ಕಲಬುರಗಿ: ಆಧಾರ ಕಾರ್ಡ್‌ನಲ್ಲಿ ಏನಾದರೂ ವಿಳಾಸ ತಪ್ಪು, ಹೆಸರು ಅದಲು-ಬದಲು, ವಯಸ್ಸು ನಮೂದನೆಯಲ್ಲಿ ವ್ಯತ್ಯಾಸವಾದರೆ ಬ್ಯಾಂಕ್‌ನಲ್ಲಿ ಸ್ಥಾಪಿತವಾಗಿರುವ ಆಧಾರ ಕಾರ್ಡ್ ಕೇಂದ್ರ, ಸರ್ಕಾರದ ನೆಮ್ಮದಿ ಕೇಂದ್ರ ಹಾಗೂ ಇತರ ಕೇಂದ್ರಗಳಲ್ಲಿ ಬದಲಾವಣೆ ಮಾಡಬಹುದು. ಆದರೆ ಈಗ ವಯಸ್ಸು ಬದಲಾವಣೆ ಮಾಡುವ ಆಯ್ಕೆಯನ್ನು ತಾತ್ಕಾಲಿಕವಾಗಿ ತೆಗೆದು ಹಾಕಿರುವುದು ಹಲವರಿಗೆ ತೊಂದರೆ ಎದುರಾಗಿದೆ.
ಕಳೆದ ಡಿಸೆಂಬರ್ 31ರ ನಂತರ ವಯಸ್ಸು ಬದಲಾವಣೆಯನ್ನು ಆಯಾ ಕೇಂದ್ರಗಳಲ್ಲಿ ಬದಲಾವಣೆ ಮಾಡುವ ಆಯ್ಕೆ ತೆಗೆದು ಹಾಕಲಾಗಿದೆ. ಈಗೇನಿದ್ದರೂ ವಯಸ್ಸು ತಪ್ಪಾಗಿದ್ದರೆ ಸರಿಪಡಿಸಲು ಬೆಂಗಳೂರಿನ ಖನಿಜ ಭವನದಲ್ಲಿರುವ ಆಧಾರ ಪ್ರಾದೇಶಿಕ ಕಚೇರಿಗೆ ಹೋಗಬೇಕು. ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ದ ಸಹಾಯಕ ನಿರ್ದೇಶಕ ಅಶೋಕಕುಮಾರ ಈಗಾಗಲೇ ಆಯಾ ರಾಜ್ಯಗಳಿಗೆ ಈ ಕುರಿತು ಕಳುಹಿಸಿದ ಸುತ್ತೋಲೆ ಅನ್ವಯ ಜನವರಿ 1ರಿಂದ ಕಾರ್ಯಾನುಷ್ಠಾನಕ್ಕೆ ಬಂದಿದೆ. ವಿಳಾಸ ಬದಲಾವಣೆ, ಹೆಸರಿನಲ್ಲಿ ತಪ್ಪಾಗಿರುವುದನ್ನು ಎಂದಿನಂತೆ ಬದಲಾವಣೆ ಮಾಡಬಹುದು. ಆದರೆ ವಯಸ್ಸು ಬದಲಾವಣೆ ಮಾಡುವ ಆಯ್ಕೆಯನ್ನೇ ರದ್ದುಪಡಿಸಲಾಗಿದೆ. ಹೀಗಾಗಿ ಈಗ ವಯಸ್ಸು ಬದಲಾವಣೆ ಮಾಡಬೇಕೆಂದರೆ ಸೂಕ್ತ ದಾಖಲಾತಿಗಳೊಂದಿಗೆ ಬೆಂಗಳೂರಿಗೆ ತೆರಳಿಯೇ ಬದಲಾವಣೆ ಮಾಡಬೇಕು.
