ಸಿದ್ದರಾಮಯ್ಯ ಎಲ್ಲ ವರ್ಗದವರನ್ನು ಖುಷಿಪಡಿಸುವ ಬಜೆಟ್ ಮಂಡಿಸಿದ್ದಾರೆ. ಕೇಂದ್ರವಾಗಲಿ, ರಾಜ್ಯವಾಗಲಿ ಜನರನ್ನು ಓಲೈಸುವ ಬಜೆಟ್ ಮಂಡಿಸುವುದು ಅತ್ಯಂತ ಸಹಜ. ಆದರೆ ಘೋಷಣೆಗಳಲ್ಲಿ ಎಷ್ಟು ಅನುಷ್ಠಾನವಾಗುತ್ತದೆ ಎಂಬುದೇ ಪ್ರಶ್ನೆ.
ಯಾವುದೇ ಸರಕಾರ ಚುನಾವಣೆ ಎದುರಿಗಿರುವಾಗ ಮಂಡಿಸುವ ಬಜೆಟ್‌ನಲ್ಲಿ ಜನರನ್ನು ಓಲೈಸುವ ಭರಪೂರ ಕೊಡುಗೆಗಳಿರುತ್ತವೆ ಎನ್ನುವ ಸಹಜ ವಿದ್ಯಮಾನಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2017-18ನೇ ಸಾಲಿನ ರಾಜ್ಯ ಬಜೆಟ್ ಹೊರತಾಗಿಲ್ಲ. ಮುಂದಿನ ಚುನಾವಣೆಗೂ ಮೊದಲು ಬಜೆಟ್ ಮಂಡನೆಗೆ ಅವಕಾಶವಿದ್ದರೂ, ಈಗಲೇ ಚುನಾವಣೆ ಮನಸ್ಸಿನಲ್ಲಿಟ್ಟು ಜನರನ್ನು ಖುಷಿಪಡಿಸುವ ಪ್ರಯತ್ನ ಮಾಡಿದ್ದಾರೆ. ತನ್ನದು ಸಾಮಾಜಿಕ ನ್ಯಾಯ ಪರಿಕಲ್ಪನೆಯ ಬಜೆಟ್ ಎಂದು ಸಿಎಂ ಹೇಳಿ ಕೊಂಡಿದ್ದರೂ ಇದು ಸಂಪೂರ್ಣ ನಿಜವಲ್ಲ ಎನ್ನುವುದನ್ನು ಬಜೆಟ್‌ನ ಜನಪ್ರಿಯ ಕೊಡುಗೆಗಳೇ ಹೇಳುತ್ತಿವೆ.
ರಾಜ್ಯ ಭೀಕರ ಬರಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಬರದ ಬವಣೆಯನ್ನು ತಪ್ಪಿಸುವ ತತ್‌ಕ್ಷಣದ ಮತ್ತು ದೀರ್ಘಾವಧಿ ಯೋಜನೆಗಳಿಗೆ ಆದ್ಯತೆ ನೀಡಬಹುದು ಎನ್ನುವ ನಿರೀಕ್ಷೆಯೂ ಇತ್ತು. ಇದು ಮಾತ್ರ ಸಂಪೂರ್ಣ ಹುಸಿಯಾಗಿದೆ. ರೈತರ ಸಾಲ ಮನ್ನಾ ಮಾಡಬೇಕೆಂಬ ಬಲವಾದ ಆಗ್ರಹ ಇದ್ದರೂ ಇದನ್ನು ಈಡೇರಿಸಿಲ್ಲ. ಬದಲಾಗಿ ರೈತರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಪ್ರಸ್ತಾವವಿದೆ.
