Advertisement

ಕನೇರಿಯಲ್ಲಿ ಕಂಗೊಳಿಸಲಿದೆ ಕರ್ನಾಟಕ ಭವನ

03:11 PM Oct 10, 2022 | Team Udayavani |

ಹುಬ್ಬಳ್ಳಿ: ಧಾರ್ಮಿಕ, ಸಾಮಾಜಿಕ, ಸಾವಯವ ಕೃಷಿ, ದೇಸಿ ಗೋಸಾಕಣೆ ಕ್ರಾಂತಿಗೆ ತನ್ನದೇ ಕೊಡುಗೆ ನೀಡುತ್ತಿರುವ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಆವರಣದಲ್ಲಿ ಅಂದಾಜು 7 ಕೋಟಿ ರೂ.ವೆಚ್ಚದಲ್ಲಿ ಕರ್ನಾಟಕ ಭವನ ತಲೆ ಎತ್ತಲಿದೆ.

Advertisement

ಕರ್ನಾಟಕದಲ್ಲೂ ಅಸಂಖ್ಯಾತ ಭಕ್ತರನ್ನು ಹೊಂದಿರುವ ಶ್ರೀಮಠದಲ್ಲಿ ಭವನ ನಿರ್ಮಾಣದಿಂದ ರಾಜ್ಯದಿಂದ ಹೋಗುವ ಭಕ್ತರಿಗೆ ಇನ್ನಷ್ಟು ಅನುಕೂಲವಾಗಲಿದೆ. ಕರ್ನಾಟಕ ಸರಕಾರ ಈಗಾಗಲೇ 3 ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಿದೆ.

ದೇಶ ವಿವಿಧ ಧಾರ್ಮಿಕ ಕ್ಷೇತ್ರ, ಪ್ರಮುಖ ತಾಣಗಳಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ರಾಜ್ಯ ಸರಕಾರ ಮಹತ್ವ ನೀಡುತ್ತಲೇ ಬಂದಿದೆ. ತಿರುಪತಿ, ಶ್ರೀಶೈಲ, ಪಂಢರಪುರ, ಗಾಣಗಾಪುರ, ಮಂತ್ರಾಲಯ ಸೇರಿದಂತೆ ವಿವಿಧ ಕಡೆಗಳಲ್ಲಿ ಈಗಾಗಲೇ ಕರ್ನಾಟಕ ಭವನಗಳಿವೆ, ಇನ್ನು ಕೆಲವು ಕಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಕರ್ನಾಟಕದ ಅಸಂಖ್ಯಾತ ಭಕ್ತರನ್ನು ಸೆಳೆಯುತ್ತಿರುವ ಕನೇರಿಯಲ್ಲಿಯೂ ಕರ್ನಾಟಕ ಭವನ ನಿರ್ಮಾಣಗೊಳ್ಳುತ್ತಿದೆ.

ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಸಾವಯವ ಕೃಷಿ, ದೇಸಿ ಹಸು ಸಾಕಣೆ, ಕೃಷಿ-ಗೋವಿನ ಉತ್ಪನ್ನಗಳ ಮೌಲ್ಯವರ್ಧನೆ, ಸಾಮಾಜಿಕ ಸಾಮರಸ್ಯ ಚಿಂತನೆ, ಸತ್‌ ಸಮಾಜ ನಿರ್ಮಾಣದಂತಹ ಕಾರ್ಯಗಳಿಂದ ಉತ್ತರ ಕರ್ನಾಟಕವಷ್ಟೇ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸ್ವಾಮೀಜಿಯವರ ಚಿಂತನೆಗಳ ಪ್ರಭಾವಕ್ಕೊಳಗಾದವರು, ಅವರ ಚಿಂತನೆಗಳನ್ನು ಅಷ್ಟು ಇಷ್ಟು ಅಳವಡಿಕೆಗೆ ಮುಂದಾಗಿರುವವರ ಸಂಖ್ಯೆ ಅಧಿಕವಾಗಿದೆ. ಕನೇರಿಮಠದಲ್ಲಿ ನಡೆಯುತ್ತಿರುವ ಪ್ರಯೋಗ, ಯತ್ನಗಳನ್ನು ವೀಕ್ಷಿಸಲು, ಸ್ವಾಮೀಜಿಯವರನ್ನು ಕಂಡು ಚರ್ಚಿಸಲು ನಿತ್ಯವೂ ರಾಜ್ಯದ ಒಂದಿಲ್ಲೊಂದು ಭಾಗದ ಭಕ್ತರು, ರೈತರು ಶ್ರೀಮಠಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.