ಈ ಹಿಂದೆ ಆಧಾರ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಮನಸ್ಸಿಗೆ ಬಂದಂತೆ ವಯಸ್ಸನ್ನು ಆಧಾರ ಕಾರ್ಡ್‌ನಲ್ಲಿ ನಮೂದಿಸಲಾಗಿದೆ. 60 ವಯಸ್ಸಾಗಿದ್ದರೂ 45 ಇಲ್ಲವೇ 50 ಎಂಬುದಾಗಿ ನಮೂದಿಸಲಾಗಿದೆ. ಆಗ ಕಾರ್ಡ್‌ದಾರರು ಈ ಕುರಿತು ಸರಿಯಾಗಿ ಗಮನಿಸಿಲ್ಲ. ಈಗ ಏನಾದರೂ ಸರ್ಕಾರಿ ಸೌಲಭ್ಯ ಪಡೆಯಲು ಮುಂದಾದರೆ ಆಧಾರ ಕಾರ್ಡ್‌ದಲ್ಲಿ ವಯಸ್ಸು ಕಡಿಮೆ ಇರುವುದರಿಂದ ಸೌಲಭ್ಯದಿಂದ ವಂಚಿತರಾಗುವಂತೆ ಆಗಿದೆ. ವಯಸ್ಸು ಬದಲಾವಣೆ ಮಾಡಬೇಕೆಂದರೆ ಸ್ಥಳೀಯವಾಗಿ ಸಾಧ್ಯವಿಲ್ಲ.
ತೆಗೆದು ಹಾಕಿದ್ದು ಏಕೆ?: ಕೆಲವರು ನಿಗದಿತ ವಯಸ್ಸಾಗದಿದ್ದರೂ ಆಧಾರ್ ಕಾರ್ಡ್‌ನಲ್ಲಿ ಪದೇ-ಪದೇ ಬದಲಾವಣೆ ಮಾಡುತ್ತಿರುವುದರಿಂದ ಜತೆಗೆ ವಯಸ್ಸನ್ನು ತಪ್ಪಾಗಿ ನಮೂದಿಸಿ ಕೆಲವು ಸೌಲಭ್ಯ ಪಡೆಯುತ್ತಿರುವುದನ್ನು ಅವಲೋಕಿಸಿ ಸಾಧ್ಯವಾದ ಮಟ್ಟಿಗೆ ತಡೆಯಲು ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಹೊಸ ತಂತ್ರಾಂಶ ರೂಪಿಸಲಾಗುತ್ತಿದ್ದು, ಕೆಲವು ದಿನ ಮಾತ್ರ ಇದನ್ನು ಕಾರ್ಯರೂಪಕ್ಕೆ ತಂದು ಬದಲಾವಣೆಯಲ್ಲಿ ಇನ್ನಷ್ಟು ನಿಯಮ ಕಠಿಣಗೊಳಿಸಿ ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರದ ಕ್ರಮದಂತೆ ಆಧಾರ ಕಾರ್ಡ್‌ನಲ್ಲಿನ ವಯಸ್ಸು ಬದಲಾವಣೆ ಸ್ಥಳೀಯವಾಗಿ ಮಾಡಲಿಕ್ಕೆ ಅವಕಾಶವಿಲ್ಲ. ಈಗೇನಿದ್ದರೂ ಬೆಂಗಳೂರಿನಲ್ಲಿರುವ ಆಧಾರ ಪ್ರಾದೇಶಿಕ ಕೇಂದ್ರಕ್ಕೆ ಸೂಕ್ತ ದಾಖಲಾತಿಗಳೊಂದಿಗೆ ಹೋದಲ್ಲಿ ಮಾತ್ರ ಬದಲಾವಣೆ ಮಾಡಬಹುದಾಗಿದೆ.
• ಪ್ರಕಾಶ ಚಿಂಚೋಳಿಕರ್,
ಶಿಷ್ಠಾಚಾರ ತಹಶೀಲ್ದಾರ್, ಡಿಸಿ ಕಚೇರಿ ಕಲಬುರಗಿ
ಹಣಮಂತರಾವ ಭೈರಾಮಡಗಿ