ವಿವಾದಿತ ಎತ್ತಿನಹೊಳೆ ಯೋಜನೆಯಿಂದಾಗಿ ಸಿಟ್ಟಿಗೆ ದ್ದಿರುವ ಕರಾವಳಿಯ ಜನರನ್ನು ಸಮಾಧಾನಿಸಲು ಪಶ್ಚಿಮ ವಾಹಿನಿ ಯೋಜನೆಯನ್ನು ಜಾರಿಗೊಳಿಸಲಿದ್ದಾರೆಂಬ ನಿರೀಕ್ಷೆ ನಿಜವಾಗಿದೆ. ಬಜೆಟ್‌ನಲ್ಲಿ ಇದಕ್ಕಾಗಿ 100 ಕೋ. ರೂ. ಅನುದಾನ ಘೋಷಿಸಲಾಗಿದೆ. ಪಶ್ಚಿಮ ವಾಹಿನಿ ಕಡಿಮೆಯೆಂದರೂ 1000 ಕೋ. ರೂ. ವೆಚ್ಚ ಬೇಡುವ ಯೋಜನೆ. ಈ ದೃಷ್ಟಿಯಲ್ಲಿ ಹೇಳುವುದಾದರೆ ಯೋಜನೆಗೆ ಒದಗಿಸಿರುವ ಅನುದಾನ ಏನೇನೂ ಸಾಲದು. ಇದೇ ರೀತಿ ವೃದ್ಧಾಪ್ಯ ಪಿಂಚಣಿ ಮೊತ್ತ ಏರಿಕೆಯೂ ಹೆಚ್ಚಿನ ಪ್ರಯೋಜನಕಾರಿಯಲ್ಲ.
ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯದಲ್ಲೂ ಅಗ್ಗದ ದರದ ನಮ್ಮ ಕ್ಯಾಂಟೀನ್ ಈ ಬಜೆಟ್‌ನಲ್ಲಿ ಸಾಕಾರವಾಗಿದೆ. ಖಾಸಗಿ ಉದ್ಯಮಗಳ ಸಿ ಮತ್ತು ಡಿ ದರ್ಜೆಯ ನೌಕರಿಗಳನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ಮೀಸಲಿಡುವುದು, ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ದರಕ್ಕೆ ಲಗಾಮು ಹಾಕುವಂತಹ ಪ್ರಸ್ತಾವಗಳು ಯುವ ಜನತೆಯನ್ನು ಆಕರ್ಷಿಸುವ ಗುರಿಯಿರಿಸಿಕೊಂಡಿವೆ. ಲ್ಯಾಪ್‌ಟಾಪ್, ಟ್ಯಾಬ್, ಆ್ಯಪ್ ಮತ್ತಿತರ ಕೊಡುಗೆಗಳ ಮೂಲಕ ತಾನು ಟೆಕ್ ಪ್ರಿಯ ಎಂದು ತೋರಿಸಲು ಪ್ರಯತ್ನಿಸಿದ್ದಾರೆ.
ಬಹುಕಾಲದಿಂದ ಚರ್ಚೆಯಲ್ಲಿದ್ದ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಮುಖ್ಯಮಂತ್ರಿಗಳು ಹೆಚ್ಚಿನ ಒತ್ತು ನೀಡಿರುವಂತೆ ಕಾಣಿಸುತ್ತಿದೆ. ಆದರೆ ನಿರುದ್ಯೋಗ ನಿವಾರಣೆಗೆ ಕೈಗಾರಿಕೋದ್ಯಮ ಪ್ರೋತ್ಸಾಹಿಸುವಂತಹ ಪರಿಣಾಮಕಾರಿ ಕ್ರಮಗಳು ಕಾಣಿಸುತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕೋಲೂ ಮುರಿಯದೆ ಹಾವೂ ಸಾಯದಂತೆ ಸರ್ಕಸ್ ಮಾಡಿರುವ ಬಜೆಟ್ ಇದು. ಬಜೆಟ್‌ನಲ್ಲಿ ಘೋಷಣೆಗಳನ್ನು ಮಾಡುವುದು ಸುಲಭ. ಚುನಾವಣೆಗೆ ಇರುವುದು ಒಂದೇ ವರ್ಷ. ಇಷ್ಟು ಕಡಿಮೆ ಅವಧಿಯಲ್ಲಿ ಇವುಗಳಲ್ಲಿ ಎಷ್ಟನ್ನು ಅನುಷ್ಠಾನಕ್ಕೆ ತರಲು ಸಾಧ್ಯ ಎಂಬುದೇ ಪ್ರಶ್ನೆ. ಅದು ಅಸಾಧ್ಯವಾದಾಗ ಸರಕಾರವೇ ವಿಪಕ್ಷಗಳಿಗೆ ಚುನಾವಣಾ ಕಾಲಕ್ಕೆ ಅಸ್ತ್ರವೊಂದನ್ನು ಕೊಟ್ಟ ಹಾಗಾಗುತ್ತದೆ.