Advertisement

ದೇಶದಲ್ಲಿ ಒಂದೇ ಕಾನೂನು ತರಲು ಮುಂದಾಗಿ

03:23 PM Aug 21, 2017 | Team Udayavani |

ದಾವಣಗೆರೆ: ಒಂದು ದೇಶ ಒಂದೇ ಕಾನೂನು ಎಂಬ ನೀತಿಯನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ವಕೀಲ ಸಮುದಾಯದ ಮುಂದಿದೆ ಎಂದು ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ ಹೇಳಿದರು. 

Advertisement

ದಾವಣಗೆರೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಭಾನುವಾರ ಅಧಿವಕ್ತಾ ಪರಿಷತ್‌ ಬೆಳ್ಳಿ ಹಬ್ಬದ ಪ್ರಯುಕ್ತ ವಕೀಲರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ಒಂದೇ ರೀತಿಯ ಕಾನೂನು ಇದೆ. ಭಾರತದಲ್ಲಿ ಒಂದೇ ಕಾನೂನು ವ್ಯವಸ್ಥೆ ಇಲ್ಲ. ಏಕರೂಪ ಸಂಹಿತೆ ಬಗ್ಗೆಯೂ ಸುಪ್ರೀಂ ಕೋರ್ಟ್‌ ಸಹ ಹೇಳಿದೆ. ಒಂದು ದೇಶ ಹಾಗಾಗಿ ಒಂದೇ ರೀತಿಯ ಕಾನೂನು… ಎಂಬ ನೀತಿ ಜಾರಿಗೆ ತರುವಲ್ಲಿ ವಕೀಲ ಸಮುದಾಯ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಭಾರತದಲ್ಲಿ ಹಲವಾರು ಕಾಯ್ದೆ, ಕಾನೂನುಗಳಿವೆ. ಹಿಂದೂ, ಅಲ್ಪಸಂಖ್ಯಾತ ಕಾನೂನು ಜಾರಿಯಲ್ಲಿವೆ. ಅಲ್ಪಸಂಖ್ಯಾತ ಸಮುದಾಯದಲ್ಲಿರುವ ಸಿಖ್‌, ಬೌದ್ಧ, ಜೈನರಿಗೆ ಹಿಂದೂ ಕಾನೂನು ಅನ್ವಯವಾಗುತ್ತವೆ. ಹೀಗಾಗಿ ವಕೀಲರು ಒಂದು ದೇಶ, ಒಂದು ಕಾನೂನು ನೀತಿ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಪ್ರಸ್ತುತ ವಾತಾವರಣದಲ್ಲಿ ಕಾನೂನುಗಳ ಆಧಾರದ ಮೇಲಿನ ನ್ಯಾಯದಾನ ವ್ಯವಸ್ಥೆ ಇದೆ. ನೈಜ ನ್ಯಾಯ ದೊರೆಯುತ್ತಿಲ್ಲ. ಕಾನೂನು ಅಂಶಗಳ ಆಧಾರದಲ್ಲಿ ನೀಡಲಾಗುವ ನ್ಯಾಯಕ್ಕಿಂತಲೂ ನಿಜವಾಗಿ ನ್ಯಾಯ ಬಯಸಿ ಬರುವವರಿಗೆ ನ್ಯಾಯದಾನ ಆಗುವ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ವಕೀಲರು ಗಮನ ನೀಡಬೇಕು. ವೈಯಕ್ತಿಕ ವಿಚಾರಕ್ಕಿಂತಲೂ ರಾಷ್ಟ್ರಹಿತ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರಪಿತ ಮಹಾತ್ಮಗಾಂಧೀಜಿ, ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಬಾಯಿ ಪಟೇಲ್‌ರು ಸಹ ನ್ಯಾಯವಾದಿಗಳಾಗಿದ್ದವರು. ರಾಷ್ಟ್ರದ ಹಿಂತಚಿಂತನೆ
ಮೈಗೂಡಿಸಿಕೊಂಡು ವೈಯಕ್ತಿಕ, ಕೌಟಂಬಿಕ ವಿಚಾರಗಳ ಜೊತೆ ಜೊತೆಯಾಗಿಯೇ ದೇಶದ ಸ್ವಾತಂತ್ರ್ಯ, ಅಭಿವೃದ್ಧಿಯತ್ತ ಗಮನ ಹರಿಸಿದರು. ಅವರಂತೆಯೇ ವಕೀಲ ಸಮುದಾಯ ದೇಶದ ಬಗ್ಗ ಚಿಂತನೆ ನಡೆಸಬೇಕು. ಉದಾತ್ತ ಭಾರತೀಯ ಸಂಸ್ಕೃತಿಯ ಆಧಾರದಲ್ಲಿ ಪ್ರಾಮಾಣಿಕ, ಸಚ್ಚಾರಿತ್ರ್ಯದ ಭವ್ಯ ಭಾರತ ನಿರ್ಮಾಣ ಮಾಡಬೇಕು ಎಂದು ಆಶಿಸಿದರು.