7 ಕೋಟಿ ರೂ.ವೆಚ್ಚದ ಯೋಜನೆ: ಕನೇರಿಮಠ ಕೇವಲ ಧಾರ್ಮಿಕ ಕಾರ್ಯಕ್ಕೆ ಮಾತ್ರ ಸೀಮಿತವಾಗಿರದೆ ರೈತರ ಕೃಷಿ ಬದುಕಿಗೆ, ದೇಸಿ ಉತ್ಪನ್ನಗಳ ಚಿಂತನೆಗಳಿಗೆ ಪ್ರಯೋಗಶಾಲೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಶ್ರೀಮಠದಲ್ಲಿನ ಪ್ರಯೋಗವನ್ನು ವೀಕ್ಷಿಸುವುದಕಷ್ಟೇ ಅಲ್ಲದೆ ಅಲ್ಲಿ ಕೆಲ ದಿನ ಇದ್ದು ತರಬೇತಿ ಪಡೆಯುವ, ಅಲ್ಲಿನ ಕೆಲವೊಂದು ಅಂಶಗಳನ್ನು ಅಳವಡಿಕೆ ಮಾಡಿಕೊಳ್ಳಬೇಕೆಂಬ ತುಡಿತ ಅನೇಕ ರಾಜ್ಯಗಳವರದ್ದು ಇದ್ದು, ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕದ ಅನೇಕರು ಇಂತಹ ಯತ್ನಕ್ಕೆ ಮುಂದಾಗಿದ್ದು ಇದೆ.

Advertisement

ತರಬೇತಿಗೆಂದು ಬರುವವರು, ಜತೆಗೆ ವರ್ಷದಿಂದ ವರ್ಷಕ್ಕೆ ಕರ್ನಾಟಕದಿಂದ ಬರುವ ಭಕ್ತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಭಕ್ತರಿಗೆ ಅನುಕೂಲವಾಗುವಂತೆ ಭವನವೊಂದನ್ನು ನಿರ್ಮಿಸಬೇಕೆಂಬ ಚಿಂತನೆ ಶ್ರೀಮಠದ್ದಾಗಿತ್ತು. ಅದಕ್ಕೆ ಪೂರಕವಾಗಿ ರಾಜ್ಯ ಸರಕಾರವೂ ಅನುದಾನಕ್ಕೆ ಮುಂದಾಗಿರುವುದು ಸಂತಸದ ವಿಚಾರವಾಗಿದೆ. ಕರ್ನಾಟಕ ಭವನಕ್ಕಾಗಿ ರಾಜ್ಯ ಸರಕಾರ ಅಂದಾಜು 3 ಕೋಟಿ ರೂ.ಗಳನ್ನು ಘೋಷಿಸಿದರೆ, ಶ್ರೀಮಠ ಅಂದಾಜು 7 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಯೋಜಿಸಿದೆ. ರಾಜ್ಯ ಸರಕಾರದ 3 ಕೋಟಿ ರೂ. ಅನುದಾನ ಅಲ್ಲದೆ ಉಳಿದ 4 ಕೋಟಿ ರೂ.ಗಳನ್ನು ಭರಿಸಲಿದ್ದು, ಮುಂದೆ ಸರಕಾರ ಇನ್ನಷ್ಟು ಅನುದಾನ ನೀಡುವ ನಿರೀಕ್ಷೆ ಹೊಂದಿದ್ದು, ಅದು ಸಾಧ್ಯವಾಗದಿದ್ದರೆ ದಾನಿಗಳ ನೆರವಿನೊಂದಿಗೆ ಅದನ್ನು ನಿರ್ಮಿಸಲು ನಿರ್ಧರಿಸಿದೆ.

ರಾಜ್ಯ ಸರಕಾರ 3 ಕೋಟಿ ರೂ.ಗಳ ಅನುದಾನ ಘೋಷಿಸಿದ್ದು, ಮೊದಲ ಹಂತದಲ್ಲಿ 1.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ಬಳಸಿದ ನಂತರದಲ್ಲಿ ಮತ್ತೂಂದು ಕಂತಿನ ಹಣ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

15-20 ಸಾವಿರ ಚ.ಅಡಿಯಲ್ಲಿ ಭವನ: ಕನೇರಿಯಲ್ಲಿ ನಿರ್ಮಾಣಗೊಳ್ಳಲಿರುವ ಕರ್ನಾಟಕ ಭವನ ಸುಮಾರು 15-20 ಸಾವಿರ ಚದರ ಅಡಿ ವಿಸ್ತೀರ್ಣ ಜಾಗದಲ್ಲಿ ಅರಳಿ ನಿಲ್ಲಲಿದೆ. ಭವನ ನಿರ್ಮಾಣದ ವಿನ್ಯಾಸ ಹೇಗಿರಬೇಕು ಎಂಬುದು ಸಹ ರೂಪುಗೊಂಡಿದೆ.

