ಹೊಳೆನರಸೀಪುರ: ಒಬ್ಬ ಉತ್ತಮ ಶಿಕ್ಷಕನಾಗಲು ಸದಾ ಅಧ್ಯಯನ ಶೀಲತೆ, ಉತ್ತಮ ಸಂವಹನ ಕಲೆ ಬೆಳೆಸಿಕೊಳ್ಳಬೇಕೆಂದು ತಿಳಿಸಿ ಸಮಯ ಪಾಲನೆ ಹೊಂದಿದ್ದರೆ ಮಾತ್ರ ಉತ್ತಮ ಶಿಕ್ಷಕನಾಗಬಹುದೆಂದು ಮೈಸೂರಿನ ಮಹಾರಾಣಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ.ಸಿ.ಚಂದ್ರಶೇಖರ್ ನುಡಿದರು.
ತಾಲೂಕಿನ ಪಡುವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗಣಿತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ, ಪಡುವಲಹಿಪ್ಪೆ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ದ್ವಿತೀಯ ವರ್ಷದ ಎಂ.ಎಸ್ಸಿ.
-(ಗಣಿತಶಾಸ್ತ್ರ) ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ಮ್ಯಾಥೆಮ್ಯಾಟಿಟ್ಯೂಡ್-2019 ಎಂಬ ವಿಶ್ವ ವಿದ್ಯಾನಿಲಯ ಮಟ್ಟದ ಬೋಧನಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಗಣಿತದ ಬಗ್ಗೆ ಪೂರ್ಣ ಮಾಹಿತಿ ನೀಡಿದರು.
ಸ್ಪರ್ಧಿಗಳಿಗೆ ಮಾನದಂಡ: ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಗಣಿತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಮುಖ್ಯಸ್ಥರಾದ ಡಾ.ವಿನಯ್ ಕುಮಾರ್ ಪಿ.ಎನ್. ಸ್ಪರ್ಧೆಯ ಆಯೋಜನೆಯ ಮೂಲ ಉದ್ದೇಶ, ಸ್ಪರ್ಧಿಗಳನ್ನು ಅಳೆಯಲು ನಿಗ ಪಡಿಸಿರುವ ಮಾನದಂಡಗಳು ಹಾಗೂ ಅವುಗಳಿಗೆ ನೀಡುವ ಅಂಕಗಳನ್ನು ಕುರಿತು ತಿಳಿಸಿದರು.
ವಿದ್ಯಾರ್ಥಿಗಳ ಮನಸ್ಥಿತಿ ಅರಿಯಿರಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಡಿ. ನಾರಾಯಣ ಉತ್ತಮ ಶಿಕ್ಷಕನಾಗಲು ಕೇವಲ ಅಧ್ಯಯನ ಮಾತ್ರಕ್ಕೆ ಸೀಮಿತವಾಗದೇ, ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿತು ಅವರಿಗೆ ಮನಮುಟ್ಟುವಂತೆ ಬೋಧಿಸುವ ಕಲೆಯನ್ನು ರೂಢಿಸಿಕೊಳ್ಳಲು ಕಿವಿ ಮಾತು ಹೇಳಿದರು.
ತೀರ್ಪುಗಾರರಾಗಿ ಹೊಳೆನರಸೀಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಡಾ.ಕೆ.ಎಂ. ಈಶ್ವರಪ್ಪ, ಹರ್ಷವರ್ಧನ , ಹಾಸನದ ಸುಧಾಕರ, ಅವಿನಾಶ್ ಕಾವ್ಯ ಜಿ.ಕೆ., ಎಚ್.ಬಿ. ಶಿವ , ಶಿಲ್ಪಾ, ಸುನೀಲ್ ಸೌಮ್ಯ, ಚರಿತ ಹಾಗೂ ಸುಕನ್ಯ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಹೇಮಗಂಗೋತ್ರಿ, ಹಾಸನ, ಮಹಾರಾಣಿ ವಿಜ್ಞಾನ ಕಾಲೇಜು, ಮೈಸೂರು, ಯುವರಾಜ ಕಾಲೇಜು, ಮೈಸೂರು, ಜೆಎಸ್‌ಎಸ್ ಕಾಲೇಜು, ಮೈಸೂರು ಹಾಗೂ ಹೆಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸುಮಾರು 60 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ನಾಲ್ಕು ಗುಂಪುಗಳಲ್ಲಿ ಭಾಗವಹಿಸಿದ್ದರು.