ಸ್ವಾತಂತ್ರ್ಯ ನಂತರ 7 ದಶಕಗಳ ನಂತರವೂ ಮಕ್ಕಳು, ಮಹಿಳೆಯರು, ಬುಡಕಟ್ಟು ಜನರು, ಆದಿವಾಸಿಗಳು ನ್ಯಾಯದಿಂದ ವಂಚಿತರಾದ್ದಾರೆ.
ವಕೀಲ ಸಮುದಾಯ ನ್ಯಾಯ ವಂಚಿತ ಮಕ್ಕಳು, ಮಹಿಳೆಯರು, ಸಮಾಜದಲ್ಲಿನ ಶೋಷಿತರು, ಕಟ್ಟ ಕಡೆಯವರಿಗೂ ನ್ಯಾಯ ದೊರಕಿಸಿ
ಕೊಡುವಂತಾಗಬೇಕು. ಆ ಮಹತ್ತರ ಉದ್ದೇಶ, ಸಾಮಾಜಿಕ ಕಳಕಳಿ, ಕಾಳಜಿಯೊಂದಿಗೆ ಸಮಾಜ ಸೇವೆ ಮಾಡಬೇಕು ಎಂದು ತಿಳಿಸಿದರು.

Advertisement

ಮಹಿಳೆಯರನ್ನು ಸಶಕ್ತರನ್ನಾಗಿ ಮಾಡಬೇಕು ಎಂಬ ಮಾತು ಬಹಳಷ್ಟು ಕೇಳಿ ಬರುತ್ತಿವೆ. ಮಹಿಳೆಯರು  ಕುಶಲಮತಿ, ಬುದ್ಧಿವಂತರು, ಏಕಾಗ್ರತೆಯುಳ್ಳವರು. ಮಹಿಳೆಯರು ಯಾವುದರಲ್ಲೂ ಹಿಂದೆ ಬಿದ್ದವರಲ್ಲ. ವಿಶ್ವವಿದ್ಯಾಲಯಗಳಲ್ಲಿ ಅತಿ ಹೆಚ್ಚಿನ ಅಂಕ, ಚಿನ್ನದ ಪದಕ ಪಡೆಯುವವರಲ್ಲಿ ವಿದ್ಯಾರ್ಥಿನಿಯರೇ ಸದಾ ಮುಂದೆ ಇರುವುದನ್ನು ಕುಲಾಧಿಪತಿಯಾಗಿ ನಾನು ನೋಡಿದ್ದೇನೆ. ಮಹಿಳೆಯರನ್ನು ಸಶಕ್ತರನ್ನಾಗಿ ಮಾಡುವುದಕ್ಕಿಂತಲೂ ಅವರಿಗೆ ಒಂದೊಳ್ಳೆ, ಉತ್ತಮ ಅವಕಾಶ ಕಲ್ಪಿಸುವಂತಾಗಬೇಕು ಎಂದರು. ದೇಶದ ತಲಾಆದಾಯ ಲೆಕ್ಕ ಹಾಕುವುದಕ್ಕಿಂತಲೂ ಮಾನವೀಯತೆ, ಪ್ರಾಮಾಣಿಕತೆ ಪ್ರಮಾಣ ಅಳೆಯ  ಬೇಕು. ಮಾನವೀಯತೆ ಮತ್ತು ಪ್ರಾಮಾಣಿಕತೆ ಅಳಿದು ಹೋದರೆ ಇಡೀ ಭಾರತೀಯ ಸಂಸ್ಕೃತಿಯೇ ಕಳೆದು
ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಬದುಕಿರುವಷ್ಟು ಕಾಲ ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆ ಮಾಡಬೇಕು ಎಂದು ತಿಳಿಸಿದರು. 

ಅಧಿವಕ್ತಾ ಪರಿಷತ್‌ ರಾಷ್ಟ್ರೀಯ ಅಧ್ಯಕ್ಷ ವಿನಾಯಕ ದಿಕೀತ್‌ಜೀ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ, ಪರಿಷತ್ತು
ರಾಜ್ಯ ಅಧ್ಯಕ್ಷ ಎ. ಸೂರ್ಯಪ್ರಕಾಶ್‌, ಉಪಾಧ್ಯಕ್ಷ ವೈ. ಮಂಜಪ್ಪ ಕಾಕನೂರು, ಪ್ರಧಾನ ಕಾರ್ಯದರ್ಶಿ ಪ್ರಸನ್ನ ದೇಶಪಾಂಡೆ ಇತರರು ಇದ್ದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅಣಬೇರು ರಾಜಣ್ಣ ಸ್ವಾಗತಿಸಿದರು.

