಳಿಂದ ಹತ್ತಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಜಕ್ಕೂರು, ಮಾನ್ಯತಾ ಟೆಕ್‌ಪಾರ್ಕ್, ಶ್ರೀರಾಮಪುರ, ಸಂಪಿಗೆಹಳ್ಳಿ, ಸುರಭಿ ಬಡಾವಣೆ, ಶಿವನಹಳ್ಳಿ, ಟೆಲಿಕಾಂ ಬಡಾವಣೆ, ಯಲಹಂಕ ಭಾಗಗಳಿಗೆ ಪ್ರಯಾಣಿಸುವ 60 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಜಕ್ಕೂರಿನಿಂದ ಯಲಹಂಕ ನಡುವಿನ ಮೂರು ಕಿ.ಮೀ. ಮಾರ್ಗ ಕ್ರಮಿಸಲು 5ರಿಂದ 7 ನಿಮಿಷ ಸಾಕಾಗಿತ್ತು, ಆದರೆ ಈಗ ದಾರಿ ಹಾಳಾಗಿರುವ ಕಾರಣ ಪರ್ಯಾಯವಾಗಿ 6 ಕಿ.ಮೀ. ದೂರದ ಮಾರ್ಗ ಬಳಸಲಾಗುತ್ತಿದ್ದು, ಕ್ರಮಿಸಲು 45 ನಿಮಿಷ ಆಗುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಂಸದ ಡಿ.ವಿ. ಸದಾನಂದಗೌಡ ಮತ್ತು ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ಕೃಷ್ಣಭೈರೇಗೌಡ ಅವರಿಗೆ ಪತ್ರ ಬರೆದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 2010ರಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಅದರಂತೆ ಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಎಂಜಿನಿಯರಿಂಗ್ ವಿಭಾಗ ಸಿದ್ಧತೆ ನಡೆಸಿಕೊಂಡು, ಬಿಬಿಎಂಪಿಗೆ ಭೂಸ್ವಾಧೀನ ಪಡಿಸಿಕೊಡಲು ತಿಳಿಸಿತ್ತು. ಮೇಲ್ಸೇತುವೆ ನಿರ್ಮಾಣಕ್ಕಾಗಿ 40 ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಿಬಿಎಂಪಿ ತೀರ್ಮಾನಿಸಿ, ಅವುಗಳ ಪೈಕಿ 37 ಮನೆಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಉಳಿದ 3 ನಿವೇಶನಗಳ ಮಾಲಿಕರು ಹೆಚ್ಚಿನ ಭೂಸ್ವಾಧೀನ ಪರಿಹಾರಕ್ಕೆ ಕೋರ್ಟ್‌ನಲ್ಲಿ ಹೋರಾಟ ನಡೆಸಿ, ಕಾಮಗಾರಿಗೆ ತಡೆ ತಂದಿದ್ದಾರೆ. ಹಾಗಾಗಿ, ಒಂಬತ್ತು ವರ್ಷಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ.
Advertisement
ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಜಕ್ಕೂರು ರೈಲ್ವೆ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ನಿರ್ಮಿಸಲು ಯೋಜನೆ ರೂಪಿಸಿದ ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ, ಕಾಮಗಾರಿಗೆ ಪೂರ್ವಸಿದ್ಧತೆ ನಡೆಸದೆ ಕಾಮಗಾರಿ ಪ್ರಾರಂಭಿಸಿದ್ದರಿಂದ ಒಂಬತ್ತು ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ ಒಂಬತ್ತು ವರ್ಷವಾದರೂ ಪೂರ್ಣಗೊಂಡಿಲ್ಲ.
ಐದು ಪಟ್ಟು ವೆಚ್ಚ ಹೆಚ್ಚಳ:
2010ರಲ್ಲಿ ಪ್ರಸಕ್ತ ಕಾಮಗಾರಿಗೆ 20 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಆದರೆ, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ನೂರು ಕೋಟಿ ರೂ.ಗೆ ಏರಿಕೆಯಾಗಿದೆ. ಕಾಮಗಾರಿ ಪ್ರಾರಂಭಿಸಿದ ಬಳಿಕ ಭೂಸ್ವಾಧೀನಕ್ಕೆ ಮುಂದಾದ ಕಾರಣ ಪರಿಹಾರದ ಮೊತ್ತ ದುಪ್ಪಟವಾಗಿದೆ.
Related Articles
Advertisement
.ಲೋಕೇಶ್ ರಾಮ್