ಕನೇರಿಮಠದಲ್ಲಿರುವ ಅಡುಗೆ ಮನೆ ಹಿಂಭಾಗದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಯೋಜಿಸಲಾಗಿದೆ. ಕರ್ನಾಟಕ ಭವನದಲ್ಲಿ ಸುಮಾರು 5 ಸಾವಿರ ಚದರ ಅಡಿ ಜಾಗದಲ್ಲಿ ಅಡುಗೆ ಮನೆ ನಿರ್ಮಾಣ ಆಗಲಿದ್ದು, ಅದರಲ್ಲಿ ಅಡುಗೆ ತಯಾರು ವ್ಯವಸ್ಥೆ ಜತೆಗೆ ಬರುವ ಭಕ್ತರು, ರೈತರು, ಯಾತ್ರಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಮೇಲಿನ ಮಹಡಿಯಲ್ಲಿ ಉಳಿದುಕೊಳ್ಳುವುದಕ್ಕೆ ಕೋಣೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 20ಕ್ಕೂ ಹೆಚ್ಚು ಕೋಣೆಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.

ಪ್ರಸ್ತುತ ಕನೇರಿಮಠದಲ್ಲಿ ಭಕ್ತ ನಿವಾಸ ಇನ್ನಿತರೆ ಕಡೆ ಬರುವ ಭಕ್ತರು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ನಿತ್ಯ ಏನಿಲ್ಲವೆಂದರೂ 2,000-2,500 ಕ್ಕೂ ಅಧಿಕ ಭಕ್ತರು, ಪ್ರವಾಸಿಗರು ಆಗಮಿಸುತ್ತಿದ್ದು, ರಜೆ ಇಲ್ಲವೆ ವಾರಾಂತ್ಯಕ್ಕೆ ಈ ಸಂಖ್ಯೆ 10 ಸಾವಿರವರೆಗೂ ತಲುಪುತ್ತದೆ. ಇದರಲ್ಲಿ ಹಲವರು ಉಳಿದುಕೊಳ್ಳಲು ಬಯಸುತ್ತಿದ್ದಾರೆ. ಬಂದ ಭಕ್ತರೆಲ್ಲರಿಗೂ ಭೋಜನ ವ್ಯವಸ್ಥೆ ಇದ್ದು, ಉಳಿದುಕೊಳ್ಳುವುದಕ್ಕೆ ಸದ್ಯಕ್ಕೆ ಕೋಣೆಗಳ ಕೊರತೆ ಉಂಟಾಗುತ್ತಿದೆ. ಕರ್ನಾಟಕ ಭವನ ನಿರ್ಮಾಣದಿಂದ ಕೋಣೆಗಳ ಕೊರತೆ ನೀಗಿಸಲು, ಕರ್ನಾಟಕದಿಂದ ಹೋಗುವ ಭಕ್ತರು ಒಂದೆರಡು ದಿನ ಉಳಿದುಕೊಳ್ಳಲು ಅನುಕೂಲವಾದಂತಾಗಲಿದೆ.

ಇಂದು ಸಿಎಂ ಅಡಿಗಲ್ಲು..

ಮಹಾರಾಷ್ಟ್ರದ ಕನೇರಿಮಠದಲ್ಲಿ ನಿರ್ಮಾಣಗೊಳ್ಳಲಿರುವ ಕರ್ನಾಟಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.10ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೇಂದ್ರ-ರಾಜ್ಯ ಸರಕಾರದ ವಿವಿಧ ಸಚಿವರು, ಪ್ರಮುಖರು, ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶ್ರೀಮಠದಲ್ಲಿ ಕರ್ನಾಟಕದಿಂದ ಬರುವ ಭಕ್ತರಿಗೆ ತಂಗಲು ವ್ಯವಸ್ಥೆ ಮಾಡಬೇಕೆಂಬ ಚಿಂತೆನ ಇತ್ತು. ಅದಕ್ಕಾಗಿ ಶ್ರೀಮಠ ಅಂದಾಜು 7 ಕೋಟಿ ರೂ.ಗಳ ಯೋಜನೆ ರೂಪಿಸಿದೆ. ಕರ್ನಾಟಕ ಸರಕಾರ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ರೂ. ಗಳನ್ನು ಘೋಷಿಸಿರುವುದು ಸಂತಸ ಮೂಡಿಸಿದೆ. ಮೊದಲ ಕಂತಾಗಿ 1.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದ್ದು, ಭವನದ ಶಂಕು ಸ್ಥಾಪನೆ ನಂತರದಲ್ಲಿ ಕಾಮಗಾರಿ ಆರಂಭಿಸುತ್ತೇವೆ. ಆದಷ್ಟು ಶೀಘ್ರ ಹಾಗೂ ಸುಂದರವಾದ ಕರ್ನಾಟಕ ಭವನ ನಿರ್ಮಾಣ ನಮ್ಮ ಸಂಕಲ್ಪವಾಗಿದೆ.  –ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿಮಠ.

Advertisement

Udayavani is now on Telegram. Click here to join our channel and stay updated with the latest news.

Next