ಪಶು ಹತ್ಯೆಗೆ ಅವಕಾಶವಿಲ್ಲ
ಸಂವಿಧಾನದ ಕಲಂ 48ರ ಪ್ರಕಾರ ಪಶುಗಳ ಹತ್ಯೆ ಮಾಡುವಂತೆಯೇ ಇಲ್ಲ. ಆದರೆ, ಕೆಲವು ರಾಜಕಾರಣಿಗಳು ಗೋಮಾಂಸ ಸೇವನೆ ಮಾಡುವುದು ನಮ್ಮ ಹಕ್ಕು ಎಂದೇ ಪ್ರತಿಪಾದಿಸುತ್ತಾರೆ. ಅಚ್ಚರಿಯ ವಿಚಾರ ಎಂದರೆ ಸಂವಿಧಾನದಲ್ಲಿ ಪಶುಹತ್ಯೆ ಮಾಡುವುದೇ ತಪ್ಪು ಎಂದು ಸ್ಪಷ್ಟವಾಗಿ ಹೇಳಿರುವಾಗ ಗೋಮಾಂಸ ಸೇವನೆ ಹಕ್ಕು ಎನ್ನುವುದು ತಪ್ಪು ಎನ್ನುವುದು ಅನೇಕರಿಗೆ ಗೊತ್ತೇ ಇಲ್ಲ. ಸಂವಿಧಾನದ ಆಶಯ, ಕರ್ತವ್ಯ, ಪರಿಪಾಲನೆ
ಬಗ್ಗೆ ಮಾಹಿತಿಯೂ ಇಲ್ಲದೇ ಇದ್ದವರೂ ಸಹ ಅಧಿಕಾರವೇರುತ್ತಾರೆ ಎಂದು ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ ಅಭಿಪ್ರಾಯಪಟ್ಟರು.

ಹೆಚ್ಚಿನ ಜೋಷ್‌ ಇರಲಿ
ನಮ್ಮ ಭಾರತ ಮಾತೆಗೆ ಜೈಕಾರ ಕೂಗುವುದಕ್ಕೆ ಹಿಂದೆ ಮುಂದೆ ನೋಡಬಾರದು. ಭಾರತ್‌ ಮಾತಾ ಕೀ ಜೈ… ಎಂದು ಘೋಷಣೆ ಕೂಗುವ ಧ್ವನಿಯಲ್ಲಿ ದುಖಃದ ಛಾಯೆಯಂತಿರಬಾರದು. ಹೆಮ್ಮೆ, ಗೌರವದಿಂದ ಕೂಗಬೇಕು ಎಂದು ಹೇಳಿದ ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ ಮೂರು ಬಾರಿ ಜೋರಾಗಿ ಭಾರತ್‌ ಮಾತಾ ಕೀ… ಜೈ ಘೋಷಣೆ ಕೂಗಿಸಿದರು. 

ವಾಲಾ ಹೇಳಿದ ಕಥೆ…
ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ ತಾವು ವಕೀಲಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಬಂದಿದ್ದ ಎಮ್ಮೆ ಕಳುವಿನ ಕಥೆಯೊಂದನ್ನು ಹೇಳಿದರು. ಒಬ್ಬ ಎಮ್ಮೆ ಕದ್ದಿದ್ದನು. ಎಮ್ಮೆಯ ಮೂಲ ಮಾಲಿಕ ಹಾಗೂ ಎಮ್ಮೆ ಕದ್ದವರಿಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಗ್ರಾಮೀಣ ಪ್ರದೇಶದಿಂದ ಬಂದಿದ್ದ ನ್ಯಾಯಾಧೀಶರು, ಎಮ್ಮೆಯ ಹಗ್ಗ ಬಿಚ್ಚಿ, ಬಿಟ್ಟಾಗ ಅದು ಯಾರ ಮನೆಗೆ ಹೋಗುತ್ತದೆಯೋ ಅವರೇ ಎಮ್ಮೆಯ ನಿಜವಾದ ಮಾಲಿಕರು ಎಂಬ ನಿರ್ಧಾರಕ್ಕೆ ಬಂದರು. ಅದಕ್ಕೆ ಒಬ್ಬ ವಕೀಲರು ಒಪ್ಪಿದರೆ, ಇನ್ನೊಬ್ಬ ವಕೀಲರು ಒಪ್ಪಲಿಲ್ಲ. ನಮ್ಮಲ್ಲಿ ಕಾನೂನು ಅಂಶಗಳ ಆಧಾರದ ಮೇಲೆಯೇ ನ್ಯಾಯದಾನ ಆಗುತ್ತದೆ. ನೈಜ ನ್ಯಾಯದಾನ ಆಗದು ಎಂಬುದಕ್ಕೆ ಈ ಪ್ರಕರಣ ಉದಾಹರಣೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next